ಸಾರಾಂಶ
ಧಾರವಾಡ : ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಬೀಜ, ಗೊಬ್ಬರ ನೀಡಲು ಅನಗತ್ಯ ಷರತ್ತು ವಿಧಿಸುವುದು, ಬೀಜ ಮತ್ತು ಗೊಬ್ಬರದ ಕೃತಕ ಅಭಾವ ಸೃಷ್ಟಿಸುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಲೈಸನ್ಸ್ ರದ್ದು ಪಡಿಸಿ, ಅವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೆಲವು ಮಾರಾಟಗಾರರು ಬೀಜ ಮತ್ತು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಅಂತಹ ಮಾರಾಟಗಾರರ ಲೈಸನ್ಸ್ ತಕ್ಷಣ ರದ್ದುಪಡಿಸಿ, ಅವರ ಮೇಲೆ ಕಾನೂನು ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕ್ರಮಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ವಾಡಿಕೆ ಮಳೆ (ಏಪ್ರಿಲ್ ಮತ್ತು ಮೇ (ಮೇ 25ರ ವರೆಗೆ) 91.9 ಮಿ.ಮೀ. ಇದ್ದು 120.1 ಮಿ.ಮಿ.ನಷ್ಟು ಮಳೆಯಾಗಿದೆ. ಪ್ರಮುಖವಾಗಿ ಮೇ 25ರ ವರೆಗೆ 50.5 ಮಿ.ಮೀ ವಾಡಿಕೆ ಮಳೆಗೆ 71.1 ಮಿ.ಮೀ ಶೇ. 40.79 ಮಳೆಯಾಗಿದೆ. ರೈತರು ಬಿತ್ತನೆ ಪೂರ್ವ ಚಟುವಟಿಕೆಗಳನ್ನು ಹಾಗೂ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಕಾಲಕ್ಕೆ ದೊರೆಯಬೇಕು ಎಂಬ ಸದುದ್ದೇಶದಿಂದ ತೀವ್ರ ಪ್ರಯತ್ನ ನಡೆದಿದೆ. ರಜಾ ದಿನಗಳಲ್ಲೂ ಸಹ ಬೀಜ ವಿತರಣೆ ನಡೆದಿದೆ. ಜಿಲ್ಲೆಯಲ್ಲಿ ಮಳೆ ಬಿಡಿಬಿಡಿಯಾಗಿ ಆಗುತ್ತಿದ್ದು, ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ದಟ್ಟಣೆ ಉಂಟಾದರೆ ತಕ್ಷಣ ಹೆಚ್ಚುವರಿ ಕೌಂಟರ್ ತೆರೆದು ಬೀಜ ವಿತರಿಸಲು ಕೃಷಿ ಇಲಾಖೆ ಮೂಲಕ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಕೃಷಿ ಜಾಗೃತ ಕೋಶದ ಅಧಿಕಾರಿಗಳು ನಿಯಮಿತವಾಗಿ ಎಲ್ಲ ಮಾರಾಟ ಮಳಿಗೆಗಳನ್ನು ಭೇಟಿ ನೀಡಿ ಪರಿಶೀಲನೆ ಕೈಗೊಂಡು ಜಿಲ್ಲಾದ್ಯಂತ ಯಾವುದೇ ನಕಲಿ ಕೃಷಿ ಪರಿಕರಗಳ ವಿತರಣೆ ಆಗದಂತೆ ನಿಗಾ ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 650ಕ್ಕೂ ಹೆಚ್ಚು ಬಿತ್ತನೆ ಬೀಜದ ಮಾದರಿಗಳನ್ನು ಹಾಗೂ ರಸಗೊಬ್ಬರದ 120 ಮಾದರಿಗಳನ್ನು ತೆಗೆದು ಗುಣಮಟ್ಟದ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಕೊಡಲಾಗಿದೆ.
ಪ್ರತಿ ವಿತರಣಾ ಕೇಂದ್ರದಿಂದ ವಿತರಿಸಲಾಗುವ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣವನ್ನು ಅಲ್ಲಿಯೇ ಪರೀಕ್ಷಿಸಿ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ಎಲ್ಲ ತಹಸೀಲ್ದಾರರಿಗೆ ಮತ್ತು ಸಹಾಯಕ ಕೃಷಿ ನಿರ್ದೇಶಕರಿಗೆ ನಿಯಮಿತವಾಗಿ ಖುದ್ದು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಬೀಜ, ಗೊಬ್ಬರ ವಿತರಣೆ ಕಾರ್ಯವನ್ನು ಪರಿಶೀಲಿಸಿ, ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಯಾವುದೇ ಕೃಷಿ ಪರಿಕರ ಮಾರಾಟ ಅಂಗಡಿಯವರು ಬೀಜ ಅಥವಾ ಗೊಬ್ಬರ ನೀಡಲು ಬೇರೆ ಕೃಷಿ ಪರಿಕರ ಖರೀದಿ ಮಾಡುಂತೆ ಕಂಡೀಷನ್ ಹಾಕಿದರೆ, ರೈತರು ನೇರವಾಗಿ ಕೃಷಿ ಇಲಾಖೆ ಹಾಗೂ ಜಾಗೃತದಳದ ಅಧಿಕಾರಿಗಳಿಗೆ ಅಥವಾ ತಹಸೀಲ್ದಾರ್ ಕಚೇರಿ ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ನೀಡಬಹುದು.
