ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಂಗನವಾಡಿ ಮಕ್ಕಳಲ್ಲಿ ಇರಬಹುದಾದ ವಾಕ್-ಶ್ರವಣ ಸಮಸ್ಯೆಗಳನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವ ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಪ್ರಯಾಸ್ ಯೋಜನೆ ಸಂಬಂಧ ಅಂಗನವಾಡಿ ಕಾರ್ಯಕರ್ತೆಯರನ್ನು ಸಜ್ಜುಗೊಳಿಸುವ ತರಬೇತಿ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹೇಳಿದರು.ಮೈಸೂರಿನಲ್ಲಿ ತರಬೇತಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿನ ವಾಕ್, ಕಿವಿ ಸಮಸ್ಯತೆ ಗುರುತಿಸಲು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸೆಮಿನಾರ್ ಹಾಲ್ ನಲ್ಲಿ ಜಿಲ್ಲೆಯ 1344 ಅಂಗನವಾಡಿ ಕಾರ್ಯಕರ್ತೆಯರಿಗೆ 5 ಬ್ಯಾಚ್ ಗಳಲ್ಲಿ ಐದು ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಅಂಗನವಾಡಿಗಳಲ್ಲಿ ಸುಮಾರು 35 ಸಾವಿರ ಮಕ್ಕಳು ಇದ್ದಾರೆ. ಈ ಮಕ್ಕಳಲ್ಲಿ ಕಿವಿ ಮತ್ತು ಮಾತಿನ ತೊಂದರೆಯಂತಹ ಲಕ್ಷಣಗಳು ಕಂಡುಬಂದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಗುರುತಿಸಿ ಗಮನಕ್ಕೆ ತಂದರೆ ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಅವರಿಗೆ ಅಗತ್ಯ ಬೀಳಬಹುದಾದ ಶಸ್ತ್ರಚಿಕಿತ್ಸೆ, ಸಾಧನ ಉಪಕರಣಗಳನ್ನ ಉಚಿತವಾಗಿ ಸಿ.ಎಸ್.ಆರ್ ಮೂಲಕ ಒದಗಿಸುವ ಬಹುಮುಖ್ಯ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಚಾಲನೆ ನೀಡಿದ್ದಾರೆ ಎಂದರು.ತಾಯಿಯಂತೆ ಮಕ್ಕಳನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವ ಅಂಗನವಾಡಿ ಕಾರ್ಯಕರ್ತೆಯರು ಆರಂಭದಲ್ಲಿಯೇ ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಗುರುತಿಸುವ ಸಲುವಾಗಿ ತರಬೇತಿ ಆಯೋಜಿಸಲಾಗಿದೆ. ಇಲ್ಲಿ ಪಡೆದುಕೊಂಡ ತರಬೇತಿ ಅನುಭವವನ್ನು ತಮ್ಮ ಕಾರ್ಯಕ್ಷೇತ್ರದ ಅಂಗನವಾಡಿಗಳಲ್ಲಿ ಪ್ರೀತಿಯಿಂದ ಅನುಷ್ಠಾನ ಮಾಡಿದರೆ ಮಕ್ಕಳ ಭವಿಷ್ಯ ಆರೋಗ್ಯ ಉತ್ತಮವಾಗುತ್ತದೆ.
ಜಿಲ್ಲೆಯ ಮಕ್ಕಳ ಆರೋಗ್ಯದ ಉದ್ದೇಶದಿಂದ ಅನುಷ್ಠಾನಗೊಳಿಸುತ್ತಿರುವ ಪ್ರಯಾಸ್ ಯೋಜನೆ ಅತ್ಯುತ್ತಮ ಪ್ರಯತ್ನವಾಗಿದೆ. ಆರಂಭದಲ್ಲಿಯೇ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ನೆರವಾಗಲಿದೆ. ಮಕ್ಕಳು ಉತ್ಸಾಹದಿಂದ ಇರಲು ಅವರಲ್ಲಿರುವ ತೊಂದರೆಗಳನ್ನು ನಿವಾರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಒಳ್ಳೆಯ ಕಾರ್ಯಕ್ಕೆ ಎಲ್ಲರು ಮುಂದಾಗೋಣ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಾತನಾಡಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿಯಿಂದ ಪ್ರಯಾಸ್ ಯೋಜನೆ ರೂಪಿತವಾಗಿದೆ. ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಎಲ್ಲರು ಕೈ ಜೋಡಿಸಿ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪುಷ್ಪಾವತಿ ಮಾತನಾಡಿ, ವಾಕ್ ಮತ್ತು ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದ ಅನೇಕರು ಪ್ರತಿಷ್ಠಿತ ನಮ್ಮ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಉನ್ನತ ಶಿಕ್ಷಣ ಉದ್ಯೋಗ ಪಡೆದು ಬದುಕಿನಲ್ಲಿ ಯಶಸ್ಸು ಕಂಡಿದ್ದಾರೆ. ಹೀಗಾಗಿ ಆರಂಭಿಕ ಹಂತದಲ್ಲಿಯೇ ಕಂಡು ಬರುವ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಅಂಗನವಾಡಿಗಳಲ್ಲಿ ಮಕ್ಕಳ ತೊಂದರೆಗಳನ್ನು ಗುರುತಿಸಿ ಶಿಫಾರಸು ಮಾಡುವ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತಿದ್ದೇವೆ. ಈ ತರಬೇತಿಯ ಪ್ರಯೋಜನ ಪಡೆಯುವುದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನಿಮ್ಮ ಕೊಡುಗೆ ನೀಡಬೇಕು ಎಂದರು.ಆಡಿಯಾಲಾಜಿ ಪ್ರೊ. ಡಾ. ಎಂ. ಸಂದೀಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಸುರೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.