ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಆನೆ ಮಾನವ ಸಂಘರ್ಷ ಉಪಶಮನಗೊಳಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರಗಳ ಕುರಿತು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮೇಲಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಕಳುಹಿಸಲಾಗುವುದೆಂದು ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವಿಭಾಗದ ಉಪಸಂರಕ್ಷಣಾಧಿಕಾರಿ ಬಾಸ್ಕರ್ ಹೇಳಿದ್ದಾರೆ.ಗುರುವಾರ ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾಫಿ ಬೆಳೆಗಾರರು ಮತ್ತು ಅರಣ್ಯ ಇಲಾಖಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಡಾನೆ ಓಡಿಸುವ ಸಂದರ್ಭದಲ್ಲಿ ಇಲಾಖೆಯವರಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಬೇಕಾಗುವ ಆಬ್ಯುಲೆನ್ಸ್ ವಾಹನ ಒದಗಿಸುವ ಬಗ್ಗೆ ಘೋಷಣೆ, ಒಂದೂವರೆ ವರ್ಷದ ಹಿಂದೆ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಮರುಪರಿಶೀಲನೆ ಮತ್ತು ನಿಯಮಿತವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಹೇಳಿದರು.ಈಗಾಗಲೇ ಆನೆ ಓಡಿಸುವ ಕಾರ್ಯಚರಣೆ ಚಾಲ್ತಿಯಲ್ಲಿದ್ದು, ಇದು ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕು ಯಾವುದೇ ಸಂದರ್ಭದಲ್ಲಿ ಮಾನವ ಜೀವಹಾನಿ ಆಗಬಾರದೆಂಬುದು ನಮ್ಮ ಕಾಳಜಿಯಾಗಿದೆ. ಕಾಡಾನೆ ಓಡಿಸುವ ಕಾರ್ಯಾಚರಣೆ ಸಂದರ್ಭ ತೆಗೆದುಕೊಳ್ಳಬೇಕಾದ ಕ್ರಮಗಳ ಆರ್‌ಆರ್‌ಟಿ ಜವಾಬ್ದಾರಿ ನೀಡಿರುವುದಾಗಿ ಹೇಳಿದರು.
ಈಗಾಗಲೇ ಇಲಾಖೆ ವತಿಯಿಂದ ವಿರಾಜಪೇಟೆ ಮತ್ತು ಮಡಿಕೇರಿ ವಿಭಾಗದಲ್ಲಿ ಕ್ರಮವಾಗಿ 130 ಮತ್ತು 65 ಆನೆಗಳು ಪತ್ತೆಯಾಗಿದ್ದು, ಇದರಲ್ಲಿ ವಿರಾಜಪೇಟೆ ವ್ಯಾಪ್ತಿಯಲ್ಲಿ ಕೇವಲ 5 ಆನೆಗಳು ಅರಣ್ಯದಲ್ಲಿದ್ದರೆ, 125 ಆನೆಗಳು ತೋಟಗಳಲ್ಲಿ ಬೀಡುಬಿಟ್ಟಿವೆ. ಮಡಿಕೇರಿ ವಿಭಾಗದಲ್ಲಿ 25 ಆನೆಗಳು ಕಾಡಿನಲ್ಲಿದ್ದರೆ, ಉಳಿದ ಆನೆಗಳು ತೋಟಗಳಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಬಹಿರಂಗ ಪಡಿಸಿದರು.ಪ್ರಾಸ್ತಾವಿಕ ಮಾತನಾಡಿದ ಕೆದಕಲ್ ಗ್ರಾಮ ಪಂಚಾಯಿತಿ ಸದಸ್ಯ ಜಿ.ಡಿ.ಶಿವಶಂಕರ್, ಎಲ್ಲ ಇಲಾಖೆಗಳಲ್ಲಿ ಜನಸ್ಪಂದನ ಮತ್ತು ಜನಸಂಪರ್ಕ ಸಭೆಗಳನ್ನು ಕನಿಷ್ಠ 3 ತಿಂಗಳಿಗೊಮ್ಮೆ ಮಾಡುತ್ತಿದ್ದು, ಅರಣ್ಯ ಇಲಾಖೆಯಲ್ಲಿ ಯಾಕಿಲ್ಲವೆಂದು ಪ್ರಶ್ನಿಸಿದರು. 3 ತಿಂಗಳಿಗೊಮ್ಮೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕೆಂದು ಆಗ್ರಹಿಸಿದರು.
ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಗೆ ಆನೆ ಓಡಿಸುವ ಸಂದರ್ಭ ಯಾವುದೇ ರಕ್ಷಣೆ ಇಲ್ಲ ಎಂದ ಕೊರವಂಡ ಸಂತೋಷ್ ಪೂವಯ್ಯ, ನಿಮ್ಮ ಸಿಬ್ಬಂದಿ ರಕ್ಷಣೆ ಮಾಡಿಕೊಳ್ಳಲಾಗದ ಇಲಾಖೆ ಆನೆಗಳಿಂದ ಆಗುವ ಹಾನಿ ಮಾನವ ಜೀವಹಾನಿ ಹೇಗೆ ತಪ್ಪಿಸುವಿರಿ ಎಂದು ಪ್ರಶ್ನಿಸಿದರು.ಕಾಫಿ ಬೆಳೆಗಾರ ಶ್ರೀನಾಥ್ ಮಾತನಾಡಿ, ಅರಣ್ಯ ಭವನ ಅಥವಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಭೆಗೆ ನಮಗೂ ಪ್ರಾತಿನಿಧ್ಯ ಬೇಕು ಎಂದರು.
ಚೆಪ್ಪುಡಿರ ಸತೀಶ್ ಮಾತನಾಡಿ ಸಭೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಕೂಡ ನನ್ನ ತೋಟದಲ್ಲಿ 6ಕ್ಕಿಂತಲ್ಲೂ ಹೆಚ್ಚು ಆನೆಗಳು ಬಿಡುಬಿಟ್ಟಿದ್ದು, ಪರಿಹಾರ ಏನೆಂಬುದನ್ನು ಪ್ರಶ್ನಿಸಿದರು.ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ ಹಿಂದಿನ ಸಭೆಗಳ ತೀರ್ಮಾನಗಳು ಯಾಕೆ ಕಾರ್ಯರೂಪಕ್ಕೆ ಬಂದಿಲ್ಲವೆಂದು ಪ್ರಶ್ನಿಸಿದರು.
ಕಾಫಿಬೆಳೆಗಾರ ಕೆ.ಕೆ.ಬೆಳಿಯಪ್ಪ ಮಾತನಾಡಿ, ಇಲಾಖೆಯಿಂದ ನಮ್ಮ ತಾಳ್ಮೆಪರೀಕ್ಷಿಸುವ ಕೆಲಸವಾಗುತ್ತಿದೆ ಎಂದರು.ಕೊಡಗರಹಳ್ಳಿಯ ಕಾಫಿ ಬೆಳೆಗಾರ ಸಂಜಯ್ ಸರಳಾಯ, ಕಾಫಿ ಬೆಳೆಗಾರ ಮೋಹನ್‌ದಾಸ್ ಮಾತನಾಡಿದರು.
ಕೊಡಗರಹಳ್ಳಿ, ಕಂಬಿಬಾಣೆ, ನಾಕೂರು ಶಿರಂಗಾಲ, ಕೆದಕಲ್, ಹೊರೂರು, ಕಾರೆಕೊಲ್ಲಿ, ಭೂತನಕಾಡು, ಮತ್ತಿಕಾಡು, ಚೌಡಿಕಾಡು ವ್ಯಾಪ್ತಿಯ ಕಾಫಿಬೆಳೆಗಾರರು ಪಾಲ್ಗೊಂಡು ತಮ್ಮ ಕಷ್ಟನಷ್ಟಗಳನ್ನು ತೆರೆದಿಟ್ಟರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಸಿ. ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್‌ಕುಮಾರ್, ಆರ್‌ಆರ್‌ಟಿ ತಂಡದ ಮುಖ್ಯಸ್ಥ ಸಹಾಯಕ ವಲಯ ಅರಣ್ಯಾಧಿಕಾರಿ ದೇವಯ್ಯ, ಸಿದ್ದರಾಮ, ಸುಂಟಿಕೊಪ್ಪ ಅಪರಾಧ ವಿಭಾಗದ ಎಸ್‌ಐ ಸ್ವಾಮಿ, ಎಎಸ್‌ಐ ತೀರ್ಥಕುಮಾರ್ ಸಿಬ್ಬಂದಿ ಇದ್ದರು.