ಕೇವಲ ಹಣದಿಂದಲೇ ಗುಣಾತ್ಮಕ ಶಿಕ್ಷಣ ಸಿಗಲಿದೆ ಎನ್ನುವುದು ಕೇವಲ ಭ್ರಮೆ, ದೇಶ ಕಟ್ಟುವಂತಹ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ದೇಶಕ್ಕೆ ಕೊಡುಗೆಯಾಗಿ ನೀಡುವುದೇ ಶಿಕ್ಷಕರ ಮೇಲಿನ ಬಹುದೊಡ್ಡ ಜವಾಬ್ದಾರಿ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಅಭಿಪ್ರಾಯಪಟ್ಟರು.

ಬ್ಯಾಡಗಿ: ಕೇವಲ ಹಣದಿಂದಲೇ ಗುಣಾತ್ಮಕ ಶಿಕ್ಷಣ ಸಿಗಲಿದೆ ಎನ್ನುವುದು ಕೇವಲ ಭ್ರಮೆ, ದೇಶ ಕಟ್ಟುವಂತಹ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ದೇಶಕ್ಕೆ ಕೊಡುಗೆಯಾಗಿ ನೀಡುವುದೇ ಶಿಕ್ಷಕರ ಮೇಲಿನ ಬಹುದೊಡ್ಡ ಜವಾಬ್ದಾರಿ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಅಭಿಪ್ರಾಯಪಟ್ಟರು.

ತಾಲೂಕಿನ ಕಲ್ಲೆದೇವರ ಗ್ರಾಮದ ಶ್ರೀ ಕಲೇಶ್ವರ ಪ್ರೌಢಶಾಲೆಯ 2002ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಹಣಗಳಿಸಲೆಂದೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಕಾಲ ದೂರವಾಯಿತು. ಸರ್ಕಾರಿ ಕಾಲೇಜುಗಳಿರಲಿ ಖಾಸಗಿಯಿರಲಿ ಪಾಲಕರಿಂದ ಶಿಕ್ಷಣ ಸಂಸ್ಥೆಗಳನ್ನು ಮಾನದಂಡಕ್ಕೆ ಒಳಪಡಿಸಲಾಗುತ್ತಿದೆ. ಇನ್ನೇನಿದ್ದರೂ ಗುಣಾತ್ಮಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ನೀಡಲೇಬೇಕಾದ ಅನಿವಾರ್ಯತೆಯಿದೆ, ಅಂದರಷ್ಟೇ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಸಾಧ್ಯವೆಂದರು.

ಕಲಿತ ಜ್ಞಾನ ಅಂತಿಮ ಹಂತದವರೆಗೂ ಜೊತೆಯಲ್ಲಿರಲಿದೆ: ಶಾಲಾ ಅವಧಿಯಲ್ಲಿ ಕಲಿತ ಜ್ಞಾನ ಮಾತ್ರ ಬದುಕಿನ ಅಂತಿಮ ಹಂತದವರೆಗೂ ಜೊತೆಯಲ್ಲಿರಲಿದೆ ತಾವು ಗಳಿಸಿದ ಆಸ್ತಿ-ಅಂತಸ್ತು ಯಾವುದೂ ಶಿಕ್ಷಣಕ್ಕೆ ಸಾಟಿಯಾಗುವುದಿಲ್ಲ ಹೀಗಾಗಿ ಜ್ಞಾನವನ್ನು ಧಾರೆಯೆರೆದ ಶಿಕ್ಷಕರನ್ನು ಸದಾಕಾಲ ಸ್ಮರಿಸಿಕೊಳ್ಳಬೇಕಾಗುತ್ತದೆ, ಆದರೆ ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲರಾಗಲು ಶಿಕ್ಷಣವೇ ಕಾರಣವೆಂಬುದನ್ನು ಮರೆಯಬಾರದು. ಅಷ್ಟಕ್ಕೂ ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರು ಜ್ಞಾನ ನೀಡಿದ ಪ್ರಾಧ್ಯಾಪಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

ಮಕ್ಕಳು ಸಿದ್ಧಾಂತ ರೂಢಿಸಿಕೊಳ್ಳಲಿ: ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಮುಖ್ಯಶಿಕ್ಷಕ ಸಿ.ಎನ್. ಬಣಕಾರ ಮಾತನಾಡಿ, ನಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ತಮ್ಮ ಬದುಕಿಗೆ ಬೇಕಾದ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಆದರೆ ಅವರೆಲ್ಲರೂ ಒಂದು ಸಿದ್ಧಾಂತ ರೂಢಿಸಿಕೊಳ್ಳುವ ಮೂಲಕ ದೇಶ ನೀಡಿದಂತಹ ಜವಾಬ್ದಾರಿಗಳನ್ನು ನಿಭಾಯಿಸುವಂತೆ ಮನವಿ ಮಾಡಿದರು.

