ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿ ಹೊರ ಬಂದಿದ್ದೀರಿ. ಇನ್ನಾದರೂ ಸಮಾಜಘಾತುಕ ಕೃತ್ಯದಲ್ಲಿ ತೊಡಗದೆ ನಿಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ಸಾಗಿಸಿ. ಮತ್ತೆ ಏನಾದರೂ ಅಪರಾಧ ಪ್ರಕರಣದಲ್ಲಿ ಕಂಡು ಬಂದರೆ ಕೇಸು ದಾಖಲಿಸಲಾಗುವುದು. ಮಾತ್ರವಲ್ಲ ರೌಡಿ ಶೀಟ್ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕಾಗಬಹುದು ಎಂದು ಡಿಸಿಪಿ ರೋಹನ ಜಗದೀಶ ಅವರು ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದರು.ನಗರದ ಕ್ಯಾಂಪ್ ಪ್ರದೇಶದ ಎಸಿಪಿ ಕಚೇರಿ ಆವರಣದಲ್ಲಿ ಗುರುವಾರ ರೌಡಿ ಶೀಟರ್‌ಗಳ ಪರೇಡ್ ನಡೆಸಿದ ಅವರು, ಪ್ರತಿ ರೌಡಿಗಳ ಚಟುವಟಿಕೆ ಕುರಿತು ಮಾಹಿತಿ ಪಡೆದರು. ಮಾಹಿತಿಯನ್ನು ಪೊಲೀಸ್ ಠಾಣೆಗಳಲ್ಲಿ ಇರುವ ಅಧಿಕಾರಿಗಳು, ಸಿಬ್ಬಂದಿ, ಬೀಟ್ ಪೊಲೀಸರು ಪಡೆದುಕೊಂಡು ನಿಗಾವಹಿಸುವಂತೆ ಅವರು ಸೂಚಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ರೋಹನ್ ಜಗದೀಶ್, ಕಳೆದ ಮೂರು ವರ್ಷದ ಅವಧಿಯಲ್ಲಿ ಸಮಾಜ ಘಾತುಕ ಕೃತ್ಯ, ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ 40 ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ಈ ವರ್ಷ ಕೂಡ 3 ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ನಗರ ಪ್ರದೇಶದಲ್ಲಿ ಒಟ್ಟು 1057 ಜನ ರೌಡಿ ಶೀಟರ್‌ಗಳಿದ್ದಾರೆ. ಅವರ ವಿರುದ್ಧ ಹಲವಾರು ವರ್ಷಗಳಿಂದ ಪ್ರಕರಣಗಳು ದಾಖಲಾಗಿವೆ. ಅಪರಾಧ ಚಟುವಟಿಕೆಗಳಿಂದ ದೂರ ಉಳಿಯುವವರನ್ನು ರೌಡಿ ಶೀಟರ್‌ದಿಂದ ಮುಕ್ತಗೊಳಿಸುವ ಪ್ರಕ್ರಿಯೆ ನಡೆಸಲಾಗುವುದು. ರೌಡಿ ಶೀಟರ್ ಗಡಿಪಾರು ಮಾಡುವಾಗ ಕೆಲವೊಂದು ನಿಯಮಗಳಿರುತ್ತವೆ. ಹೊಸ ಕಾಯ್ದೆ ಪ್ರಕಾರ ರಕ್ಷಣೆಗಾಗಿ ಒಳ್ಳೆಯ ನಡತೆ ಇದ್ದರೆ ಭದ್ರತೆ ಕೊಡಬೇಕಾಗುತ್ತದೆ. ಒಂದು ವೇಳೆ ಅವರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಅವರ ವಿರುದ್ಧ ರೌಡಿ ಶೀಟರ್ ಪುನಃ ಓಪನ್ ಆಗುತ್ತದೆ. ಕಳೆದ ಒಂದೂವರೆ ವರ್ಷದಿಂದ 17 ಶ್ಯೂರಿಟಿ ದಾಖಲಿಸಿದ್ದೇವೆ. ಈ ಪೈಕಿ ₹1ಲಕ್ಷ 77 ಸಾವಿರ ದಂಡವನ್ನು ಸರ್ಕಾರಕ್ಕೆ ಭರಿಸಲಾಗಿದೆ ಎಂದು ಮಾಹಿತಿ ನೀಡಿದರು.ಬೆಳಗಾವಿ ಖಡೇಬಜಾರ್ ವಿಭಾಗದ ಪ್ರದೇಶ ಟಿಳಕವಾಡಿ, ಖಡೇಬಜಾರ್, ಕ್ಯಾಂಪ್ ಹಾಗೂ ಉದ್ಯಮಭಾಗ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿ ಶೀಟರ್ ಪರೇಡ್ ನಡೆಸಲಾಗಿದೆ. ಅಪರಾಧ ಪ್ರಕರಣ ಹಿನ್ನೆಲೆಯಲ್ಲಿ ಇವರ ಮೇಲೆ ರೌಡಿ ಶೀಟರ್ ದಾಖಲಾಗಿದೆ. ಅಪರಾಧ ಪ್ರಕರಣದಲ್ಲಿ ಭಾಗಿಯಾದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.