ಉದ್ಯೋಗ ಮಾಡಿದರೆ ಕೇವಲ ಮನೆಯನ್ನು ಮಾತ್ರವೇ ಕಟ್ಟಲು ಸಾಧ್ಯವಿದ್ದು, ಉದ್ಯಮಿಗಳಾದರೆ ಸಾಮ್ರಾಜ್ಯವನ್ನೇ ಕಟ್ಟಬಹುದು. ಈ ಹಿನ್ನೆಲೆಯಲ್ಲಿ ಆರ್ಯವೈಶ್ಯ ಯುವಜನರು, ಮಕ್ಕಳು ಉದ್ಯಮಿಗಳಾಗುವಂತೆ ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಡಿ.25ರಿಂದ ಮೂರು ದಿನಗಳ ಕಾಲ ವಿಶ್ವ ಆರ್ಯವೈಶ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ ತಿಳಿಸಿದ್ದಾರೆ.

- ಡಿ.25ರಿಂದ ಬೆಂಗಳೂರಲ್ಲಿ ವಿಶ್ವ ಆರ್ಯವೈಶ್ಯ ಸಮಾವೇಶ । ಬ್ರಿಕ್ಸ್‌ನ 11 ದೇಶಗಳ ಪ್ರತಿನಿಧಿಗಳೂ ಭಾಗಿ: ಆರ್.ಪಿ.ರವಿಶಂಕರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಉದ್ಯೋಗ ಮಾಡಿದರೆ ಕೇವಲ ಮನೆಯನ್ನು ಮಾತ್ರವೇ ಕಟ್ಟಲು ಸಾಧ್ಯವಿದ್ದು, ಉದ್ಯಮಿಗಳಾದರೆ ಸಾಮ್ರಾಜ್ಯವನ್ನೇ ಕಟ್ಟಬಹುದು. ಈ ಹಿನ್ನೆಲೆಯಲ್ಲಿ ಆರ್ಯವೈಶ್ಯ ಯುವಜನರು, ಮಕ್ಕಳು ಉದ್ಯಮಿಗಳಾಗುವಂತೆ ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಡಿ.25ರಿಂದ ಮೂರು ದಿನಗಳ ಕಾಲ ವಿಶ್ವ ಆರ್ಯವೈಶ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ ತಿಳಿಸಿದರು.

ನಗರದ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಜಿಲ್ಲಾ ಆರ್ಯವೈಶ್ಯ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಆರ್ಯವೈಶ್ಯ ಸಮುದಾಯದ ಯುವಕರು, ಭವಿಷ್ಯದ ಪೀಳಿಗೆಯಾದ ಮಕ್ಕಳು ಉದ್ಯೋಗಿಗಳಾಗೇ ಉದ್ಯಮಿಗಳಾಗಬೇಕು, ಉದ್ಯೋಗದಾತರಾಗಬೇಕೆಂಬ ಕನಸು ಮಹಾಸಭಾ ಹೊಂದಿದೆ ಎಂದರು.

ಬೆಂಗಳೂರಿನ ವಿಶ್ವ ಆರ್ಯವೈಶ್ಯ ಸಮಾವೇಶದಲ್ಲಿ ನವೋದ್ಯಮಗಳನ್ನು ಆರಂಭಿಸುವುದರಿಂದ ಈಗಿರುವ ಉದ್ಯಮಗಳನ್ನು ವಿಸ್ತರಿಸುವ, ಅವುಗಳ ಸಾಮರ್ಥ್ಯ ಹೆಚ್ಚಿಸುವವರೆಗೆ ಎಲ್ಲ ರೀತಿಯ ಮಾರ್ಗದರ್ಶನ ನೀಡಲಾಗುವುದು. ಕರ್ನಾಟಕವಷ್ಟೇ ಅಲ್ಲ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಸಮಾಜ ಬಾಂಧವರು ಭಾಗವಹಿಸುವರು. ಬ್ರಿಕ್ಸ್‌ನ 11 ದೇಶಗಳೂ ತಮ್ಮ ಪ್ರತಿನಿಧಿಗಳನ್ನು ಸಮಾವೇಶಕ್ಕೆ ಕಳಿಸಲಿವೆ ಎಂದು ಅವರು ಹೇಳಿದರು.

