ಸಂವಿಧಾನಬದ್ಧ ಹಕ್ಕು ಪಡೆಯಲು ಕೊಡವರೆಂದೇ ಗುರುತಿಸಿಕೊಳ್ಳಿ: ಎನ್.ಯು.ನಾಚಪ್ಪ

| Published : Oct 16 2025, 02:01 AM IST

ಸಂವಿಧಾನಬದ್ಧ ಹಕ್ಕು ಪಡೆಯಲು ಕೊಡವರೆಂದೇ ಗುರುತಿಸಿಕೊಳ್ಳಿ: ಎನ್.ಯು.ನಾಚಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವರ ಪ್ರತ್ಯೇಕ ಗುರುತು ದಾಖಲೀಕರಣವಾದರೆ ಮಾತ್ರ ಕೊಡವರಿಗೆ ಸಂವಿಧಾನ ಬದ್ಧ ಹಕ್ಕು ದೊರೆಯಲು ಸಾಧ್ಯ ಎಂದು ಎನ್‌ ಯು ನಾಚಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಜನಗಣತಿಯ ಸಂದರ್ಭ ಆದಿಮಸಂಜಾತ, ಇಂಡಿಜಿನಸ್, ಆ್ಯನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಕೊಡವರ ಪ್ರತ್ಯೇಕ ಗುರುತು ದಾಖಲೀಕರಣವಾದರೆ ಮಾತ್ರ ಕೊಡವರಿಗೆ ಸಂವಿಧಾನಬದ್ಧ ಹಕ್ಕು ದೊರೆಯಲು ಸಾಧ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.ಕೇಂದ್ರ ಸರ್ಕಾರದ ಮೂಲಕ ೨೦೨೬ ಅಕ್ಟೋಬರ್‌ನಿಂದ ನಡೆಯಲಿರುವ ಭಾರತ ದೇಶದ ೧೬ನೇ ರಾಷ್ಟ್ರೀಯ ಜನಗಣತಿಯ ಸಂದರ್ಭ ಎಲ್ಲ ಮೂರು ಕಾಲಂನಲ್ಲಿ ‘ಕೊಡವ’ ಎಂದೇ ಬರೆಸಬೇಕೆಂಬ ಕರೆಯೂ ಸೇರಿದಂತೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನೂರೊಕ್ಕ ನಾಡಿನ ಚೆಟ್ಟಳ್ಳಿಯಲ್ಲಿ ನಡೆದ ೧೫ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪೀಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ ‘ಸಂಘ’ ಮತ ಕ್ಷೇತ್ರದಂತೆ ಕೊಡವರಿಗೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ, ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಬೇಕಾದರೆ ರಾಷ್ಟ್ರೀಯ ಜನಗಣತಿಯಲ್ಲಿ ‘ಕೊಡವರು’ ಎಂದೇ ದಾಖಲೀಕರಣವಾಗುವ ಅಗತ್ಯವಿದೆ ಎಂದರು.

21ರಂದು ಮಾನವ ಸರಪಳಿ:16ನೇ ಕೊಡವ ಮಾನವ ಸರಪಳಿ ಅ.21ರಂದು ಬೆಳಗ್ಗೆ 10.30ಕ್ಕೆ ಅಮ್ಮತ್ತಿಯಲ್ಲಿ ನಡೆಯಲಿದ್ದು, ಅ.27ರಂದು ಬೆಳಗ್ಗೆ 10.30ಕ್ಕೆ 17ನೇ ಮಾನವ ಸರಪಳಿ ಹುದಿಕೇರಿ (ಪುದಿಕೇರಿ)ಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ ಹಾಗೂ ಚೆಟ್ಟಳ್ಳಿಯಲ್ಲಿ ಕೊಡವ ಮಾನವ ಸರಪಳಿ ನಡೆಸಲಾಗಿದೆ ಎಂದರು. ಚೋಳಪಂಡ ಜ್ಯೋತಿ ನಾಣಯ್ಯ, ಪಳಂಗಂಡ ಸುಮಿ ಅಪ್ಪಯ್ಯ, ಚೋಳಪಂಡ ತಾಜ ಕಾಳಯ್ಯ, ಪಳಂಗಂಡ ಗೀತಾ ಸುಬ್ರಮಣಿ, ಮುಳ್ಳಂಡ ಮಾಯಮ್ಮ, ಬಲ್ಲಾರಂಡ ಸ್ವಾತಿ ನಾಣಯ್ಯ, ಪಚ್ಚಾರಂಡ ಶಾಂತಿ ಪೊನ್ನಪ್ಪ ಮತ್ತಿತರರಿದ್ದರು.