ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರ ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ಎಚ್.ಟಿ.ಮಂಜು

| Published : Nov 13 2025, 12:30 AM IST

ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರ ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಧ್ಯಾಪಕರು ಕೇವಲ ಕೊಠಡಿ ಪಠ್ಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಪೋಷಕರ ನೆರವನ್ನು ಪಡೆದು ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿಕೊಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಇರುವ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ. ಇವರಿಗೆ ಪ್ರಾಧ್ಯಾಪಕರ ಮಾರ್ಗದರ್ಶನ ಬಹಳ ಮುಖ್ಯ. ಪಿಯುಸಿ ಹಂತ ದಾಟಿ ಪದವಿಗೆ ಸೇರಿದಾಗಲೆ ಅವರಲ್ಲಿನ ಮನೋಭಾವವು ಬದಲಾವಣೆ ಕಂಡಿರುತ್ತದೆ. ಬದುಕಿನ ಬಗೆಗೆ ಪ್ರೀತಿಯನ್ನು ಬೆಳೆಸಿಕೊಂಡಿರುತ್ತಾರೆ ಎಂದರು.

ಪ್ರಾಧ್ಯಾಪಕರು ಕೇವಲ ಕೊಠಡಿ ಪಠ್ಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಪೋಷಕರ ನೆರವನ್ನು ಪಡೆದು ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿಕೊಡಬೇಕು ಎಂದರು.

ಶಾಸಕನಾಗಿ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದರೆ ಇದಕ್ಕೆ ಕಾರಣ ಶಿಕ್ಷಣ. ಆದ್ದರಿಂದ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ. ಹಾದಿ ತಪ್ಪಬೇಡಿ. ಒಳ್ಳೆಯ ಹಾದಿಯಲ್ಲಿ ನಡೆದು ಜೀವನದ ಗುರಿಯನ್ನು ಮುಟ್ಟಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಿವೃತ್ತ ಕನ್ನಡ ಪ್ರಾಧ್ಯಾಪಕ ಎಂ.ಎಸ್.ಸಂಪತ್‌ಕುಮಾರ್ ಕನ್ನಡ ನಾಡು ನುಡಿ ಬಗೆಗೆ ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಲ್ಲೇನಹಳ್ಳಿ ಮೋಹನ್, ಚನ್ನರಾಜು, ತಿಬ್ಬೇಗೌಡ, ವಸಂತಕುಮಾರ್, ಕೆ.ಬಿ.ಮಧು, ಬಿ.ಎ.ಮಂಜುನಾಥ, ಪ್ರಾಧ್ಯಾಪಕರಾದ ಡಾ.ಜಯಕೀರ್ತಿ, ಡಾ.ಮಹೇಶ್, ಬೋರೇಗೌಡ, ಉಮೇಶ್, ಸವಿತಾ, ಪತ್ರಾಂಕಿತ ವ್ಯವಸ್ಥಾಪಕಿ ಜೆ.ಭುವನೇಶ್ವರಿ ಸೇರಿದಂತೆ ಎಲ್ಲಾ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ ವರ್ಗದ ಸದಸ್ಯರು, ಗ್ರಾಪಂ ಸದಸ್ಯ ಆರ್.ಶ್ರೀನಿವಾಸ್ ಶಾಸಕರ ಆಪ್ತ ಸಹಾಯಕ ಪ್ರತಾಪ್, ಪತ್ರಕರ್ತ ದಿನೇಶ್, ಹೊನ್ನೇನಹಳ್ಳಿ ರವಿ ಮತ್ತಿತರರು ಇದ್ದರು.