ವಿದ್ಯಾರ್ಥಿಗಳ ಪರವಾಗಿ ತುಳಸಾ ತಂಗೊಡರ, ಶಶಿ ಹಿರೇಮಠ, ಶಕುಂತಲಾ ಹೂಗಾರ, ಮಾಲತೇಶ ಕುಮ್ಮಣ್ಣನವರ, ಮಂಗಳಾ ಬಣಕಾರ, ಕಿರಣ ಹುಲ್ಮನಿ, ತಮ್ಮ ಶಾಲಾ ದಿನಗಳನ್ನು ಮೆಲಕು ಹಾಕಿ ಶಿಕ್ಷಕರ ಛಡಿಯೇಟು ನಮ್ಮನ್ನು ಉತ್ತಮ ಹಂತಕ್ಕೆ ತಲುಪುವಂತೆ ಮಾಡಿದೆ ಪಾಲಕರು ಜೀವವನ್ನು ಕೊಟ್ಟರೆ ಶಿಕ್ಷಕರು ಜೀವನವನ್ನು ನೀಡಿದ್ದಾರೆ, ಸದರಿ ಕಾರ್ಯಕ್ರಮ ನಮ್ಮ ಜೀವನದಲ್ಲಿ ಅಪರೂಪದ ಮರೆಯಲಾಗದ ದಿನವಾಗಿದೆ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರವೀಣ ಹೊನ್ನಪ್ಪನವರ, ವೀರಣ್ಣ ಬಳ್ಳಾರಿ, ಕುಮಾರ ಹುಲ್ಮನಿ, ಕುಮಾರ ಚೂರಿ, ಮಂಜು ಭರಡಿ, ಭರಮಪ್ಪ ಹಾವನೂರ, ಹನುಮಂತ ಕೆಂಗೊಂಡ, ಕೆ.ಎಂ.ತಂಗೋಡರ, ಬಿ.ಎನ್.ಗೊರವರ, ಜಗದೀಶ ಹೊನ್ನಪ್ಪನವರ, ಮಂಜಯ್ಯ ಪೂಜಾರ, ಬಸವರಾಜ ದಾನಪ್ಪನವರ, ಬಸವರಾಜ ಮುದಕಮ್ಮನವರ, ಕಲ್ಲಪ್ಪ ಕದರಮಂಡಲಗಿ, ಚಂದ್ರಯ್ಯ ಹಿರೇಮಠ, ಬಸವರಾಜ ದಾನಪ್ಪನವರ, ಸುರೇಖಾ ನಡುವಿನಮಠ, ಜಿ.ಎಚ್ .ಗೌಡರ, ಸಿ.ಎನ್ .ಹೊನ್ನಪ್ಪನವರ, ಸಿ.ಎಂ ತಂಗೋಡರ, ಪುಟ್ಟಪ್ಪ ಲಮಾಣಿ, ಸಿ.ಬಿ.ಬಸವರಾಜ, ಟಿ.ಸಿ.ಹಾಲಿಕಟ್ಟಿ, ಆರ್.ಎಲ್.ಕುಮಾರ ನಾಯ್ಕ, ರವಿ ಲಮಾಣಿ, ಪ್ರವೀಣ ವಗ್ಗಣ್ಣನವರ, ಚಂದ್ರು ಭಂಗಿ, ಬಸವಣ್ಣೆಪ್ಪ ಹೂಗಾರ, ಸವಿತಾ ಪಾಟೀಲ ಹಾಗೂ ಲಕ್ಷ್ಮವ್ವ ಲಮಾಣಿ ಇನ್ನಿತರರಿದ್ದರು. ಇದಕ್ಕೂ ಮುನ್ನ ನಾಗಲಿಂಗಪ್ಪ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಮತ್ತು ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಸುಧಾ ಚೂರಿ ಸ್ವಾಗತಿಸಿದರು. ಭೀಮಪ್ಪ ಕದರಮಂಡಲಗಿ ವಂದಿಸಿದರು.