ಸಮಾವೇಶಕ್ಕೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಆಹ್ವಾನಿಸಲಾಗುತ್ತಿದೆ. ಆಂಧ್ರದ ಕೈಗಾರಿಕಾ ಸಚಿವ ಬಿ.ಜಿ.ಭರತ್ ಸಮಾವೇಶದಲ್ಲಿ ಭಾಗವಹಿಸುವರು. ವಿಶ್ವದ ವಿವಿಧೆಡೆ ಇರುವಂತಹ ಆರ್ಯವೈಶ್ಯ ಸಮುದಾಯದ ಯಶಸ್ವಿ ಉದ್ಯಮಿಗಳು ಸಮಾವೇಶದಲ್ಲಿ ಮಾರ್ಗದರ್ಶನ ನೀಡಿ, ಪ್ರೋತ್ಸಾಹಕರ ಮಾತುಗಳನ್ನಾಡುವರು. ಜಾಗತೀಕರಣ ಈಗ ಉದ್ಯಮಿಗಳಿಗೆ ದೊಡ್ಡ ಶಕ್ತಿ ಕೊಟ್ಟಿದೆ. ರ್ಯಾಪಿಡೋ ರೀತಿ ಕಂಪನಿಗಳು ಹೆಚ್ಚು ಬಂಡವಾಳವಿಲ್ಲದೇ ಕೆಲವೇ ವರ್ಷಗಳಲ್ಲಿ 9 ಸಾವಿರ ಜನರಿಗೆ ಉದ್ಯೋಗ ನೀಡಿವೆ. ₹11 ಸಾವಿರ ಕೋಟಿ ವಹಿವಾಟು ನಡೆಸುತ್ತಿವೆ ಎಂದು ತಿಳಿಸಿದರು.

ಆರ್ಯವೈಶ್ಯ ಮಕ್ಕಳಲ್ಲಿ ಉದ್ಯಮಿಗಳಾಗುವ ಸಾಮರ್ಥ್ಯವಿದ್ದರೂ ಪೋಷಕರು ಅಂತಹ ಸಾಮರ್ಥ್ಯಕ್ಕೆ ತಣ್ಣೀರೆರೆಚುತ್ತಿದ್ದಾರೆ. ಮಕ್ಕಳಲ್ಲಿನ ಉದ್ಯಮಶೀಲತೆ ಸಾಮರ್ಥ್ಯ ಹೆಚ್ಚಿಸಬೇಕು. ಅಂತಹವನ್ನು ದೇಶ ಕಟ್ಟುವ ರೀತಿ ಬೆಳೆಸಬೇಕು. 2047ರ ವೇಳೆಗೆ ವಿಕಸಿತ ಭಾರತ ರೂಪಿಸುವ ಕನಸಿದೆ. ಅಷ್ಟರಲ್ಲಿ ಆರ್ಯವೈಶ್ಯ ಉದ್ಯಮಿಗಳಿಂದ ದೇಶದ ಜಿಡಿಪಿಗೆ ಶೇ.2ರ ಹೆಚ್ಚಿನ ಕೊಡುಗೆ ದೊರೆಯಬೇಕು. 10 ಸಾವಿರ ನವೋದ್ಯಮಗಳು ಆರ್ಯವೈಶ್ಯ ಸಮಾಜದಿಂದಲೇ ರೂಪುಗೊಳ್ಳಬೇಕು ಎಂದು ಅವರು ತಿಳಿಸಿದರು.

