20ಕ್ಕೂ ಹೆಚ್ಚುವರಿ ಬಸ್ ಸೌಲಭ್ಯ ದೊರೆತರೆ ಸಮಸ್ಯೆ ಪರಿಹಾರ

| Published : Jan 25 2025, 01:01 AM IST

ಸಾರಾಂಶ

ಕೊಳ್ಳೇಗಾಲ ಬಸ್ ನಿಲ್ದಾಣದಿಂದ ನೇರೆ ರಾಜ್ಯ ಊಟಿಗೆ ಸಂಪರ್ಕ ಕಲ್ಪಿಸುವ ಸರ್ಕಾರಿ ಬಸ್‌ ಸೇವೆಗೆ ಶಾಸಕ ಕೃಷ್ಣಮೂರ್ತಿ ಮರು ಚಾಲನೆ ನೀಡಿದರು. ಡಿಪೋ ಅಧಿಕಾರಿ ಅಶೋಕ್, ನಗರಸಭಾಧ್ಯಕ್ಷೆ ರೇಖಾ, ಬಸ್ತಿಪುರ ರವಿ, ಬಸ್ತಿಪುರ ಶಾಂತರಾಜು ಇದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

20ಕ್ಕೂ ಹೆಚ್ಚು ಅಧಿಕ ಬಸ್‌ಗಳ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಕೊಳ್ಳೇಗಾಲ ಡಿಪೋದಿಂದ ಪತ್ರ ಬರೆಯಲಾಗಿದ್ದು ಬಸ್ ಸೌಲಭ್ಯ ದೊರೆತರೆ ಹಲವು ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಕೊಳ್ಳೇಗಾಲದಿಂದ, ಯಳಂದೂರು, ಚಾಮರಾಜನಗರ ಮಾರ್ಗವಾಗಿ ಊಟಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗೆ ಮರು ಚಾಲನೆ ನೀಡಿ ಮಾತನಾಡಿದರು. ಸ್ಥಗಿತಗೊಂಡಿರುವ ಬಸ್ ಮಾರ್ಗಗಳ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಈಗಾಗಲೇ

ಹೊರ ರಾಜ್ಯಗಳಿಗೆ ತೆರಳುವ ಬಸ್‌ಗಳಲ್ಲಿನ ಸಂಚಾರ ಸ್ಥಗಿತವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಹೊರ ರಾಜ್ಯಗಳಿಗೆ ತೆರಳುವ ಸಾರಿಗೆ ಬಸ್‌ಗಳನ್ನು ಯಾವ ಕಾರಣಗಾಗಿ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ಜಿಲ್ಲೆಯ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಅವರಿಗೆ ಈ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆಯುವಂತೆ ಸೂಚಿಸಿದ್ದೇನೆ. ಅವರು ಸಹ 20ಕ್ಕೂ ಹೆಚ್ಚಿನ ವಿಶೇಷ ಬಸ್‌ಗಳ ಅಗತ್ಯವಿದೆ ಎಂಬುದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಸಭೆ ನಡೆಸಿ ಸ್ಥಗಿತಗೊಂಡಿರುವ ಮಾರ್ಗಗಳಿಗೆ ಮರು ಚಾಲನೆ ನೀಡುವ ನಿಟ್ಟಿನಲ್ಲಿ ಪರಿಶೀಲಿಸಿಲಾಗುವುದು, ಇಂದಿನ ಊಟಿ ಬಸ್ ಸಂಚಾರಕ್ಕೂ ಪ್ರಯಾಣಿಕರ ಮನವಿ ಹಿನ್ನೆಲೆ ಕ್ರಮವಹಿಸಲಾಗಿದೆ ಎಂದರು.

ಬಸ್ ಮರು ಚಾಲನೆ, ಪ್ರಯಾಣಿಕರಲ್ಲಿ ಹರ್ಷ:

ಕಳೆದ 8 ತಿಂಗಳಿಂದ ಕೊಳ್ಳೇಗಾಲದಿಂದ ಚಾ.ನಗರ ಜಿಲ್ಲಾಕೇಂದ್ರದ ಮಾರ್ಗವಾಗಿ ನೆರೆ ರಾಜ್ಯದ ಊಟಿಗೆ ತೆರಳುತ್ತಿದ್ದ ಬಸ್‌ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರಿಗೆ ನಿರಾಸೆ ಉಂಟಾಗಿತ್ತು. ಮತ್ತೆ ಬಸ್ ಸಂಚಾರ ಆರಂಭವಾಗಬೇಕು ಎಂದು ಪ್ರಯಾಣಿಕರ ಒತ್ತಾಸೆಯಾಗಿತ್ತು. ಈ ಕುರಿತು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಸಮಯಪ್ರಜ್ಞೆ, ಪ್ರಯಾಣಿಕರ ದೂರಿಗೆ ಕಾಳಜಿ ವಹಿಸಿದ ಪರಿಣಾಮ ಊಟಿ ಮಾರ್ಗಕ್ಕೆ ಮತ್ತೆ ಕೆಎಸ್‌ಆರ್‌ಟಿಸಿ ಮರು ಸಂಚಾರದ ಅವಕಾಶ ದೊರೆತಿರುವುದು ಪ್ರವಾಸಿಗರಲ್ಲಿ ಸಂತಸ ಮೂಡಿದೆ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ‌.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ತಹಶಿಲ್ದಾರ್ ಬಸವರಾಜು, ಡಿವೈಎಸ್ಪಿ ಧರ್ಮೇಂದ್ರ, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಜಿಲ್ಲಾ ವಿಭಾಗೀಯ ನಿಯಂತ್ರಣ ಅಧಿಕಾರಿ ಅಶೋಕ್ ಕುಮಾರ್, ಡಿಪೋ ಮ್ಯಾನೇಜರ್ ಶಂಕರ್, ಜಿಲ್ಲಾ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬಸ್ತೀಪುರ ರವಿ, ತಾಲೂಕು ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಮೋಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ಬಸ್ತಿಪುರ ಶಾಂತರಾಜು, ರಮೇಶ್, ನಗರಸಭೆ ಸದಸ್ಯರಾದ ರಾಘವೇಂದ್ರ, ಸುಮ ಸುಬ್ಬಣ್ಣ, ಸಿಗ್ಬತ್ ಉಲ್ಲಾ ಇನ್ನಿತರರಿದ್ದರು.ಹೊರ ರಾಜ್ಯ ಸೇರಿದಂತೆ ಹಲವು ಮಾರ್ಗಗಳಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗಳು ಏಕೆ ಸ್ಥಗಿತಗೊಳಿಸಲಾಯಿತು. ಪುನಃ ಆ ಸೇವೆ ಅಗತ್ಯವಿದೆಯೇ ಎಂಬಿತ್ಯಾದಿ ಮಾಹಿತಿ ಪಡೆದು ಸಂಬಂಧಪಟ್ಟ ಸಾರಿಗೆ ವಿಭಾಗದ ಹಿರಿಯ ಅಧಿಕಾರಿಗಳು ಸಭೆ ನಡೆಸಬೇಕು. ಆ ಮೂಲಕ ಸ್ಥಗಿತಗೊಂಡ ಸಾರಿಗೆಗೆ ಮರು ಚಾಲನೆಗೂ ಆದ್ಯತೆ ನೀಡಬೇಕು, ಈ ನಿಟ್ಟಿನಲ್ಲಿ ನಾನು ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆಯುವೆ.

-ಎ.ಆರ್.ಕೃಷ್ಣಮೂರ್ತಿ, ಶಾಸಕ ಕೊಳ್ಳೇಗಾಲ