ಶ್ರೀನಿವಾಸಪುರ ಮತ್ತು ಕೋಲಾರ ತಾಲೂಕಿನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಪ್ರಚಾರ ಮಾಡುತ್ತಿದ್ದೇವೆ.

ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯ । ಎಂಎಲ್‌ಸಿ ಚುನಾವಣೆ ರಾಜಕೀಯ ಸಂದೇಶ ನೀಡಬೇಕು । ಸುರೇಶ್ ಗೆಲುವು ಖಚಿತ

ಕನ್ನಡಪ್ರಭ ವಾರ್ತೆ ಕೋಲಾರ

ಎಷ್ಟು ಚರ್ಚೆ ಮಾಡಿದರೂ ಈ ನಾಟಕಕ್ಕೆ ಪ್ರಶಸ್ತಿ ಕೊಡುವುದಾದರೆ ದೇಶದ ಎಲ್ಲ ಪ್ರಶಸ್ತಿ ಮೀರಿದ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಗೆ ಕೊಡಬೇಕು, ಅವರು ಆಸ್ಕರ್ ಪ್ರಶಸ್ತಿಗೆ ಯೋಗ್ಯರು ಎಂದು ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಿಧಾನ ಪರಿಷತ್ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಶ್ರೀನಿವಾಸಪುರ ಮತ್ತು ಕೋಲಾರ ತಾಲೂಕಿನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಪ್ರಚಾರ ಮಾಡುತ್ತಿದ್ದೇವೆ. ವಿದ್ಯಾವಂತ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ, ದಾಖಲೆ ಮತಗಳ ಅಂತರದಲ್ಲಿ ಸುರೇಶ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆ ರಾಜಕೀಯ ಸಂದೇಶ ನೀಡಬೇಕು, ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಪ್ರಜಾಪ್ರಭುತ್ವದ ಮೇಲಿನ ಪರೋಕ್ಷ ದಾಳಿಯನ್ನು ತಡೆಯಲು ಮೈತ್ರಿಕೂಟವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿ, ಚುನಾವಣಾ ಆಯೋಗದ ಕಾರ್ಯ ಸರಿ ಇಲ್ಲ ಎನ್ನುತ್ತೀರಿ, ಅದೇ ವ್ಯವಸ್ಥೆಯಲ್ಲಿ ನೀವು ಕರ್ನಾಟಕ, ಕೇರಳ, ತೆಲಂಗಾಣ, ಜಾರ್ಖಂಡ್‌ನಲ್ಲಿ ಎರಡನೇ ಬಾರಿ, ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದೀರಿ. ವ್ಯವಸ್ಥೆ ಸರಿ ಇಲ್ಲ ಎಂದಾದರೆ ಮೊದಲು ರಾಜೀನಾಮೆ ಕೊಟ್ಟು ನಂತರ ವ್ಯವಸ್ಥೆಯನ್ನು ಪ್ರಶ್ನಿಸಿ ಎಂದರು.

ಹಿಂದೆ ಒಂದು ಚುನಾವಣೆ ಎಂದರೆ ಕೊಲೆ, ಗಲಭೆ, ಮರು ಚುನಾವಣೆ ಸಾಮಾನ್ಯವಾಗಿತ್ತು. ಈಗ ಯಾವುದಕ್ಕೂ ಆಸ್ಪದವಿಲ್ಲದಂತೆ ಚುನಾವಣೆ ನಡೆಯುತ್ತಿದೆ. ಪ್ರಾಮಾಣಿಕವಾಗಿ ಚುನಾವಣೆ ನಡೆಸುತ್ತಿರುವ ಆಯುಕ್ತರ ರಾಜೀನಾಮೆ ಕೇಳುತ್ತಿರುವುದು ಸರಿಯೇ? ಅಕ್ರಮವಾಗಿ ಮತಗಳನ್ನು ತಿದ್ದಲು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ಕೇಳುತ್ತಿದ್ದೀರಾ ಎಂದು ಕಿಡಿಕಾರಿದರು.

ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-೭ ನೀಡಿದ ಆರೋಪಕ್ಕೆ ಉತ್ತರಿಸಿ, "ನಮೂನೆ-೭ ಕೊಟ್ಟ ತಕ್ಷಣ ಮತದಾರರ ಪಟ್ಟಿ ಅಳಿಕೆಯಾಗುತ್ತದೆಯೇ? ಪರಿಶೀಲನೆ ಮಾಡಬೇಕಾದ ಜವಾಬ್ದಾರಿ ಮತಗಟ್ಟೆ ಮಟ್ಟದ ಅಧಿಕಾರಿಗಳದ್ದು, ಅವರು ಪಕ್ಷದ ಕಾರ್ಯಕರ್ತರಲ್ಲ " ಎಂದರು.

ನ್ಯಾಯಾಲಯದ ಆವರಣದಲ್ಲಿರುವುದರಿಂದ ನ್ಯಾಯಾಲಯದ ಭಾಷೆಯಲ್ಲಿ ಹೇಳುವುದಾದರೆ ಇಬ್ಬರು ಕಕ್ಷಿದಾರರ ಪರ ಇಬ್ಬರು ವಕೀಲರು ವಕಾಲತ್ತು ವಹಿಸುತ್ತಾರೆ, ಇಬ್ಬರ ಪರ ತೀರ್ಪು ಬಂದ ಉದಾಹರಣೆ ಇದೆಯಾ? ತೀರ್ಪು ಕೊಡುವುದು ನ್ಯಾಯಾಧೀಶರ ಕೆಲಸ, ಹಾಗೆಯೇ ಇಲ್ಲಿ ಅಂತಿಮ ನಿರ್ಧಾರ ಮಾಡುವುದು ಅಧಿಕಾರಿಗಳ ಕೆಲಸ ಎಂದರು.

ಮತಗಟ್ಟೆ ಪ್ರತಿನಿಧಿ-೨ ಅವರು ಅರ್ಜಿ ಕೊಟ್ಟಿದ್ದಾರೆ, ಮತಗಟ್ಟೆ ಮಟ್ಟದ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳುವವರು, ಅವರು ಅರ್ಜಿಯನ್ನು ಸ್ವೀಕರಿಸಬಹುದು, ತಿರಸ್ಕರಿಸಬಹುದು, ಎರಡಕ್ಕೂ ಕಾರಣ ಇರಬೇಕು, ಅರ್ಜಿ ಕೊಡುವುದೇ ಅಪರಾಧವಲ್ಲ, ನಮೂನೆ-೭ ಕೊಡುವುದೇ ಅಪರಾಧವಲ್ಲ ಎಂದರು.

ನಾವು ಸಾಮಾನ್ಯ ಹುಡುಕಾಟ ಮಾಡಿದ್ದೇವೆ, ಕೃತಕ ಬುದ್ಧಿಮತ್ತೆ ಬಳಸಿ ಸಾಮಾನ್ಯ ಹೆಸರು ಇರುವುದನ್ನೆಲ್ಲ ಅನುಮಾನಾಸ್ಪದ ಎಂದು ಗುರುತಿಸಿ ಕೊಟ್ಟಿದ್ದೇವೆ, ಒಂದು ಹೆಸರು ಹಲವು ಕಡೆ ಇರುವುದು, ನಿನ್ನೆ ಬಂದವರು ಇಂದೇ ಪಟ್ಟಿಯಲ್ಲಿ ಇರುವುದು ಇವೆಲ್ಲ ಪರಿಶೀಲಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಸಂಯಮದ ಪಾಠ ಹೇಳಿಲ್ಲ, ಸಿಕ್ಕಿಬೀಳದಂತೆ ತಿನ್ನಿ ಎಂದಿದ್ದಾರೆ, ಇದು ಅಕ್ರಮಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂದು ಟೀಕಿಸಿದರು.