ಸಾರಾಂಶ
ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಕ್ಕಾಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧಕ್ಕೆ ಡಿ.10ರಂದು ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ರಾಮದುರ್ಗ : ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಕ್ಕಾಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧಕ್ಕೆ ಡಿ.10ರಂದು ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಹೋರಾಟವನ್ನು ವಾಮಮಾರ್ಗ ಮೂಲಕ ಸರ್ಕಾರ ತಡೆಯಲು ಮುಂದಾದರೆ ದೊಡ್ಡಕ್ರಾಂತಿ ನಡೆಯಲಿದೆ. ಒಂದು ವೇಳೆ ರಸ್ತೆಯಲ್ಲಿ ಟ್ರ್ಯಾಕ್ಟರ್ ತಡೆದರೆ ಅದೇ ಸ್ಥಳದಲ್ಲಿ ಧರಣಿ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಬುಧವಾರ ನಗರದ ಖಾಸಗಿ ಹೊಟೇಲ್ ಸಭಾಭವನದಲ್ಲಿ ಸಮಾಜದ ಮುಖಂಡರೊಂದಿಗೆ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.10 ರಂದು ಲಕ್ಷಾಂತರ ರೈತರು, 5 ಸಾವಿರ ಟ್ರ್ಯಾಕ್ಟರ್‌ಗಳು ಮತ್ತು 10 ಸಾವಿರ ವಕೀಲರು ಸೇರಿ ಸುವರ್ಣಸೌಧದ ಎದುರು ಪ್ರತಿಭಟನೆ ಸ್ಥಳದಿಂದ ಸುವರ್ಣಸೌಧಕ್ಕೆ ಕಾಲ್ನಡಿಗೆಯ ಮೂಲಕ ತೆರಳಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಾರುತಿ ಕೊಪ್ಪದ, ವೀರರಾಣಿ ಚನ್ನಮ್ಮ ಟ್ರಸ್ಟ್ ಅಧ್ಯಕ್ಷ ಬಿ.ಎಫ್. ಬಸಿಡೋಣಿ, ಸಮಾಜದ ಮುಖಂಡರಾದ ಪರುತಗೌಡ ಪಾಟೀಲ, ವೈ.ಎಚ್. ಪಾಟೀಲ, ಪಿ.ಎಫ್. ಪಾಟೀಲ, ಬಾಳಪ್ಪ ಹಂಜಿ, ಜಿ.ವಿ. ನಾಡಗೌಡ್ರ ಇತರರಿದ್ದರು.