ಮುಂಗಾರು ಹಂಗಾಮಿನಲ್ಲಿ 2.70 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಇದ್ದು, ಉತ್ತಮ ಮಳೆಯ ಹಿನ್ನೆಲೆಯಲ್ಲಿ ಪ್ರಮುಖ ಬೆಳೆಗಳಾದ ಹೆಸರು, ಮುಸುಕಿನ ಜೋಳ, ಸೋಯಾ ಅವರೆ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಈಗಾಗಲೇ 5262 ಹೆ. ಪ್ರದೇಶದಲ್ಲಿ ಜಿಲ್ಲೆಯಾದ್ಯಂತ ಬಿತ್ತನೆ ಮಾಡಲಾಗಿದೆ. ಸಹಾಯಧನದಲ್ಲಿ 20,681 ಕ್ವಿಂಟಲ್‌ಗಳಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜ ವಿತರಣೆ ಬೇಡಿಕೆ ಇದ್ದು, ಈಗಾಗಲೇ ಒಟ್ಟು 23,779 ಕ್ವಿಂ ನಷ್ಟು ಬಿತ್ತನೆ ಬೀಜ ಲಭ್ಯವಿದೆ. ಹಾಗೆಯೇ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 56,243 ಮೆಟ್ರಿಕ್ ಟನ್‌ಗಳಷ್ಟು ವಿವಿಧ ಗ್ರೇಡಗಳ ರಸಗೊಬ್ಬರಗಳ ಅವಶ್ಯಕತೆ ಇದ್ದು, ಮೇ ಅಂತ್ಯದ ವರೆಗೆ 16,749 ಮೆಟ್ರಕ್ ಟನ್ ರಸಗೊಬ್ಬರ ವಿತರಿಸಲಾಗಿದೆ.
ಅಗತ್ಯವಿದ್ದಲ್ಲಿ ರೈತರು, ರೈತ ಸಂಪರ್ಕ ಧಾರವಾಡ (8277931302), ರೈತ ಸಂಪರ್ಕ ಗರಗ (8277931302), ರೈತ ಸಂಪರ್ಕ ಅಮ್ಮಿನಭಾವಿ (8277931310), ರೈತ ಸಂಪರ್ಕ ಕೇಂದ್ರ ಅಳ್ಳಾವರ (8277931301), ರೈತ ಸಂಪರ್ಕ ಹುಬ್ಬಳ್ಳಿ (8277931324), ರೈತ ಸಂಪರ್ಕ ಕೇಂದ್ರ ಛಬ್ಬಿ (8277931327), ರೈತ ಸಂಪರ್ಕ ಕೇಂದ್ರ ಶಿರಗುಪ್ಪಿ (9380275695), ರೈತ ಸಂಪರ್ಕ ಕೇಂದ್ರ ಕಲಘಟಗಿ (8660062215), ರೈತ ಸಂಪರ್ಕ ಕೇಂದ್ರ ತಬದಕಹೊನ್ನಳ್ಳಿ (8660062215), ರೈತ ಸಂಪರ್ಕ ಕೇಂದ್ರ ದುಮ್ಮವಾಡ (8277931341), ರೈತ ಸಂಪರ್ಕ ಕೇಂದ್ರ ಕುಂದಗೋಳ (6277931357), ರೈತ ಸಂಪರ್ಕ ಕೇಂದ್ರ ಸಂಶಿ (9902534595), ರೈತ ಸಂಪರ್ಕ ಕೇಂದ್ರ ಮೊರಬ (6277931370), ರೈತ ಸಂಪರ್ಕ ಕೇಂದ್ರ ಅಣ್ಣಿಗೇರಿ (8277931361) ಇವುಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆತಂಕ ಬೇಡ
ಅನಗತ್ಯವಾಗಿ ರೈತರು ಬೀಜ ಮತ್ತು ಗೊಬ್ಬರ ವಿಷಯದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ರೈತರು ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ, ರಸಗೊಬ್ಬರ ಖರೀದಿ ಮಾಡುವದರಿಂದ ಉಳಿದ ರೈತರಿಗೂ ಅನುಕೂಲವಾಗುತ್ತದೆ. ಸಮರ್ಪಕ ವಿತರಣೆಗೂ ಸಹಾಯವಾಗುತ್ತದೆ. ಒಂದೇ ರೈತ ಸಂಪರ್ಕ ಕೇಂದ್ರಕ್ಕೆ ಎಲ್ಲರೂ ಒಮ್ಮೆಲೇ ಬಂದಾಗ ಸ್ವಲ್ಪ ಮಟ್ಟಿನ ಗೊಂದಲ, ಹೆಚ್ಚಿನ ಸರತಿ ಸಾಲು ಉಂಟಾಗುತ್ತದೆ. ಜಿಲ್ಲೆಯಲ್ಲಿ ಬೀಜ, ರಸಗೊಬ್ಬರದ ಅಗತ್ಯ ದಾಸ್ತಾನು ಇದ್ದು ರೈತರು ಮಳೆ, ಹವಾಮಾನ ನೋಡಿಕೊಂಡು, ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಬಿತ್ತನೆ ಮಾಡಬೇಕು.
ದಿವ್ಯಪ್ರಭು, ಜಿಲ್ಲಾಧಿಕಾರಿಗಳ