ಸಾರಾಂಶ
- ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬ ಸೊರಬ ತಾಲೂಕಿನ ಹರೀಶಿ ಗ್ರಾಮದ ಆದಿತ್ಯ ಹೆಗಡೆ ಹೆಸರಿನ ಕ್ರಿಕೆಟ್ ಆಟಗಾರ ಸ್ಕಾಟ್ಲೆಂಡ್ ರಾಷ್ಟ್ರದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಸ್ಕಾಟ್ಲೆಂಟ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಅವರು, ಐಸಿಸಿಯು-19 ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರತಿಭೆ ಮೆರೆಯಲು ಅವಕಾಶ ಗಿಟ್ಟಿಸಿದ್ದಾರೆ.ವಿಶ್ವಾದ್ಯಂತ ಕ್ರಿಕೆಟ್ ಪ್ರತಿಭೆ ಪ್ರದರ್ಶನಕ್ಕೆ ತಯಾರಿ ನಡೆಸಿ, ಸಿದ್ಧರಾಗಿದ್ದಾರೆ. ತಾನು ಹುಟ್ಟಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹರೀಶಿ ಗ್ರಾಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಜನವರಿ 19ರಿಂದ ಫೆಬ್ರವರಿ 11 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿಯು-19 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಒಟ್ಟು 8 ತಂಡಗಳಲ್ಲಿ ಸ್ಕಾಟ್ಲೆಂಡ್ ಕೂಡ ಒಂದಾಗಿದೆ. ಇದರಲ್ಲಿ 18 ವರ್ಷ ವಯಸ್ಸಿನ ಆದಿತ್ಯ ಹೆಗಡೆ ಆಲ್‌ರೌಂಡ್ ಆಟಗಾರ ಎಂದು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಹೊರ ರಾಷ್ಟ್ರದಲ್ಲಿ ಮೊದಲ ಬಾರಿಗೆ ತಾಲೂಕಿನ ಹರೀಶಿ ಎಂಬ ಪುಟ್ಟ ಗ್ರಾಮದ ಪೋರ ಆಡುತ್ತಿರುವುದು ದೇಶ, ರಾಜ್ಯ, ಜಿಲ್ಲೆ ಹಾಗೂ ಗ್ರಾಮಕ್ಕೆ ಹೆಗ್ಗಳಿಕೆ ವಿಷಯವಾಗಿದೆ.ಶಿವಮೊಗ್ಗ ಜಿಲ್ಲೆ ಪ್ರತಿಭೆ: ಚಂದ್ರಗುತ್ತಿ ಹೋಬಳಿ ಹರೀಶಿ ಗ್ರಾಮದ ಡಾ. ವಿಜಯ ಹೆಗಡೆ ಮತ್ತು ಶುಭ ಹೆಗಡೆ ದಂಪತಿ ಪುತ್ರ ಈ ಆದಿತ್ಯ ಹೆಗಡೆ. ಡಾ. ವಿಜಯ ಹೆಗಡೆ ಹಲವು ವರ್ಷಗಳಿಂದ ಸ್ಕಾಟ್ಲೆಂಡ್‌ನ ಅಬರ್ಡೀನ್ ಎಂಬಲ್ಲಿ ವೈದ್ಯರಾಗಿದ್ದಾರೆ. ಉತ್ತರ ಯೂರೋಪ್ ಖಂಡದಲ್ಲಿರುವ ಯುನೈಟೆಡ್ ಕಿಂಗ್‌ಡಮ್ ಒಕ್ಕೂಟದ ಒಟ್ಟು 790 ದ್ವೀಪಗಳನ್ನು ಹೊಂದಿರುವ ಸ್ಕಾಟ್ಲೆಂಡ್ ರಾಷ್ಟ್ರದಲ್ಲಿ ಡರ್ಬಿ ಮತ್ತು ಫುಟ್‌ಬಾಲ್ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಹೀಗಿದ್ದೂ ಆದಿತ್ಯ ಅವರು ಸ್ಕಾಟ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಎಡಗೈ ಬ್ಯಾಟ್ಸ್ಮನ್, ಬೌಲರ್: ಆದಿತ್ಯ ಲೆಫ್ಟ್ ಹ್ಯಾಂಡ್ ಬ್ಯಾಪ್ಸ್‌ಮನ್ ಮತ್ತು ಬೌಲರ್. ಸ್ಕಾಟ್ಲೆಂಡ್‌ನ ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್ ಮತ್ತು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆ ಅಲ್ಲಿನ ಕ್ರಿಕೆಟ್ ಆಯ್ಕೆ ಸಮಿತಿ ಅಂಡರ್-19 ತಂಡಕ್ಕೆ ಆಯ್ಕೆ ಮಾಡಿದೆ. ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಕಳೆದ 3 ತಿಂಗಳ ಹಿಂದೆ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ತಾಯಿ ಶುಭ ಹೆಗಡೆ ತವರು ಮನೆ ಶಿವಮೊಗ್ಗ. ಹೀಗಾಗಿ, ಶಾಲಾ ರಜಾ ದಿನಗಳಲ್ಲಿ ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯ ನಾಗರಾಜ್ ಹೆಚ್ಚಿನ ತರಬೇತಿ ನೀಡಿ, ಪರಿಪೂರ್ಣ ಆಟಗಾರನನ್ನಾಗಿ ರೂಪಿಸಿದ್ದಾರೆ. ಇಂದಿಗೂ ನಾಗರಾಜ್ ಅವರೇ ಕೋಚ್ ಅಂತಾರೆ ಆದಿತ್ಯ.ಆದಿತ್ಯ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ ಕಾರಣ ಡಾ. ವಿಜಯ ಹೆಗಡೆ ತರಬೇತಿ ನೀಡಲು ನಿರ್ಧರಿಸಿದರು. ತಾವಿದ್ದ ನೆಲದಲ್ಲಿ ರಣಜಿ ಆಟಗಾರ ಅಂಜು ಮದಕವಿ, ಸಂಜು ಮದಕವಿ ಎಂಬವರು ಕೋಚ್ ಆಗಿ ದೊರೆತರು. ಅವರ ಬಳಿ ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್, ಬೌಲಿಂಗ್ ಪರಿಣಿತಿ ಪಡೆದರು. ಮಗನ ಕ್ರಿಕೆಟ್ ಆಸಕ್ತಿಗೆ ಪ್ರೋತ್ಸಾಹವಾಗಿರಲಿ ಎಂದು ತಾವೂ ಕೂಡ ಕ್ರಿಕೆಟ್ ಆಟವನ್ನು ಆಡುತ್ತಾರೆ. ಅಲ್ಲದೇ, ಅಬರ್ಡೀನ್ ಕ್ರಿಕೆಟ್ ಟೀಮ್‌ನ ಮೋಟಿವೆಟರ್ ಆಗಿ ಸ್ವಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.- - -
ಕೋಟ್ಸ್ ಅಂಡರ್ 19 ವಿಶ್ವಕಪ್‌ಗೆ ಆಯ್ಕೆ ಆಗಿರುವುದಕ್ಕೆ ಸಂತಸ ತಂದಿದೆ. ಕ್ರಿಕೆಟ್‌ನ ಆಸಕ್ತಿ ಮತ್ತು ಉತ್ತಮ ಪ್ರದರ್ಶನ ತೋರಲು ಕರ್ನಾಟಕದ ಕೋಚರ್‌ಗಳು ಕಾರಣ. ಕನ್ನಡನಾಡು ಮತ್ತು ಹುಟ್ಟಿ ಬೆಳೆದ ಹರೀಶಿ ನೆಲದ ಸೊಗಡನ್ನು ಎಂದಿಗೂ ಮರೆಯುವುದಿಲ್ಲ. ಭಾರತ ಬಲಿಷ್ಠ ತಂಡವಾಗಿದ್ದು, ಅವರನ್ನು ಎದುರಿಸುವುದು ಕಠಿಣ ಸವಾಲು. ಸೂಪರ್ ಸಿಕ್ಸ್ ಹಂತದಲ್ಲಿ ಭಾರತವನ್ನು ಎದುರಿಸುವ ಅವಕಾಶ ದೊರೆತರೆ ಅದೇ ನನ್ನ ಸುದೈವ. ಬೂಮ್ರಾ ನನ್ನ ನೆಚ್ಚಿನ ಬೌಲರ್. ಅವರಿಂದ ಕಲಿಯುವುದು ಬಹಷ್ಟಿದೆ– ಆದಿತ್ಯ, ಸ್ಕಾಟ್ಲೆಂಡ್ ತಂಡದ ಆಟಗಾರ, ಅಂಡರ್-19 ವಿಶ್ವಕಪ್- - -
-23ಕೆಪಿಸೊರಬ02: ಆದಿತ್ಯ-23ಕೆಪಿಸೊರಬ03: ಆದಿತ್ಯನ ಬ್ಯಾಟಿಂಗ್ ಶೈಲಿ.-23ಕೆಪಿಸೊರಬ04: ಪೋಷಕರೊಂದಿಗೆ ಕ್ರಿಕೆಟ್ ಪಟು ಆದಿತ್ಯ