ಸರ್ಕಾರದ ನೆರವಿನ ಹಂಗು ನಮಗೆ ಬೇಡವೇ ಬೇಡ. ಸಮಾಜಕ್ಕೆ ಕೊಡುಗೆ ಕೊಡುವಂತಹ ಉದ್ಯಮಿಗಳಾಗಿ ನಮ್ಮ ಮುಂದಿನ ಪೀಳಿಗೆಯವರು ಬೆಳೆಯಬೇಕು. ಇದಕ್ಕೆ ಅಗತ್ಯವಾದ ಆತ್ಮವಿಶ್ವಾಸ ಮನೆಯಿಂದಲೇ ಕೊಡಬೇಕು. ಆರ್ಯವೈಶ್ಯರು ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಸಹ ಇಲ್ಲ. ಇಷ್ಟಾದರೂ ಸಮಾಜದ ಉದ್ಯಮಿಗಳು 2.5 ಲಕ್ಷ ಜನರಿಗೆ ಉದ್ಯೋಗ ನೀಡಿದ್ದಾರೆ. ಇಷ್ಟು ಸಾಲದು, ಸಮಾಜದ ಉದ್ಯಮಿಗಳು ಕನಿಷ್ಠ 10 ಲಕ್ಷ ಜನರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ರವಿಶಂಕರ್ ಹಾರೈಸಿದರು.

ರಾಜ್ಯ ವಾಸವಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಆರ್.ಎಲ್. ಪ್ರಭಾಕರ ಮಾತನಾಡಿ, ಸಮಸ್ಯೆ ಬಂದಾಗ ಸಂಘಟನೆ ಆಗುವುದು ಬೇಡ. ಸಮಸ್ಯೆ ಬರುವ ಮೊದಲೇ ಸಂಘಟನೆ ಆಗಬೇಕು. ಅಂತಹ ಸಂಘಟನಾ ಶಕ್ತಿ ಆರ್ಯವೈಶ್ಯ ಸಮಾಜದಲ್ಲಿರಲಿ. ಮಹಾಸಭಾದಿಂದ ವಿದ್ಯಾರ್ಥಿಗಳ ವ್ಯಾಸಂಗದಿಂದ ಹಿಡಿದು ಐಎಎಸ್ ಪರೀಕ್ಷಾ ತರಬೇತಿ, ಉದ್ಯಮ ಆರಂಭ, ಆರೋಗ್ಯ, ವೃದ್ಧಾಪ್ಯ ವೇತನ ಹಾಗೂ ಸಾವಿನ ಸಂದರ್ಭದಲ್ಲಿ ನೆರವಿನವರೆಗೆ ಹಲವಾರು ಯೋಜನೆ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

- - -

(ಬಾಕ್ಸ್‌)

* ಕನ್ನಡಪ್ರಭದ ಗೆದ್ದವರ ಸಿದ್ಧಸೂತ್ರದ ಸಾಧಕ

ಇದೇ ವೇಳೆ ಕನ್ನಡಪ್ರಭ ಹೊರತಂದ ಶೂನ್ಯದಿಂದ ಸಾಧನೆ ಮಾಡಿದ ಗೆದ್ದವರ ಸಿದ್ಧಸೂಕ್ತ ಪುಸ್ತಕದ ಸಾಧಕರ ಪೈಕಿ ಒಬ್ಬರಾದ ದಾವಣಗೆರೆ ಜನನಿ ಕೇಟರಿಂಗ್ ಸಂಸ್ಥಾಪಕ, ಮಾಲೀಕ ರಾಘವೇಂದ್ರ ಪದ್ಮನಾಭ ಶ್ರೇಷ್ಠಿ ಹಾಗೂ ನಾಗಮಣಿ ರಾಘವೇಂದ್ರ ಶ್ರೇಷ್ಠಿ ದಂಪತಿಗೆ ಮಹಾಸಭಾದಿಂದ ಗೌರವಿಸಿ, ಸನ್ಮಾನಿಸಲಾಯಿತು.

