ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಒಳ್ಳೆಯದಲ್ಲ: ಗೃಹ ಸಚಿವ ಪರಮೇಶ್ವರ್ ಕಿಡಿ

| Published : Mar 24 2024, 01:32 AM IST

ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಒಳ್ಳೆಯದಲ್ಲ: ಗೃಹ ಸಚಿವ ಪರಮೇಶ್ವರ್ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಮಾರಕವೇ ಹೊರತು ಒಳ್ಳೆಯದಲ್ಲ. ಜನತೆ ಈಗಲೇ ಎಚ್ಚೆತ್ತುಕೊಂಡರೆ ದೇಶ ಉಳಿಯಲಿದೆ. ತಿನ್ನುವ ಅನ್ನಕ್ಕೆ ಜಿಎಸ್‌ಟಿ ಹಾಕುವ ಇವರು ರೈತರ ಹಿತಕಾಯುತ್ತಾರಾ ? ನೀವೇ ಯೋಚಿಸಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ತಿಪಟೂರುದೇಶವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಮಾರಕವೇ ಹೊರತು ಒಳ್ಳೆಯದಲ್ಲ. ಜನತೆ ಈಗಲೇ ಎಚ್ಚೆತ್ತುಕೊಂಡರೆ ದೇಶ ಉಳಿಯಲಿದೆ. ತಿನ್ನುವ ಅನ್ನಕ್ಕೆ ಜಿಎಸ್‌ಟಿ ಹಾಕುವ ಇವರು ರೈತರ ಹಿತಕಾಯುತ್ತಾರಾ ? ನೀವೇ ಯೋಚಿಸಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕರೆದಿದ್ದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶ ಸಾಕುವ ರೈತರು, ಕಾರ್ಮಿಕರು, ಮಹಿಳೆಯರ ಹಿತ ಬಿಜೆಪಿ ಸರ್ಕಾರಕ್ಕೆ ಬೇಕಿಲ್ಲ. ಶ್ರೀಮಂತರ ಸಂಪರ್ಕದಲ್ಲಿರುವ ಪ್ರಧಾನಿ ಮೋದಿಗೆ ಯಾರ ಕಷ್ಟವೂ ಅರ್ಥವಾಗುತ್ತಿಲ್ಲ. ಮೋದಿ ಕಳೆದ ಹತ್ತು ವರ್ಷಗಳಿಂದಲೂ ಯಾವೊಂದು ಜನೋಪಯೋಗಿ ಕೆಲಸ ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಾ ಸಂವಿಧಾನವನ್ನು ತಿರುಚುವಂತಹ ಕೆಲಸ ಮಾಡಿದ್ದಾರೆ. ಕಷ್ಟದಲ್ಲಿ ಜನ ಸಮುದಾಯ ಸಾಯುತ್ತಿದ್ದು ಹೋರಾಟಕ್ಕಿಳಿದ ರೈತರನ್ನು ಕೊಂದು ಅಧಿಕಾರ ನಡಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಲೋಕಸಭಾ ಚುನಾವಣೆ ರಾಜ್ಯದ ಭವಿಷ್ಯದ ಚುನಾವಣೆಯಾಗಿದೆ. ಜನರ ಬಳಿ ಮತ ಕೇಳುವ ಹಕ್ಕು ನಮ್ಮ ಪಕ್ಷಕ್ಕಿದ್ದು, ವಿಧಾನಸಭೆ ಚುನಾವಣೆಯಲ್ಲಿ ಕೊಟ್ಟ ಪಂಚ ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಕೇಂದ್ರದ ಬಿಜೆಪಿ ಸರ್ಕಾರ ಹಣಕ್ಕಾಗಿ ರಾಜಕೀಯ ಮಾಡುತ್ತಾ ಇಡಿ ಕೇಸು ದಾಖಲಿಸಿ ಹಣ ವಸೂಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಿಂದುತ್ವದ ಅಸ್ತ್ರಹಿಡಿದಿರುವ ಬಿಜೆಪಿ ನಾತುರಾಂ ಗೋಡ್ಸೆಯ ಪ್ರತಿಪಾದಕರಾಗಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಜನರ ಬಳಿಗೆ ಬರುವ ಇವರಿಗೆ ಮತ ಕೇಳುವ ನೈತಿಕತೆ ಇಲ್ಲ. ರೈತರ, ಕೃಷಿಕರ, ಮಹಿಳೆಯರ ಅಭಿವೃದ್ಧಿ ಇವರಿಗೆ ಬೇಕಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗಿಳಿದಿರುವ ಇವರು ಇದಕ್ಕೂ ಮೊದಲ ಒಬ್ಬರಿಗೊಬ್ಬರು ಕಚ್ಚಾಡುತ್ತಿದ್ದರು. ಅಧಿಕಾರ ದ ಆಸೆ, ಸ್ವಾರ್ಥ ರಾಜಕಾರಣಕ್ಕಾಗಿ ರಾಜಕೀಯಕ್ಕೆ ಬಂದಿದ್ದಾರೆ. ಇಲ್ಲಿ ಕಳೆದ ಬಾರಿ ಎಚ್.ಡಿ. ದೇವೇಗೌಡರನ್ನೇ ಸೋಲಿಸಿ ಕಳುಹಿಸಿದ್ದಾರೆ. ಈಗ ಹೊರಗಿನಿಂದ ಬಂದಿರುವ ವಿ.ಸೋಮಣ್ಣ ಗೆಲುವು ಸುಲಭವಲ್ಲ. ಒಕ್ಕಲಿಗರ ಸಮಾಜ ಹೆಚ್ಚು ಕಾಂಗ್ರೆಸ್‌ಗೆ ಬೆಂಬಲ ಕೊಡಲಿರುವ ಕಾರಣ ಮುದ್ದಹ ನುಮೇಗೌಡರ ಗೆಲುವು ಖಚಿತ ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ನೆಹರು, ಇಂದಿರಾ ಗಾಂಧಿ ಜಾರಿ ಮಾಡಿದ್ದ ಯೋಜನೆಗಳನ್ನೇ ಮುಂದುವರಿಸಿರುವ ಬಿಜೆಪಿ ನಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೆ ಮತ ಕೇಳಲು ಹಿಂದುತ್ವ, ಶ್ರೀರಾಮ ಬಿಟ್ಟರೆ ಬೇರೆ ಮಾತೆ ಇಲ್ಲ. ಈಗ ಮೋದಿ ಮೋಡಿ ನಡೆ ಯುವುದಿಲ್ಲ. ಮೋದಿಯ ಸುಳ್ಳು ಮಾತಿಗೆ ಮಾರುಹೋಗದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಮುದ್ದಹನುಮೇಗೌಡರನ್ನು ಗೆಲ್ಲಿಸಬೇಕೆಂದರು. ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ಗೌಡ, ಕೆಪಿಸಿಸಿ ವಕ್ತಾರರಾದ ಮುರುಳೀಧರಹಾಲಪ್ಪ, ನಿಕೇತ್‌ರಾಜ್‌ಮೌರ್ಯ, ಜಿಲ್ಲಾ ಮುಖಂಡರಾದ ರಾಮಕೃಷ್ಣ, ಸಂಜಯ್, ಶಶಿಹುಲಿಗುಂಟೆ, ಇಕ್ಬಾಲ್, ಮುತ್ತುರಾಜ್, ಷಣ್ಮುಖಪ್ಪ, ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೆನೂರು ಕಾಂತರಾಜು, ಮಾದಿಹಳ್ಳಿ ಪ್ರಕಾಶ್, ಆರ್.ಡಿ. ಬಾಬು ಸೇರಿದಂತೆ ನಗರಸಭಾ ಸದಸ್ಯರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.----------------------

ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಬಲಪಡಿಸಬೇಕಾಗಿದೆ. ಪ್ರಧಾನಿ ಮೋದಿಯ ಸುಳ್ಳಿಗೆ ಯಾರು ಮಾರು ಹೋಗಬೇಡಿ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ್ದೇವೆ. ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹರಿಯುವ ನೀರಿದ್ದಂತೆ ಒಂದು ಜಾಗಕ್ಕೆ ಸೀಮಿತವಾಗಿಲ್ಲ. ಅವರು ಸಮುದ್ರಕ್ಕೆ ಸೇರುವ ವ್ಯಕ್ತಿಯಾಗಿದ್ದಾರೆ.

- ಶ್ರೀನಿವಾಸ್. ಶಾಸಕರು, ಗುಬ್ಬಿ--------------------------------ಪಕೋಡಾ ಮಾರಿ ಎನ್ನುವ ಪ್ರಧಾನಿ ಬೇಕಾ?ಪ್ರತಿಯೊಂದಕ್ಕೂ ತೆರಿಗೆ ವಿಧಿಸಿ ಜನಸಾಮಾನ್ಯರು ಬದುಕು ನಡೆಸದಂತೆ ಮಾಡಿದ್ದಾರೆ. ಕೋಟಿ ಉದ್ಯೋಗ ಸೃಷ್ಟಿ ಎಂದು ಹೇಳಿದ ಪ್ರಧಾನಿ ಪಕೋಡ ಮಾರಿ ಎಂದು ಯುವಕರಿಗೆ ಹೇಳುತ್ತಾರೆ. ಇಂತಹ ಪ್ರಧಾನಿ ಮತ್ತೇ ಬೇಕೆ ಯುವಕರು ಯೋಚಿಸಬೇಕು. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕೇಂದ್ರ ಬಿಡಿಗಾಸು ಸಹಾಯ ಮಾಡಿಲ್ಲ. ಭಾಷಣದಲ್ಲಿ ಅಭಿವೃದ್ಧಿ ಬಗ್ಗೆ ಉದ್ದುದ್ದ ಭಾಷಣ ಕೊಚ್ಚಿಕೊಳ್ಳುವ ಮೋದಿ ಅಭಿವೃದ್ಧಿ ಮಾತ್ರ ಶೂನ್ಯ. ಇವರ ವಿರುದ್ಧ ಯಾರು ತಿರುಗಿ ಬೀಳುತ್ತಾರೋ ಇಡಿ, ಸಿಬಿಐಗೆ ಒಪ್ಪಿಸಿ ಹಣವನ್ನು ಲೂಟಿ ಮಾಡುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಡಿ ಎಂದರು. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಈ ಹಿಂದೆ ಲೋಕಸಭಾ ಸದಸ್ಯರಾಗಿದ್ದಾಗ ತುಮಕೂರು ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ ಮತ್ತೊಮ್ಮೆ ಇವರನ್ನು ಆರಿಸಿ ಕಳುಹಿಸುವುದು ನಮ್ಮ ಜವಾಬ್ದಾರಿ ಎಂದು ಸಚಿವ ಪರಮೇಶ್ವರ್‌ ಹೇಳಿದರು.