ಸಾರಾಂಶ
ಹಾವೇರಿ: ಕೇಂದ್ರ ಸರ್ಕಾರ ಐಸಿಡಿಎಸ್ ಕಾರ್ಯಕ್ರಮವನ್ನು ಪುನರ್ ವಿಮರ್ಶೆ ಮಾಡುವ ಅಗತ್ಯವಿದೆ. ಬಹಳ ವರ್ಷದ ಕಾರ್ಯಕ್ರಮ ಇದಾಗಿದ್ದು, ಆಡಳಿತಾತ್ಮಕ ಬದಲಾವಣೆ ಹಾಗೂ ಬಜೆಟ್ ಹೆಚ್ಚಳ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಇಲ್ಲಿಯ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಶನಿವಾರ ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಗೌರವ ಧನದಲ್ಲಿ ದುಡಿಯುವ ಅಂಗನವಾಡಿ ನೌಕರರ, ಬಿಸಿಯೂಟ ತಯಾರಕರ ಮತ್ತು ಸಂಜೀವಿನಿ ಗ್ರಾಮ ಪಂಚಾಯಿತಿ ಮಹಿಳಾ ಒಕ್ಕೂಟದ ನೌಕರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಕ್ಕಳು ಹುಟ್ಟುವುದು, ಅಂಗನವಾಡಿಗೆ ಹೋಗುವುದು, ದೊಡ್ಡವರಾಗುವುದು ನಿಲ್ಲುವುದಿಲ್ಲ. ಶಾಲೆ, ಕಾಲೇಜು ಶಿಕ್ಷಣ ಕಲಿಯುತ್ತವೆ. ಮಕ್ಕಳ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಬದುಕು ಹಸನಾಗಬೇಕು. ಸ್ವಾಭಿಮಾನದ ಹಾಗೂ ಸ್ವಾವಲಂಬನೆಯ ಬದುಕು ನಿಮ್ಮದಾಗಬೇಕು. ಆ ನಿಟ್ಟಿನಲ್ಲಿ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ನಿಮ್ಮ ಒಳ್ಳೆಯತನದಲ್ಲಿ ಮಕ್ಕಳ ಭವಿಷ್ಯ, ಸಮಾಜದ ಭವಿಷ್ಯ, ದೇಶದ ಭವಿಷ್ಯ ಇದೆ ಎಂದು ಹೇಳಿದರು.ಈ ಸಮಾಜದಲ್ಲಿ ತಾಯಿ ಮಗುವಿನ ಸಂಬಂಧ ಅತ್ಯಂತ ಶೇಷ್ಠ. ಮನುಷ್ಯನ ಜನ್ಮಪೂರ್ವ ಸಂಬಂಧ ತಾಯಿ ಮಗುವಿನ ನಡುವೆ ಮಾತ್ರ ಇರುತ್ತದೆ. ಆ ನಂತರ ತಂದೆ, ಅಣ್ಣ, ಬಂಧು ಬಳಗ ಎಲ್ಲ. ಆ ತಾಯಿ ತನ್ನ ಚಿಕ್ಕ ಮಗುವನ್ನು ಇನ್ನೊಂದು ತಾಯಿಯ ಬಳಿಗೆ ಕಳುಹಿಸುತ್ತಾಳೆ. ಅಂಗನವಾಡಿ ತಾಯಂದಿರು ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆ ವಿದ್ಯಾಬುದ್ದಿ ಕೊಟ್ಟು ಕಲಿಸುವ ನೀವು ಶೇಷ್ಠರು ಎಂದು ಹೇಳಿದರು.
