ಮುಂಡರಗಿ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ಈಶ್ವರಪ್ಪ ಹಂಚಿನಾಳ ಅವರ ಅಭಿಮಾನಿ ಬಳಗದಿಂದ ಶನಿವಾರ ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ ಅವರ ಕುರಿತಾದ ''ಬದುಕಿನ ಪಯಣ'' ಚಿತ್ರ ಸಂಪುಟ ಕೃತಿ ಲೋಕಾರ್ಪಣೆ ಮಾಡಲಾಯಿತು.

ಮುಂಡರಗಿ: ಶ್ರದ್ಧೆ ಮತ್ತು ಜಿದ್ದು ಇದ್ದರೆ ಯಾವುದೇ ರೈತನಿಗೆ ಸರ್ಕಾರದ ಮುಂದೆ ಕೈಚಾಚುವ ಅವಶ್ಯಕತೆ ಬರುವುದಿಲ್ಲ ಎಂದು ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್‌ಮನ್‌, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.

ಪಟ್ಟಣದ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ಈಶ್ವರಪ್ಪ ಹಂಚಿನಾಳ ಅವರ ಅಭಿಮಾನಿ ಬಳಗದಿಂದ ಶನಿವಾರ ಆಯೋಜಿಸಿದ್ದ ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ ಅವರ ಕುರಿತಾದ ''''''''ಬದುಕಿನ ಪಯಣ'''''''' ಚಿತ್ರ ಸಂಪುಟ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ನೀರಿನ ಕೊರತೆ ಇರುವ ಇಸ್ರೇಲ್ ಸಾವಯವ ಕೃಷಿಯಿಂದ ಬೆಳೆದ ಆಹಾರ ಪದಾರ್ಥಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ದೇಶವಾಗಿ ಹೆಸರುವಾಸಿಯಾಗಿದೆ. ಮಹಾರಾಷ್ಟ್ರದಲ್ಲಿ 3-4 ಗುಂಟೆ ಜಮೀನು ಹೊಂದಿದವರೂ ಅದರಲ್ಲಿಯೇ ಯಶಸ್ವಿ ಕೃಷಿ ಮಾಡಿ, ಲಾಭ ಗಳಿಸುತ್ತಾರೆ. ನಮ್ಮ ರಾಜ್ಯದಲ್ಲಿಯೂ ಫಲವತ್ತಾದ ಭೂಮಿ, ನೀರು ಇದ್ದು, ರೈತರು ಉತ್ತಮ ಆದಾಯ ಬರುವ ಬೆಳೆ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ರೈತರು ಎಚ್ಚೆತ್ತುಕೊಳ್ಳಬೇಕು. ಕೃಷಿಯಲ್ಲಿ ಸುಧಾರಣೆ ಆಗಬೇಕು. ರಾಸಾಯನಿಕ ಗೊಬ್ಬರ ಹಾಕಿ ಜನತೆಗೆ ವಿಷ ಉಣಿಸವುದನ್ನು ಬಿಟ್ಟು ಸಾವಯವ ಕೃಷಿ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಹಿತ ಕಾಪಾಡುವಲ್ಲಿ ಎಡವಿವೆ ಎಂದು ಬೇಸರ ವ್ಯಕ್ತಪಡಿಸಿದರು..

ಕಾರ್ಯಕ್ರಮ ಉದ್ಘಾಟಿಸಿದ ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ, ಇಂದಿನ ಯುವಕರಿಗೆ ಮಾದರಿಯಾಗುವ ರೀತಿಯಲ್ಲಿ ಈಶ್ವರಪ್ಪ ಹಂಚಿನಾಳ ಅವರು ಶ್ರಮವಹಿಸಿ ಕೃಷಿಯಲ್ಲಿ ಬಹುದೊಡ್ಡದಾದ ಸಾಧನೆ ಮಾಡಿದ್ದಾರೆ ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಕೃಷಿಯನ್ನು ಪ್ರಕೃತಿಯ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದರು.

ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ ಮಾತನಾಡಿ, ನಾವು ನಮ್ಮ ಭೂಮಿಗೆ ಜೀವಾಮೃತ ಕೊಡುವುದರಿಂದ ಮಣ್ಣಿಗೆ ಮತ್ತು ಬೆಳೆಗಳಿಗೆ ಜೀವ ಬಂದಂತಾಗುತ್ತದೆ. ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಬಾರದು. ಸಾವಯವ ಬಳಕೆ ಮಾಡುವುದರಿಂದ ಭೂಮಿ ಫಲವತ್ತತೆ ಇನ್ನಷ್ಟು ಹೆಚ್ಚುತ್ತದೆ. ಕೃಷಿಯಲ್ಲಿ ನಾವು ನಿತ್ಯ ಮಾಡುವ ಕಾಯಕವನ್ನು ಶ್ರದ್ದೆಯಿಂದ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ನೇತೃತ್ವ ವಹಿಸಿದ್ದ ಗದಗ, ವಿಜಯಪುರ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಕೃಷಿ ಎನ್ನುವುದು ನಿಷ್ಪ್ರಯೋಜಕ ಎಂದು ಯಾವತ್ತೂ ತಿಳಿದುಕೊಳ್ಳಬೇಡಿ. ಯುವ ಪೀಳಿಗೆ ದೇಶದ ಅಮೂಲ್ಯ ಆಸ್ತಿ ಎಂದರು.

ರಾಮನಗರ ಪರಮಾನಂದ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ವಿ. ಶಿರೂರ, ಸಹಕಾರ ಇಲಾಖೆ ನಿವೃತ್ತ ಸಂಯುಕ್ತ ನಿಬಂಧಕ ಎಸ್.ಎಸ್. ಬೀಳಗಿಪೀರ ಮಾತನಾಡಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಬಸವರಾಜಪ್ಪ ಹಂಚಿನಾಳ, ಕರಬಸಪ್ಪ ಹಂಚಿನಾಳ, ಈರಣ್ಣ ಹಂಚಿನಾಳ, ಶಾಶ್ವತಪ್ಪ ಹಂಚಿನಾಳ, ಸೋಮಣ್ಣ ಹಂಚಿನಾಳ, ಮಂಜುನಾಥ ಹಂಚಿನಾಳ ಹಾಗೂ ಈಶ್ವರಪ್ಪ ಹಂಚಿನಾಳ ಅಭಿಮಾನಿ ಬಳಗದ ಎಲ್ಲರೂ ಉಪಸ್ಥಿತರಿದ್ದರು.

''ಬದುಕಿನ ಪಯಣ'' ಚಿತ್ರ ಸಂಪುಟ ಕೃತಿ ಸಂಪಾದಕ ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೀರೇಶ ಹಂಚಿನಾಳ ಸ್ವಾಗತಿಸಿದರು. ಸಿ.ಎಸ್. ಅರಸನಾಳ, ಜಿ.ಎಂ. ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಎಸ್.ವಿ. ಪಾಟೀಲ ವಂದಿಸಿದರು.