ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿಯೇ ಹಾಸಿಹೊದ್ದುಕೊಳ್ಳುವಷ್ಟು ಸಮಸ್ಯೆಗಳಿದ್ದು, ಮೊದಲು ಅವುಗಳ ಬಗ್ಗೆ ಗಮನಹರಿಸಬೇಕು. ಅದನ್ನೆಲ್ಲ ಬಿಟ್ಟು ವಿದ್ಯಾಮಂತ್ರಿಗೆ ಕನ್ನಡ ಬರುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬ ಹೇಳಿದನ್ನೇ ಗಂಭೀರವಾಗಿ ಪರಿಗಣಿಸಿ ಆತನ ಮೇಲೆ ಕ್ರಮಕ್ಕೆ ಸೂಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನಡೆ ಸರಿಯಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಮಂತ್ರಿ ಆದವರಿಗೆ ಮಾತೃ ಹೃದಯ ಇರಬೇಕು, ಯಾವುದೇ ಮಗುವನ್ನು ಮಗುವಾಗಿ ನೋಡಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವುದೇ ದೊಡ್ಡ ಸವಾಲಾಗಿರುವ ಈ ಸಮಯದಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಬಹಿರಂಗವಾಗಿಯೇ ಕ್ರಮಕ್ಕೆ ಸೂಚಿಸುವ ಮೂಲಕ ಮಧು ಬಂಗಾರಪ್ಪನವರು ಸಮಾಜಕ್ಕ ಏನು ಸಂದೇಶ ಕೊಡಲು ಹೊರಟಿದ್ದಾರೆ?. ಇದರಿಂದ ಇನ್ನುಳಿದ ವಿದ್ಯಾರ್ಥಿಗಳ ಮೇಲೆ ಹೇಗೆಲ್ಲ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಇವರ ಯೋಚಿಸಬೇಕು. ತಮ್ಮ ನಡತೆಯ ಬಗ್ಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಸಚಿವರ ಮಾತುಕೇಳಿ ಅಧಿಕಾರಿಗಳು ಒಂದು ವೇಳೆ ಆ ವಿದ್ಯಾರ್ಥಿಯ ಮೇಲೆ ಕ್ರಮಕ್ಕೆ ಮುಂದಾದರೆ ನಾವು ಸುಮ್ಮನಿರಲ್ಲ, ವಿದ್ಯಾರ್ಥಿಗೆ ಬೆಂಬಲವಾಗಿ ನಿಂತು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂದು ಈ ಹಿಂದೆ ಸದನವದಲ್ಲೂ ಕನ್ನಡ ಓದಲು ಬರದವರು ಶಿಕ್ಷಣ ಸಚಿವರಾದರೆ ಹೇಗೆ ಎಂದು ಚರ್ಚೆ ಆಗಿದೆ. ಅಲ್ಲದೆ ಇವರ ಸಹೋದರನೇ ಇವರ ಶಿಕ್ಷಣದ ಅರ್ಹತೆ, ಇವರ ಪಾಂಡಿತ್ಯದ ಬಗ್ಗೆ ಮಾತನಾಡಿದ್ದಾರೆ. ಇದೆಲ್ಲದರ ಜೊತೆಗೆ ತಮಗೆ ಕನ್ನಡ ಓದಲು ಬರುವುದಿಲ್ಲ ಎಂದು ಸ್ವತಹ ಮಧುಬಂಗಾರಪ್ಪನವರೇ ಒಪ್ಪಿಕೊಂಡಿದ್ದಾರೆ. ಹೀಗಿದ್ದೂ ವಿದ್ಯಾರ್ಥಿ ಪ್ರಶ್ನಿಸಿದ್ದನ್ನೇ ಗಂಭೀರವಾಗಿ ತೆಗೆದುಕೊಂಡು ಆತನ ಮೇಲೆ ಕ್ರಮವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸುವ ನೀವು ರಾಜ್ಯದಲ್ಲಿ ಶಿಕ್ಷಣದ ಆಡಳಿತವನ್ನು ದರ್ಪದಿಂದ, ಅಹಂಕಾರದಿಂದ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರು?. ಅಲ್ಲದೆ ಶಿಕ್ಷಕರಿಗೆ ಶಿಸ್ತುಕ್ರಮದ ಬೆದರಿಕೆ ಮೂಲಕವೇ ಸಚಿವರು ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ರಾಜು ವಾಲಿ, ವಿಜಯ ಜೋಶಿ, ಈರಣ್ಣ ರಾವೂರ, ಸಂಪತ್ ಉಪಸ್ಥಿತರಿದ್ದರು.