ಅಂಬೇಡ್ಕರ್ ನಾಮಫಲಕ ತೆರವುಗೊಳಿಸಿದರೆ ಮತದಾನ ಬಹಿಷ್ಕಾರ ಬೆದರಿಕೆ

| Published : Apr 27 2024, 01:15 AM IST

ಅಂಬೇಡ್ಕರ್ ನಾಮಫಲಕ ತೆರವುಗೊಳಿಸಿದರೆ ಮತದಾನ ಬಹಿಷ್ಕಾರ ಬೆದರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕ ತೆರವುಗೊಳಿಸಿದಲ್ಲಿ ಸಮಸ್ತ ದಲಿತ ಸಮುದಾಯ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಶುಕ್ರವಾರ ನಾಮಫಲಕ ಅಳವಡಿಸಿದ ಸ್ಥಳದ ಎದುರು ಪ್ರತಿಭಟಿಸಿ ತಹಸೀಲ್ದಾರ್ ಸುರೇಶಕುಮಾರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ನಗರದ ಸಂಗಮ್ ಟಾಕೀಸ್ ಬಳಿಯಿರುವ ವೃತ್ತದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕ ತೆರವುಗೊಳಿಸಿದಲ್ಲಿ ಸಮಸ್ತ ದಲಿತ ಸಮುದಾಯ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಶುಕ್ರವಾರ ನಾಮಫಲಕ ಅಳವಡಿಸಿದ ಸ್ಥಳದ ಎದುರು ಪ್ರತಿಭಟಿಸಿ ತಹಸೀಲ್ದಾರ್ ಸುರೇಶಕುಮಾರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ಸಾಮಾಜಿಕ ಹೋರಾಟಗಾರ್ತಿ ಕೆ.ಸಿ.ಅಕ್ಷತಾ ಮಾತನಾಡಿ, ಕೆಲವು ಮನುವಾದಿಗಳು ನಗರಸಭೆ ಆಯುಕ್ತರ ಮೇಲೆ ಒತ್ತಡ ಹಾಕಿ ಸಂಗಮ್ ವೃತ್ತದಲ್ಲಿ ಅಳವಡಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಎಂಬ ನಾಮಫಲಕ ತೆರವುಗೊಳಿಸಲು ಮುಂದಾಗಿದ್ದಾರೆ. ಅವರ ಮಾತು ಕೇಳಿ ನಗರಸಭೆ ಆಯುಕ್ತರು ನೀವು ತೆರವುಗೊಳಿಸದಿದ್ದರೆ ನಾವು ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನು ನೋಡಿದರೆ ದಲಿತರ ಓಣಿಯಲ್ಲಿ ಮಾತ್ರ ಅಂಬೇಡ್ಕರ್ ಇರಬೇಕಾ? ಎನ್ನುವ ಪ್ರಶ್ನೆ ಕಾಡುತ್ತಿದೆ. ನೀತಿ ಸಂಹಿತೆ ಇದೆ ಎಂದು ನೆಪ ಹೇಳುವ ನಗರಸಭೆ ಆಯುಕ್ತರು ಒಂದು ವೇಳೆ ನಾಮಫಲಕ ತೆರವುಗೊಳಿಸಿದರೆ, ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಇದರ ಮೇಲೂ ನಾಮಫಲಕ ತೆರವುಗೊಳಿಸಿದರೆ ಅದರಿಂದ ಆಗುವ ಅನಾಹುತಗಳಿಗೆ ನಗರಸಭೆ ಆಯುಕ್ತರೇ ಹೊಣೆ ಆಗಲಿದ್ದಾರೆ ಎಂದು ಎಚ್ಚರಿಸಿದರು.ಜೈ ಭೀಮ್ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಮತೀನಕುಮಾರ ಮಾತನಾಡಿ, ದೇಶದ ಆಡಳಿತ ವ್ಯವಸ್ಥೆಗಾಗಿ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಒಂದು ವೃತ್ತಕ್ಕೆ ನಾಮಕರಣ ಮಾಡಿದರೂ ಅದನ್ನು ಸಹಿಸಿಕೊಳ್ಳದೆ ದೇಶದ್ರೋಹ ಮಾಡುತ್ತಿದ್ದಾರೆ. ನಾಮಫಲಕ ತೆರವುಗೊಳಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅದನ್ನು ತೆರವುಗೊಳಿಸಲು ಮುಂದಾದಲ್ಲಿ ದಲಿತ ಸಂಘಟನೆಗಳ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು. ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕೂಸಗೂರ ಮಾತನಾಡಿ, ಸಂಗಮ್ ವೃತ್ತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲು 1993ರಲ್ಲಿಯೆ ನಗರಸಭೆಯಿಂದ ಒಪ್ಪಿಗೆ ಸೂಚಿಸಲಾಗಿದೆ. ಆದರೆ, ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಆದ್ದರಿಂದ ಇದೀಗ ನಾಮಫಲಕ ಹಾಕಿರುವುದು ಸರಿಯಿದೆ. ಅದನ್ನು ಯಾರೂ ತೆರವುಗೊಳಿಸಬಾರದು. ತೆರವುಗೊಳಿಸಿದರೆ ಹೋರಾಟ ಅನಿವಾರ್ಯವಾಗಲಿದೆ ಎಂದರು.ಕನ್ನಡಪರ ಸಂಘಟನೆಯ ಪರಮೇಶ್ವರಯ್ಯ ಮಠದ ಮಾತನಾಡಿದರು. ನಿಂಗಪ್ಪ ಬನ್ನಿಹಟ್ಟಿ, ಮೈಲಪ್ಪ ದಾಸಪ್ಪನವರ, ಮಲ್ಲೇಶಪ್ಪ ಮದ್ಲೇರ, ಸಚಿನ್, ಪ್ರವೀಣ ಮತ್ತಿತರರು ಇದ್ದರು.