ಸಾರಾಂಶ
ಸರ್ಕಾರಕ್ಕೆ ದಾನ, ತ್ಯಾಗ ಮಾಡಿದ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ, ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ನೀಡದ ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು - ಬಸವ ಜಯಮೃತ್ಯುಂಜಯ ಮಹಾಸ್ವಾಮಿ
ಹಾನಗಲ್ಲ: ಸರ್ಕಾರಕ್ಕೆ ದಾನ, ತ್ಯಾಗ ಮಾಡಿದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ, ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿ ನೀಡದ ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು.
ನಾಳೆಗಳಲ್ಲಿ ನಮ್ಮ ಸಮಾಜ ನಿಮ್ಮ ಎದುರು ನಿಲ್ಲಬೇಕಾದೀತು. ಮುಂದಿನ ಅಧಿವೇಶನದಲ್ಲಿ ಬೃಹತ್ ಹೋರಾಟ ನಿಶ್ಚಿತ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಎಚ್ಚರಿಸಿದರು.
ತಾಲೂಕಿನ ನೀರಲಗಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ತಾಲೂಕು ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಮ್ಮದು ಹೃದಯವಂತ ಸಮಾಜ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಮೀಸಲಾತಿ ಹೋರಾಟ ಗೆಲ್ಲುವವರೆಗೆ ನಿಲ್ಲದು. ಲಿಂಗಾಯತರಲ್ಲೆ ಕೆಲವು ಸಮುದಾಯಗಳಿಗೆ ಮೀಸಲಾತಿ ಇವೆ. ನಮಗೇಕಿಲ್ಲ? ರಾಜ್ಯ ಸರ್ಕಾರ ಈ ವರೆಗೂ 2ಎ ಮೀಸಲಾತಿಗಾಗಿ ಒಂದೂ ಸಭೆ ಮಾಡಿಲ್ಲ. ಬೆಳಗಾವಿಯಲ್ಲಿ ಅಧಿವೇಶನದ ಸಂದರ್ಭದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಿಶ್ಚಿತ. ನಮ್ಮ ಸಮಾಜದ ಶಾಸಕರು, ಸಚಿವರು ವಿಧಾನಸಭೆಯಲ್ಲಿ ಮಾತನಾಡಲಿ. ನಮ್ಮ ಹಕ್ಕು ಪಡೆಯಲು ನೀವೇಕೆ ಹಿಂದೆ ಸರಿಯುವಿರಿ? ನಮ್ಮ ಮಕ್ಕಳಿಗೆ ಸೌಲಭ್ಯ ಸಿಗದಿದ್ದರೆ ನಮ್ಮ ಮಕ್ಕಳು ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ವಂಚಿತರಾಗುತ್ತಾರೆ ಎಂಬ ಅರಿವು ನಿಮಗಿರಲಿ. ಗೆಲ್ಲುವವರೆಗೆ ಹೋರಾಟ ನಿಲ್ಲದು ಎಂದರು.
ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಮೊದಲ ಅನುಯಾಯಿಗಳು ಪಂಚಮಸಾಲಿ ಸಮುದಾಯದವರು. ಉತ್ತಿ ಬಿತ್ತಿ ಬೆಳೆದು ಕೊಡುವ ಸಮಾಜ ನಮ್ಮದು. ನಾವು ಒಳ ಪಂಗಡ ವಿರೋಧಿಗಳಲ್ಲ. ಆದರೆ ಇತರ ಪಂಗಡಗಳಿಗೆ ನೀಡಿದ ಸೌಲಭ್ಯ ನಮಗೇಕಿಲ್ಲ? ಕೇಂದ್ರದ ಒಬಿಸಿ, ರಾಜ್ಯದ 2ಎ ಮೀಸಲಾತಿ ನಮ್ಮ ಹಕ್ಕು. ಈಗ ಈ ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಕಾನೂನು ಹಿಡಿದು ಹೋರಾಡಲು ಸಿದ್ಧ. ಆದರೆ ಯಾವುದೇ ಸರ್ಕಾರ ಪಂಚಮಸಾಲಿ ಸಮುದಾಯವನ್ನು ದೂರ ತಳ್ಳಿದರೆ ಅದರ ಫಲ ಎದುರಿಸಬೇಕಾಗುತ್ತದೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಪಂಚಮಸಾಲಿ ಸಮುದಾಯದವರಿಗೆ ಟಿಕೆಟ್ ಕೊಡಿ ಎಂದು ಬಿಜೆಪಿ, ಕಾಂಗ್ರೆಸ್ ನಾಯಕರನ್ನು ಆಗ್ರಹಿಸಿದರು.ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ೨ಎ ಮೀಸಲಾತಿ ವಿಷಯ ನ್ಯಾಯಾಲಯದಲ್ಲಿದೆ. ಇದರ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಒಂದೂ ಸಭೆ ನಡೆಸಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ನಡೆಸಿಲ್ಲ. ಈ ರೀತಿಯಲ್ಲಿ ಪಂಚಮಸಾಲಿ ಸಮುದಾಯದ ಕಡೆಗಣನೆ ಸರಿ ಅಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಬಾವಿಗಿಳಿದು ಹೋರಾಟ ಮಾಡಿದ್ದೇವೆ. ಈಗಿನ ಕಾಂಗ್ರೆಸ್ ಆಡಳಿದಲ್ಲಿರುವ ನಮ್ಮ ಸಮುದಾಯದವರು ಹೋರಾಟಕ್ಕೆ ಮುಂದಾಗಲಿ. ನಮ್ಮ ಸಮಾಜದ ಅಭಿಮಾನ ನಮ್ಮದಾಗಿರಲಿ. ಯಾರಿಗೂ ಅಂಜುವ ಅಗತ್ಯವಿಲ್ಲ ಎಂದರು.