ಸಾರಾಂಶ
- ತಾಲೂಕುಮಟ್ಟದ ಪುಷ್ಪಗಿರಿ ಸ್ವಸಂಘಗಳ ಸ್ನೇಹ ಸಮ್ಮಿಲನ- ಸಾಂಸ್ಕೃತಿಕ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ನ್ಯಾಮತಿ
ಮನೆ ಮನೆಗಳಲ್ಲಿ ಮಹಿಳೆ ಅಂತರಂಗದಲ್ಲಿ ಜಾಗೃತಿಯಾದರೆ, ಅಂತಹ ಮನೆ ಎಂದಿಗೂ ಯಶಸ್ಸಿನ ಉತ್ತಂಗದಲ್ಲಿರುತ್ತದೆ. ಅದಕ್ಕೆ ಮನೆಯ ಯಜಮಾನನ ಸಹಕಾರ ಮರೆಯುವಂತಿಲ್ಲ ಎಂದು ಪುಷ್ಪಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಯರಗನಾಳ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ನ್ಯಾಮತಿ ಮತ್ತು ಹೊನ್ನಾಳಿ ತಾಲೂಕುಮಟ್ಟದ ಪುಷ್ಪಗಿರಿ ಸ್ವಸಂಘಗಳ ಸ್ನೇಹ ಸಮ್ಮಿಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಎಂಬುದು ಹೋಗಿ ನಾವು ಎಂಬ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು. ಮನೆಗಳಿಂದ ಜಾಗೃತಿ ಬದಲಾವಣೆ ಗಾಳಿ ಬೀಸಿ ದೇಶದ ಅಭಿವೃದ್ಧಿ ಕಾಣಲು ಸಾಧ್ಯವಿದ್ದು, ಹಳ್ಳಿಗಳಿಂದ ಬದಲಾವಣೆ ಆರಂಭವಾಗಲಿ ಎಂದು ಆಶಿಸಿದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ನಾವು ರಾಜಕಾರಣಿಗಳು, ಇಲ್ಲಿ ಅಧಿಕಾರ ಕುರ್ಚಿ ಶಾಶ್ವತವಲ್ಲ. ಆದರೆ, ಮಾಡುವ ಕಾಯಕ ಶಾಶ್ವತ ಅಂತಹ ಕೆಲಸಗಳನ್ನು ರಾಜ್ಯದಲ್ಲಿಯೇ ಗ್ರಾಮೀಣಾಭಿವೃದ್ಧಿ ಮೂಲಕ ಸ್ವಸಂಘಗಳ ಮೂಲಕ ಮಹಿಳೆಯರನ್ನು ಒಗ್ಗೂಡಿಸಿ ಸಮಾಜಿಕ ಕಳಕಳಿಯಿಂದ ಶಿಸ್ತುಬದ್ಧ ವ್ಯವಹಾರದ ಮೂಲಕ ರಾಜ್ಯದಲ್ಲಿಯೇ ಮೊದಲನೇಯ ಹೆಗ್ಗಳಿಕೆಗೆ ಶ್ರೀ ಕ್ಷೇತ್ರ ಪುಷ್ಪಗಿರಿ ಮಠ ಪಾತ್ರವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಈಗಾಗಲೇ ರಾಜ್ಯದ 10 ಜಿಲ್ಲೆಗಳಲ್ಲಿ ಪುಷ್ಪಗಿರಿ ಸ್ವಸಂಘದ ಹೆಸರಿನಲ್ಲಿ ಸಾವಿರಾರು ಸಂಘಗಳನ್ನು ಕಟ್ಟಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಗಳು ಮಾಡಬೇಕಿದ್ದ ಕೆಲಸಗಳನ್ನು ಮಠವೊಂದು ಮಾಡುತ್ತಿರುವುದು ಸಂತಸದ ವಿಷಯ ಎಂದರು.ಶ್ರೀ ಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀಗಳನ್ನು ಗ್ರಾಮದಲ್ಲಿ ಪೂರ್ಣಕುಂಭದೊಂದಿಗೆ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಲಾಯಿತು. ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಭಜನೆ, ಜಾನಪದ, ನೃತ್ಯ, ಕೋಲಾಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಾಯಿತು.
ವಿವಿಧ ಗ್ರಾಮಗಳಲ್ಲಿ ನಡೆದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮೀಣ ಭಾಗದ 20 ಮಹಿಳೆಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯರಗನಾಳ್ ಗ್ರಾಮದ ರುದ್ರಗೌಡ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯ ಎಂ.ಆರ್. ಮಹೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಕಂಚಿ, ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕೋಡಿಕೊಪ್ಪ ಶಿವಪ್ಪ, ಗಜೇಂದ್ರ ಗೆಜ್ಜುರು ಕೆಂಚಿಕೊಪ್ಪ, ವೀರಣ್ಣ, ಶೇಖರಪ್ಪ, ಗದ್ದೀಗೇಶಪ್ಪ, ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ನಾಗಯ್ಯ, ಯರಗನಾಳ್ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು, ಸ್ವಸಂಘಗಳ ಮಹಿಳೆಯರು ಮತ್ತಿತರರಿದ್ದರು.
- - - (-ಫೋಟೋ):