ಹುಚ್ಚು ಹುಚ್ಚಾಗಿ ಮಾತನಾಡಿದರೆ ಅವರಿಗೆ ತಲೆಕೆಟ್ಟಿದೆ ಎಂದೇ ಅರ್ಥ: ರೆಡ್ಡಿ

| Published : Jun 20 2024, 01:04 AM IST

ಸಾರಾಂಶ

ಪ್ರತಿಭಟನೆ ಮಾಡುವುದಕ್ಕೆ ಅವರಿಗೆ ಹಕ್ಕಿದೆ. ನಾವು ಸಹ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ, ಅವರು ನನ್ನ ವಿರುದ್ಧ ಪ್ರತಿಭಟನೆ ಮಾಡಲಿ.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಾನು ಸತ್ಯ ಹೇಳಿದರೆ ಅವರು ತಪ್ಪಾಗಿ ತಿಳಿದುಕೊಂಡು ಹುಚ್ಚು ಹುಚ್ಚಾಗಿ ಮಾತನಾಡಿದರೆ ಅವರಿಗೆ ತಲೆ ಕೆಟ್ಟಿದೆ ಎಂದೇ ಅರ್ಥ. ಪ್ರತಿಭಟನೆ ಮಾಡುವುದಕ್ಕೆ ಅವರಿಗೆ ಹಕ್ಕಿದೆ. ನಾವು ಸಹ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ, ಅವರು ನನ್ನ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡಲು ಸಾಧ್ಯವಿದ್ದರೆ ಆ ಕೆಲಸ ಮಾಡಲು ಲಾಯಕ್ಕು ಎನ್ನುವ ಅರ್ಥದಲ್ಲಿ ಹೇಳಿದರೆ ಕೆಲಸ ಮಾಡಲು ಆಗದೆ ಇದ್ದವರಿಗೆ ನಾಲಾಯಕ್ ಎನ್ನುತ್ತಾರೆ. ಹಾಗೆಯೇ ನಾನು ಗ್ಯಾರಂಟಿ ಪೂರೈಸಲು ಆಗದ ಸಿಎಂ ನಾಲಾಯಕ್ ಎಂದಿದ್ದೇನೆ ಅಷ್ಟೇ. ಅದರಲ್ಲಿ ತಪ್ಪೇನಿದೆ. ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ನಾಲಾಯಕ್‌ ಎಂಬ ಪದ ಬಳಕೆಯಲ್ಲಿದೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಸುಳ್ಳು ಗ್ಯಾರಂಟಿಗಳನ್ನು ಹೇಳಿ, ಅದನ್ನು ನಿಭಾಯಿಸಲು ಆಗದೆ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಭಾರ ಮಾಡುತ್ತಿದ್ದಾರೆ, ಹೀಗಾಗಿ, ಜನರೇ ಸರ್ಕಾರವನ್ನು ಬೀಳಿಸುತ್ತಾರೆ ಎಂದರು.

ವಾಲ್ಮೀಕಿ ನಿಗಮದಲ್ಲಿ ದೊಡ್ಡ ಹಗರಣ ನಡೆದಿದೆ. ಹಣಕಾಸಿನ ಅನುಮತಿ ಇಲ್ಲದೆ ಅದು ಆಗಲು ಸಾಧ್ಯವೇ ಇಲ್ಲ. ಸಚಿವನಾಗಿದ್ದ ನಾಗೇಂದ್ರ ಮಾತ್ರ ವೈಯಕ್ತಿಕವಾಗಿ ಹಣ ವರ್ಗಾವಣೆ ಮಾಡಿಸಿದ್ದಾನೆ ಎನ್ನಲು ಸಾಧ್ಯವೇ ಇಲ್ಲ. ಅದು ಆಗದ ಕೆಲಸವಾಗಿದ್ದು, ಹಣಕಾಸು ಇಲಾಖೆಯ ಅನುಮತಿ ಬೇಕೇಬೇಕು. ಅವರ ಪಾಲ್ಗೊಳ್ಳುವಿಕೆ ಇಲ್ಲದೆ ಆಗಲು ಸಾಧ್ಯವೇ ಇಲ್ಲ. ಸಿಎಂ ಅವರ ಬಳಿಯೇ ಹಣಕಾಸು ಇಲಾಖೆ ಇದೆ. ಆದರೂ ಹಗರಣ ಆಗಿದೆ ಅಂದರೆ ಏನರ್ಥ ಎಂದು ಪ್ರಶ್ನೆ ಮಾಡಿದರು.

ಈ ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯ ಅವರ ಗ್ಯಾರಂಟಿಗಳು ಅಲ್ಲವೇ ಅಲ್ಲ. ಪ್ರಶಾಂತ ಕಿಶೋರ ಅವರು ನೀಡುವ ಸಲಹೆಯಂತೆ ಬಳ್ಳಾರಿಯ ಸುನಿಲ್ ಎನ್ನುವವರು ನೀಡಿದ ಸಲಹೆ ಮೇಲೆಯೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಅದನ್ನು ಪೂರೈಕೆ ಮಾಡಲು ಆಗುತ್ತಿಲ್ಲ. ಹೀಗಾಗಿ, ಸರ್ಕಾರ ಮುಂದುವರೆಸಲು ಆಗುತ್ತಿಲ್ಲ ಎಂದರು.

ಮಣ್ಣು ಕಳ್ಳ ಎಂದಿದ್ದಾರಲ್ಲ ಇವರು, ಆ ಮಣ್ಣಿನ ದುಡ್ಡಿನಿಂದಲೇ ಪ್ರಥಮ ಬಾರಿಗೆ ಶಾಸಕನಾಗಿದ್ದಾನೆ ಎಂದು ಸಚಿವ ತಂಗಡಗಿ ಅವರ ಹೆಸರು ಹೇಳದೆ ಟಾಂಗ್ ನೀಡಿದರು. ಭೂ ತಾಯಿ ಬಗ್ಗೆ ಹೀನಾಯವಾಗಿ ಮಾತನಾಡುವುದು ಸರಿಯಲ್ಲ. ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ. ಅದರ ವಿರುದ್ಧವೇ ನಾನು ಹೋರಾಟ ಮಾಡುತ್ತಿದ್ದೇನೆ, ಈಗ ಜನರ ಮಧ್ಯ ಬಂದು, ಶಾಸಕನಾಗಿದ್ದೇನೆ ಎಂದರು.