ನಮ್ಮ ಮೆಟ್ರೋಗೆ ಮಹೇಶ್ವರರಾವ್‌ ಎಂಡಿ

| Published : Jan 12 2024, 01:46 AM IST

ಸಾರಾಂಶ

ನಮ್ಮ ಮೆಟ್ರೋಗೆ ಮಹೇಶ್ವರರಾವ್‌ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಹಿರಿಯ ಐಎಎಸ್‌ ಅಧಿಕಾರಿ ಎಂ. ಮಹೇಶ್ವರರಾವ್‌ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈವರೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಂಜುಂ ಪರ್ವೇಜ್‌ ಅವರಿಗೆ ಬಿಎಂಆರ್‌ಸಿಎಲ್‌ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಯನ್ನೂ ನೀಡಲಾಗಿತ್ತು. ಇದರಿಂದಾಗಿ ನಮ್ಮ ಮೆಟ್ರೋ ಯೋಜನೆ ಜಾರಿಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದಲ್ಲಿ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ಕುರಿತಂತೆ ಬೆಂಗಳೂರಿನ ಸಂಸದರು ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರ ನೇಮಕಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವ ಹರ್ದೀಪ್‌ಸಿಂಗ್‌ ಪುರಿ ಅವರಲ್ಲಿ ಮನವಿ ಮಾಡಿದ್ದರು.

ಅದರ ಜತೆಗೆ ಬಿಎಂಆರ್‌ಸಿಎಲ್‌ಗೆ ಮಹೇಶ್ವರರಾವ್‌ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವ ಕುರಿತಂತೆ ರಾಜ್ಯ ಸರ್ಕಾರ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಪ್ರಸ್ತಾವನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಗುರುವಾರ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಅನುಮತಿ ನೀಡಿ ಪತ್ರ ಕಳುಹಿಸಿತ್ತು. ಪತ್ರದಲ್ಲಿ ಇನ್ನು ಮುಂದೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾಯಿಸುವುದು ಅಥವಾ ಅವರಿಗೆ ಹೆಚ್ಚುವರಿ ಹೊಣೆ ನೀಡುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ ಎಂಬ ಷರತ್ತನ್ನು ವಿಧಿಸಲಾಗಿದೆ.

ಅಂಜುಂ ಪರ್ವೇಜ್‌ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೇ ಮುಂದುವರೆಯಲಿದ್ದಾರೆ.