ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಾನು ಜಿಲ್ಲೆಯಲ್ಲಿ ಎಸ್ಪಿಯಾಗಿ ಅಧಿಕಾರವಹಿಸಿಕೊಂಡ ಬಳಿಕ 8 ಮಂದಿ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಈ ಪೈಕಿ ನಾಲ್ಕು ಮಂದಿ ಹೆಲ್ಮೆಟ್ ಧರಿಸಿದ್ದರೆ ಬದುಕುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಹೇಳಿದರು.ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಚಾರ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಣ್ಣ ಸಣ್ಣ ಕರ್ತವ್ಯಗಳನ್ನು ನಾವು ಪಾಲಿಸಿದರೆ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು. ಸಂಚಾರಿ ನಿಯಮಗಳನ್ನು ಸಕಾಲದಲ್ಲಿ ಪಾಲನೆಯಿಂದ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ ಎಂಬ ವಾಸ್ತವವನ್ನು ವಾಹನ ಚಾಲಕರು, ಮಾಲೀಕರು ಅರ್ಥೈಸಿಕೊಳ್ಳಬೇಕು.
ಖಾಕಿ ತೊಡುವುದು ಹೆಮ್ಮೆಯ ಸಂಗತಿ, ಖಾಕಿ ತೊಟ್ಟು ಆಟೊ ಹಾಗೂ ಇನ್ನಿತರೆ ವಾಹನಗಳ ಚಾಲಕರು ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸುವ ಜೊತೆ ಜೊತೆಗೆ ಕಾನೂನು ಪಾಲಿಸಿ. ಆಟೋ, ಕಾರು ಇನ್ನಿತರ ವಾಹನಗಳ ಚಾಲಕರು ಸಂಚಾರ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಸೂಕ್ತ ದಾಖಲಿಗಳಿದ್ದರೆ ಪೊಲೀಸರ ನೋಡಿ ಭಯಪಡುವ ಅಗತ್ಯವಿಲ್ಲ, ವಾಹನ ಪರವಾನಿಗೆ, ವಿಮೆ ಇನ್ನಿತರ ದಾಖಲೆಗಳು ಅಪಘಾತದ ಸಂದರ್ಭದಲ್ಲಿ ಚಾಲಕರು ಹಾಗೂ ಕುಟುಂಬದ ನೆರವಿಗೆ ನಿಲ್ಲುತ್ತದೆ. ಈ ಹಿನ್ನಲೆ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಆಟೋ, ಕಾರು, ಇನ್ನಿತರ ವಾಹನಗಳ ಚಾಲಕರು ಸಹಕಾರ ನೀಡಬೇಕಿದೆ ಎಂದರು.ಪೊಲೀಸರಿಗೆ ವಾಹನ ಚಾಲಕರು, ಕಾರ್ಮಿಕರು ದುಡಿದ ದುಡಿಮೆಯ ಹಣವನ್ನು ದಂಡದ ರೂಪದಲ್ಲಿ ಕಟ್ಟಿಸಿಕೊಳ್ಳಲು ಇಷ್ಟವಿಲ್ಲ. ಇದನ್ನು ವಾಹನ ಚಾಲಕರು ಅರ್ಥ ಮಾಡಿಕೊಳ್ಳಿ. ಅಗತ್ಯ ದಾಖಲೆಗಳಿದ್ದರೆ ವಾಹನ ಚಾಲನೆ ಮಾಡಿ. ಪಾನಮತ್ತರಾಗಿ ವಾಹನಗಳನ್ನು ಓಡಿಸಿದರೆ ಅಮೂಲ್ಯ ಜೀವಗಳನ್ನು ಕಳೆದು ಕೊಳ್ಳಬೇಕಾಗುತ್ತದೆ. ಸದಾ ಜನರ ನಡುವೆ ಇರುವ ಆಟೋ ಚಾಲಕರು ಒಂದು ರೀತಿ ಪೊಲೀಸರೆ ಆಗಿದ್ದಾರೆ. ಹಾಗಾಗಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ರಸ್ತೆಯಲ್ಲಿ ರೋಡ್ ರೋಮಿಯೋಗಳ ಕಾಟ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಅಕ್ರಮ ಚಟುವಟಕೆಗಳು ನಡದರೆ ಪೊಲೀಸರಿಗೆ ವಾಹನ ಸವಾರರು, ಮಾಲೀಕರು, ಚಾಲಕರು ಮಾಹಿತಿ ನೀಡಿ, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು, ಇಲಾಖೆ ಜೊತೆ ಸಹಕರಿಸಿ, ಕಾನೂನು ಗೌರವಿಸಿ, ಸದಾ ಇಲಾಖೆ ನಿಮ್ಮ ಜೊತೆಗಿರುತ್ತೆ ಎಂದರು.
ಈ ವೇಳೆ ಡಿವೈಎಸ್ಪಿ ಧರ್ಮೇದ್ರ ಮಾತನಾಡಿ, ಪ್ಯಾಸೆಂಜರ್ ಆಟೋಗಳಲ್ಲಿ ನಿಗದಿತ ಸೀಟ್‌ಗಳಿಗಿಂತಲೂ ಹೆಚ್ಚು ಜನರನ್ನು ಕರೆದುಕೊಂಡು ತೆರಳಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ, ಕೆಲವರು ಅಪಾಯದ ಸ್ಥಿತಿಯಲ್ಲೆ ಶಾಲಾ ಮಕ್ಕಳನ್ನು ಆಟೋದಲ್ಲಿ ಕರೆದುಕೊಂಡು ತೆರಳುತ್ತಿದ್ದಾರೆ, ಇದು ಸರಿಯಲ್ಲ ಎಂದರು.