ಈ ದೇಶದಲ್ಲಿ ಮಕ್ಕಳ ಭವಿಷ್ಯವನ್ನು ನಿರ್ಧಾರ ಮಾಡುವ, ರೂಪಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಈ ದೇಶದ ಭವಿಷ್ಯವನ್ನು ರಾಜಕಾರಣಿಗಳು, ಶಾಸಕರು, ಸಂಸದರು ಬರೆಯುವುದಿಲ್ಲ. ತಾಯಂದಿರು, ಅಂಗನವಾಡಿ ಕಾರ್ಯಕರ್ತರು ಬರೆಯುತ್ತಾರೆ. ಅವರು ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಯಾವ ರೀತಿಯ ಪಾಠ ಮಾಡುತ್ತಾರೆ. ಆ ರೀತಿ ಮಕ್ಕಳು ಬೆಳೆಯುತ್ತಾರೆ ಎಂದರು.ನನ್ನ ಮುಖ್ಯಮಂತ್ರಿಯ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡುವ ಕ್ರಾಂತಿಕಾರಕ ನಿರ್ಧಾರವನ್ನು ನಾನು ಮಾಡಿದ್ದೇನೆ. ನಿಮ್ಮ ಹಿರಿತನಕ್ಕೆ ತಕ್ಕಂತೆ ಗೌರವ ಧನ ಹೆಚ್ಚಳ ಮಾಡಿದ್ದೇನೆ. ನೀವು ಅತ್ಯಂತ ಮಹತ್ವದ ಕೆಲಸ ಮಾಡುತ್ತಿದ್ದೀರಿ, ನೀವು ನಾನು ಅಂಗನವಾಡಿಯ ಮುಖ್ಯಸ್ಥ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನೀವು ಮಕ್ಕಳ ಭವಿಷ್ಯವನ್ನು ಬರೆಯುವವರು, ಭವಿಷ್ಯ ಬರೆಯುವವರು ಕಾರ್ಯಕರ್ತರು ಹೇಗಾಗುತ್ತಾರೆ. ದೇವರಾಗುತ್ತಾರೆ ಎಂದು ಹೇಳಿದರು.ನಿಮ್ಮ ಮೂರು ದಶಕಗಳ ಸೇವೆಗೆ ಸೂಕ್ತ ಸ್ಥಾನ ಮಾನ ಹಾಗೂ ಗೌರವವನ್ನು ಕೊಡಲೇಬೇಕಾಗುತ್ತದೆ. ನಿಮ್ಮ ಧ್ವನಿಯಾಗಿ ನಿಮ್ಮ ಸಹೋದರ ಇದ್ದಾನೆ ಎಂದು ತಿಳಿಯಿರಿ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ. ನೀವು ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಎಂದು ಹೇಳಿದರು.
ನಾನು ಚಿಕ್ಕವನಿದ್ದಾಗ ಅಂಗನವಾಡಿಗೆ ಹೋಗಿ ಕಲಿತು ಬಂದಿದ್ದೇನೆ. ಈಗ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ನಾವು ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದೇವೆ. ನಾನು ಸಿಎಂ ಇದ್ದಾಗ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿ ಮಾಡಿದ್ದೆ. ಅದರಲ್ಲಿ ಒಂದು ಲಕ್ಷ ರು. ರಾಜ್ಯ ಸರ್ಕಾರದ್ದು, ನಾಲ್ಕು ಲಕ್ಷ ರು. ಬಡ್ಡಿ ರಹಿತ ಸಾಲ ನೀಡುವ ಯೋಜನೆ. ಈ ಯೋಜನೆ ಮೂಲಕ ಹಾವೇರಿ ಜಿಲ್ಲೆಗೆ 54 ಕೋಟಿ ರು. ತಂದಿದ್ದೆವು. ಅದು ಪ್ರತಿ ವರ್ಷ ಹೆಚ್ಚಾಗಬೇಕು. ಮಹಿಳೆಯರಲ್ಲಿ ಸಾಮರ್ಥ್ಯ ಇದೆ. ಅದನ್ನು ಗುರುತಿಸುವ ಕೆಲಸ ಆಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡರ, ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಇತರರು ಇದ್ದರು.