ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಪಾಪು

| Published : Jan 16 2025, 12:47 AM IST

ಸಾರಾಂಶ

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ನಡೆದ ಸಂಕ್ರಾಂತಿ ಸಂಭ್ರಮ, ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ, ಶ್ಲೋಕ ಪಠಿಸಿ ದಾಖಲೆ ಮಾಡಿರುವ ಪೃಥು ಅದ್ವೈತ್‌ಗೆ ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ, ಭಕ್ತಿಗೀತೆಗಳ ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾಮರಾಜನಗರ ಬ್ಯಾಡ್ಮಿಂಟನ್ ತುಂಬಾ ಪ್ರಸಿದ್ಧಿ ಪಡೆದಿತ್ತು. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ವಜ್ರಮುಷ್ಟಿ ಕಾಳಗದಲ್ಲಿ ಚಾಮರಾಜನಗರ ಜೆಟ್ಟಿ ಜನಾಂಗದವರು ಭಾಗವಹಿಸಿ ಪ್ರಶಸ್ತಿ ತಂದಿದ್ದಾರೆ. ಇಂದು ಈಶ್ವರಿ ಸೋಷಿಯಲ್ ಟ್ರಸ್ಟ್ ಅನೇಕ ಕ್ರೀಡಾ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು, ಪೃಥು ಅದ್ವೈತ್‌ಗೆ ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಿರುವುದು ಬಹಳ ಅರ್ಥಪೂರ್ಣ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು. ಚಾಮರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿರುವ ಪ್ರಥು ಪಿ.ಅದೈತ್ ಹಾಗೂ ಕ್ರೀಡಾ ಸಾಧಕರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿದ್ಯಾಲಯ ಸಂಚಾಲಕ ದಾನೇಶ್ವರಿ ಉದ್ಘಾಟಿಸಿ ಮಾತನಾಡಿ, ಸಂಕ್ರಾಂತಿ ಒಂದು ಸಂಭ್ರಮದ ಕ್ರಾಂತಿ, ಸುಗ್ಗಿಯ ಹಬ್ಬ, ಜಾನಪದದ ಸೊಗಡು ಹೊಂದಿರುವ ಹಬ್ಬ. ಸಂಸ್ಕೃತಿ, ಸೌಂದರ್ಯ ಇವೆಲ್ಲವನ್ನೂ ಒಟ್ಟುಗೂಡಿ ಮಾನವನಿಗೆ ಒಂದು ವಿಶೇಷ ಸಂದೇಶ ಕೊಡುವಂತಹ ಹಬ್ಬ ಎಂದರು. ಇಂದು ಸೂರ್ಯ ತನ್ನ ದಿಕ್ಕನ್ನು ದಕ್ಷಿಣಾಯಣದಿಂದ ಉತ್ತರಾಯಣ ದಿಕ್ಕಿಗೆ ತನ್ನ ಪಥವನ್ನು ಬದಲಾವಣೆ ಮಾಡುತ್ತಾನೆ. ಈ ಸಂಕ್ರಾಂತಿ ಸಮಾನತೆಯ ಕ್ರಾಂತಿ ಆಗಲಿ ಎಂದರು.

ಚಾಮರಾಜನಗರದಲ್ಲಿ ಅನೇಕ ಟ್ರಸ್ಟ್‌ಗಳಿವೆ. ಅದರಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ಅತ್ಯುನ್ನತ ಸೇವೆ ಮಾಡುತ್ತಿದೆ. ವೆಂಕಟೇಶ್ ಅವರು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದರು.

ಪ್ರಶಸ್ತಿ ಪ್ರದಾನ: ಶ್ಲೋಕ ಪಠಿಸಿ ದಾಖಲೆ ಮಾಡಿರುವ ಪೃಥು ಪಿ.ಅದ್ವತ್‌ಗೆ ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಚಾಮರಾಜನಗರಕ್ಕೆ ಕೀರ್ತಿ ತಂದುಕೊಟ್ಟ ಕ್ರೀಡಾ ತರಬೇತುದಾರ ಶಿವು ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಬಸವರಾಜೇಂದ್ರ, ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಎಚ್.ಜಿ.ಕುಮಾರಸ್ವಾಮಿ ಮಾತನಾಡಿದರು. ಈಶ್ವರಿ ಸೋಷಿಯಲ್ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ವೆಂಕಟೇಶ್ ಪ್ರಾಸಾವಿಕ ಭಾಷಣ ಮಾಡಿದರು. ಮುಡಿಗುಂಡ.ಜೆ.ಮೂರ್ತಿ ನಿರೂಪಿಸಿದರು. ಕಾರ್ಯಕ್ರಮ ನಂತರ ಭಕ್ತಿಗೀತೆಗಳ ಗೀತಗಾಯನ ನಡೆಯಿತು.