ಸಾರಾಂಶ
ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಹಲವೆಡೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಯಾವ ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ ಅಥವಾ ಪಟ್ಟಣದಲ್ಲಿ ನೀರಿನ ಸಮಸ್ಯೆಯಾಗಿದೆಯೋ ಆ ಪ್ರದೇಶವನ್ನು ಗುರತಿಸಿ ತ್ವರಿತವಾಗಿ ವರದಿ ಸಲ್ಲಿಸಬೇಕು.
ಕನಕಗಿರಿ:
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ತ್ವರಿತವಾಗಿ ಗುರುತಿಸಿ ವರದಿ ಸಲ್ಲಿಸಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಪಿಡಿಒಗಳಿಗೆ ಸೂಚಿಸಿದ್ದಾರೆ.ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪಿಡಿಒಗಳ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಹಲವೆಡೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಯಾವ ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ ಅಥವಾ ಪಟ್ಟಣದಲ್ಲಿ ನೀರಿನ ಸಮಸ್ಯೆಯಾಗಿದೆಯೋ ಆ ಪ್ರದೇಶವನ್ನು ಗುರತಿಸಿ ತ್ವರಿತವಾಗಿ ವರದಿ ಸಲ್ಲಿಸಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ಪರಿಹಾರ ಒದಗಿಸಲು ಪಿಡಿಒಗಳು ತಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಸಮಸ್ಯೆ ಗುರುತಿಸುವ ಕಾರ್ಯ ಮಾಡಬೇಕೆಂದು ಕಟ್ಟುನಿಟ್ಟಾಗಿ ಆದೇಶಿಸಿದರು.
ಕೆಲ ಗ್ರಾಮಗಳಲ್ಲಿ ಸೊಳ್ಳೆ ಕಾಟ ವಿಪರಿತವಾಗಿ ಕಂಡು ಬರುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಪಂಚಾಯಿತಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡಬೇಕು. ಸೊಳ್ಳೆ ಹಾವಳಿ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ತಕ್ಷಣಕ್ಕೆ ಕೈಗೊಂಡು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.ತಾಲೂಕು ಆರೋಗ್ಯಾಧಿಕಾರಿ ಶರಣಪ್ಪ ಚಕೋಟಿ, ತಾಪಂ ಇಒ ಟಿ. ರಾಜಶೇಖರ, ತಾಪಂ ಸಹಾಯಕಿ ನಿರ್ದೇಶಕಿ ಶರಪೋನ್ನಿಸಾಬೇಗಂ, ಪಿಡಿಒಗಳಾದ ಯು. ಮಲ್ಲಿಕಾರ್ಜುನ, ಲಕ್ಷ್ಮಣ, ಅಮರೇಶ ರಾಠೋಡ, ನಾಗೇಶ ಪೂಜಾರ ಸೇರಿದಂತೆ ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.