ಸಾಂಸ್ಕೃತಿಕ ಉತ್ಸವಕ್ಕೆ ಬೇಕಾದ ಅಗತ್ಯ ಜಾಗ ಗುರುತಿಸಿ: ಸಭಾಪತಿ ಬಸವರಾಜ ಹೊರಟ್ಟಿ

| Published : Feb 21 2025, 12:47 AM IST

ಸಾಂಸ್ಕೃತಿಕ ಉತ್ಸವಕ್ಕೆ ಬೇಕಾದ ಅಗತ್ಯ ಜಾಗ ಗುರುತಿಸಿ: ಸಭಾಪತಿ ಬಸವರಾಜ ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಅಗತ್ಯ ಜಾಗ ಗುರುತಿಸಲು ವಿಪ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.

ಹುಬ್ಬಳ್ಳಿ: ಈ ಭಾಗದಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಅಗತ್ಯ ಜಾಗ ಗುರುತಿಸಿ. ಈ ಕುರಿತು ಜನಪ್ರತಿನಿಧಿಗಳೆಲ್ಲ ಸೇರಿ ಒತ್ತಡ ಹಾಕಿ ಜಾಗದ ಸಮಸ್ಯೆ ಪರಿಹರಿಸಿಕೊಳ್ಳೋಣ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಹೊರವಲಯದ ಕುಸಗಲ್ಲ ರಸ್ತೆಯ ಮೈದಾನದಲ್ಲಿ ಎರಡು ದಿನ ನಡೆಯಲಿರುವ ಸಂಸದರ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವದ ಗಾಳಿಪಟ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 5 ವರ್ಷಗಳಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಗಾಳಿಪಟ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಇದು ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳಕಳಿಯ ಸಂಕೇತವೂ ಆಗಿದೆ. ಇತರ ರಾಜಕಾರಣಿಗಳಿಗೂ ಇದು ಮಾದರಿಯಾಗಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಮೊಬೈಲ್‌ನಿಂದಾಗಿ ಹೊರ ಜಗತ್ತಿನ ಪರಿಚಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಸ್ಕೃತಿಕ, ಕ್ರೀಡಾ ಮನರಂಜನೆ ಕಾರ್ಯಕ್ರಮಗಳು ಗೌಣವಾಗುತ್ತಿವೆ. ಶಾಲೆಯಲ್ಲಿ ಹೆಚ್ಚು ಅಂಕ ಪಡೆಯುವುದೇ ಮುಖ್ಯ ಎನ್ನುವ ಮನೋಭಾವ ಪಾಲಕರಲ್ಲಿ ಬೆಳೆದುಬಿಟ್ಟಿದೆ. ಪಟ್ಟೇತರ ಚಟುವಟಿಕೆಯೂ ಮುಖ್ಯವಾಗಿದ್ದು, ಅದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಮುಂದಿನ ದಿನಗಳಲ್ಲಿ ಕಬಡ್ಡಿ ಮತ್ತು ವಾಲಿಬಾಲ್ ಕ್ರೀಡೆ ಆಯೋಜಿಸುವ ಯೋಜನೆಯೂ ಇದೆ ಎಂದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಅಭಯ ಪಾಟೀಲ, ಎಂ.ಆ‌ರ್. ಪಾಟೀಲ, ವಿಪ ಸದಸ್ಯ ಪ್ರದೀಪ ಶೆಟ್ಟ‌ರ್, ಮುಖಂಡರಾದ ಅಮೃತ ದೇಸಾಯಿ, ಅಶೋಕ ಕಾಟವೆ, ನಾಗರಾಜ ಛಬ್ಬಿ, ಲಿಂಗರಾಜ ಪಾಟೀಲ, ರಾಜಣ್ಣ ಕೊರವಿ, ರೂಪಾ ಶೆಟ್ಟಿ, ವಸಂತ ಹೊರಟ್ಟಿ ಸೇರಿದಂತೆ ಹಲವರಿದ್ದರು.