ಕೇವಲ ₹500 ಬಂಡವಾಳದೊಂದಿಗೆ ಸ್ವಯಂ ಉದ್ಯೋಗ ಆರಂಭಿಸಿ, ಇಂದು ಸುಮಾರು 350ಕ್ಕೂ ಹೆಚ್ಚು ಜನರಿಗೆ ನಿರಂತರ ಹಾಗೂ 3 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗದಾತರಾದ ಹಾಗೂ ಸಾವಿರಾರು ಜನರಿಗೆ ಆಸರೆಯಾದ ರಾಘವೇಂದ್ರ ಪದ್ಮನಾಭ ಶ್ರೇಷ್ಠಿ ಸಾಧನೆಗೆ ಕೊಂಡಾಡಲಾಯಿತು.

ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ನಾಗೇಂದ್ರಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆರ್ಯವೈಶ್ಯ ಕೋ-ಆಪ್ ಬ್ಯಾಂಕ್ ಮತ್ತು ಸೊಸೈಟಿಗಳ ಒಕ್ಕೂಟದ ಅಧ್ಯಕ್ಷ ಆರ್.ಜಿ.ಶ್ರೀನಿವಾಸ ಮೂರ್ತಿ, ರಾಜ್ಯ ಆರ್ಯವೈಶ್ಯ ವಿದ್ಯಾಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕೆ.ವಿ.ಅಮರೇಶ್, ಮಹಾಸಭಾ ಸಂಘಟನಾ ಕಾರ್ಯದರ್ಶಿ ಎ.ಆರ್.ರವಿಕುಮಾರ್, ಮುಖಂಡರಾದ ಬಿ.ಎಸ್. ನಟರಾಜ, ಕೆ.ವಿ. ಪ್ರಸನ್ನಕುಮಾರ, ಬಿ.ಟಿ.ಅಶ್ವಥರಾಜ, ಗುಂಡಾಲ್ ಮಂಜುನಾಥ, ಕಾಸಲ್ ವಿ.ಸತೀಶ, ಎಸ್. ಕಿರಣಕುಮಾರ, ಬಿ.ಗೀತಾ ಪ್ರಸಾದ, ಮಾಕಂ ನಾಗರಾಜ ಗುಪ್ತ, ಎಸ್.ಟಿ.ಕುಸುಮ ಶ್ರೇಷ್ಠಿ, ಡಿ.ಜಿ. ಜಯರಾಮ ಶ್ರೇಷ್ಠಿ, ರಾಮಕೃಷ್ಣ ಶ್ರೇಷ್ಠಿ, ಎಚ್.ಆರ್. ವಿಜಯ, ಜೆ.ಎಚ್. ದತ್ತಾತ್ರೇಯ ಶ್ರೇಷ್ಠಿ, ಬಿ.ಟಿ. ಹನುಮಂತ ಶೆಟ್ಟಿ, ಉಮಾ ಸಾಯಿರಾಮ, ಹೇಮಾ ಶ್ರೀನಿವಾಸ, ಶುಭಶ್ರೀ, ಸುನಿಲಕುಮಾರ ಇತರರು ಇದ್ದರು.

ಕಾರ್ಯಕ್ರಮದಲ್ಲಿ ನಾದಾಮೃತ ತಂಡ ಪ್ರಾರ್ಥನೆ ನೆರವೇರಿತು. ಬಿ.ಎಚ್.ಅಶೋಕ ಸ್ವಾಗತಿಸಿ, ಹಿರಿಯ ಪತ್ರಕರ್ತೆ ದೇವಿಕಾ ಸುನಿಲ್ ನಿರೂಪಿಸಿದರು.

- - -

-2ಕೆಡಿವಿಜಿ8: ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ಆರ್ಯವೈಶ್ಯ ಸಮಾವೇಶ ಉದ್ಘಾಟನೆ ನಡೆಯಿತು.