ಸಾರಾಂಶ
ವಾಯುಮಾಲಿನ್ಯದಿಂದ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ತೊಂದರೆಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯದಿದ್ದರೆ ಮುಂದಿನ ದಿನದಲ್ಲಿ ಅಪಾಯ ತಪ್ಪಿದ್ದಲ್ಲ ಮತ್ತು ಶುದ್ಧ ಗಾಳಿಯನ್ನು ಹಣ ನೀಡಿ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗದಂತೆ ಜವಾಬ್ದಾರಿಯ ವರ್ತನೆ ನಮ್ಮ ಮೇಲಿದೆ ಎಂದು ಪರಿಸರವಾದಿ ರಾಮಚಂದ್ರ ಎಚ್ಚರಿಸಿದರು. ಸರ್ಕಾರ ವಾಯು ಮಾಲಿನ್ಯದ ಅಪಾಯದ ಬಗ್ಗೆ ಎಚ್ಚರಿಸಿದ್ದು, ಎಲ್ಲಾ ಶಾಲೆಗಳಲ್ಲಿ ಅಮ್ಮನ ಹೆಸರಲ್ಲಿ ಒಂದು ಸಸಿ ನೆಟ್ಟು ಬೆಳೆಸಿ ಎಂದು ಹೇಳುತ್ತಿದೆ. ಪರಿಸರ ಸಮತೋಲನಕ್ಕೆ ಶೇ.೬೫ ರಷ್ಟು ಅರಣ್ಯ ಪ್ರದೇಶ ಇರಬೇಕು, ಆದರೆ ಅರಣ್ಯ ಪ್ರದೇಶ ಶೇ.೩೫ರಷ್ಟು ಮಾತ್ರ ಇದ್ದು, ಅಪಾಯವನ್ನು ಸೂಚಿಸುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ವಾಯುಮಾಲಿನ್ಯದಿಂದ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ತೊಂದರೆಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯದಿದ್ದರೆ ಮುಂದಿನ ದಿನದಲ್ಲಿ ಅಪಾಯ ತಪ್ಪಿದ್ದಲ್ಲ ಮತ್ತು ಶುದ್ಧ ಗಾಳಿಯನ್ನು ಹಣ ನೀಡಿ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗದಂತೆ ಜವಾಬ್ದಾರಿಯ ವರ್ತನೆ ನಮ್ಮ ಮೇಲಿದೆ ಎಂದು ಪರಿಸರವಾದಿ ರಾಮಚಂದ್ರ ಎಚ್ಚರಿಸಿದರು.ತಾಲೂಕಿನ ಪಡವಲಹಿಪ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶುದ್ಧವಾದ ಗಾಳಿ ಪಡೆಯಲು ಎಲ್ಲರೂ ಸಮರೋಪಾದಿಯಲ್ಲಿ ಗಿಡಮರಗಳನ್ನು ಬೆಳೆಸಬೇಕು ಮತ್ತು ನಮಗೆ ಶುದ್ಧವಾದ ಗಾಳಿ ಸಿಗದಿದ್ದರೆ ಉತ್ತಮ ಆರೋಗ್ಯದಿಂದ ಜೀವನ ನಡೆಸಲು ಸಾಧ್ಯ ಇಲ್ಲ. ಸರ್ಕಾರ ವಾಯು ಮಾಲಿನ್ಯದ ಅಪಾಯದ ಬಗ್ಗೆ ಎಚ್ಚರಿಸಿದ್ದು, ಎಲ್ಲಾ ಶಾಲೆಗಳಲ್ಲಿ ಅಮ್ಮನ ಹೆಸರಲ್ಲಿ ಒಂದು ಸಸಿ ನೆಟ್ಟು ಬೆಳೆಸಿ ಎಂದು ಹೇಳುತ್ತಿದೆ. ಪರಿಸರ ಸಮತೋಲನಕ್ಕೆ ಶೇ.೬೫ ರಷ್ಟು ಅರಣ್ಯ ಪ್ರದೇಶ ಇರಬೇಕು, ಆದರೆ ಅರಣ್ಯ ಪ್ರದೇಶ ಶೇ.೩೫ರಷ್ಟು ಮಾತ್ರ ಇದ್ದು, ಅಪಾಯವನ್ನು ಸೂಚಿಸುತ್ತಿದೆ. ಎಲ್ಲರೂ ಸಸಿಗಳನ್ನು ನೆಟ್ಟು, ಪೋಷಿಸಿ, ಬೆಳೆಸುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮತ್ತು ಅತ್ಯಗತ್ಯವಾಗಿದೆ ಎಂದರು.
ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಎಂ. ಕುಮಾರ್ ಮಾತನಾಡಿ, ದಿನೇ ದಿನೇ ವಾಹನಗಳು ಹೆಚ್ಚಾಗುತ್ತಿದೆ ಮತ್ತು ವಾಹನಗಳು ಉಗುಳುವ ಹೊಗೆಯಿಂದ ಮಾಲಿನ್ಯ ಹದಗೆಡುತ್ತಿದೆ. ಆದ್ದರಿಂದ ಹೆಚ್ಚು ಹೊಗೆ ಉಗುಳುವ ವಾಹನಗಳನ್ನು ಬಳಸದೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ, ಪರಿಸರ ಉಳಿಸಿ. ಗಿಡಮರಗಳು ನಾವು ಉಸಿರಾಡಿ ಬಿಡುವ, ವಾಹನಗಳಿಂದ ಬರುವ ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಶುದ್ಧವಾದ ಆಮ್ಲಜನಕವನ್ನು ನೀಡುತ್ತದೆ. ನಮ್ಮ ಉಸಿರಾಟಕ್ಕೆ ಆಮ್ಲಜನಕ ಅತ್ಯಾವಶ್ಯಕ. ಆದ್ದರಿಂದ ಎಲ್ಲರೂ ಸಸಿಗಳನ್ನು ನೆಟ್ಟು ಬೆಳೆಸಿ ಎಂದರು. ಪರಿಸರ ಸಂರಕ್ಷಣೆ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸತೀಶ್ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಫಯಾಜ್ ಪಾಷ ಅಧ್ಯಕ್ಷತೆ ವಹಿಸಿದ್ದರು. ಸಂದೀಪ್ ನಿರೂಪಿಸಿ, ಮಹೇಶ್ ಸ್ವಾಗತಿಸಿ, ರವಿ ವಂದಿಸಿದರು.