ಸಾರಾಂಶ
ಸಂವಿಧಾನ ಬದಲಾವಣೆ ಮಾಡುವುದಾಗಿ ನೀಡಿದ ಹೇಳಿಕೆ ಖಂಡನೀಯ. ಇದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ರಮೇಶ್ ಕಾಂಚನ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರು ಪದೇಪದೇ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಬಿಜೆಪಿ ನಾಯಕರಿಗೆ ನಿಜವಾದ ತಾಕತ್ತು ಇದ್ದರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸವಾಲೆಸೆದಿದ್ದಾರೆ.
ಎಲ್ಲಾ ಸಮುದಾಯದ ಜನರ ಮತವನ್ನು ಪಡೆದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ ಅನಂತ ಕುಮಾರ್ ಹೆಗಡೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾವಣೆ ಮಾಡುವುದಾಗಿ ಹೇಳಿದ ದರ್ಪದ ಮಾತು ಖಂಡನೀಯ. ಪದೇಪದೇ ಸಂಸದರಾಗಿ ಇಂತಹ ಹೇಳಿಕೆ ನೀಡುವುದು ಸಮಾಜದಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತದೆ. ಅವರ ಹೇಳಿಕೆಯಿಂದ ದೂರ ಇರುವುದಾಗಿ ಹೇಳಿ ಬಿಜೆಪಿ ನಾಯಕರು ಕೈತೊಳೆದುಕೊಂಡರೆ ಸಾಲುವುದಿಲ್ಲ, ಬದಲಾಗಿ ಅವರನ್ನು ಪಕ್ಷದಿಂದ ಹೊರಹಾಕಲಿ ಎಂದು ರಮೇಶ್ ಕಾಂಚನ್ ಹೇಳಿದ್ದಾರೆ.ಅನಂತ ಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ದವಾಗಿ ಮಾತನಾಡಿರುವುದು ಅವರ ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆ, ಬಾಯಿ ಮಾತಿಗೆ ಅಂತರ ಕಾಯ್ದುಕೊಂಡಿದ್ದೇವೆ ಎನ್ನುವ ಮೂಲಕ ಬಿಜೆಪಿ ಪಕ್ಷ ಅವರಿಗೆ ಮತ್ತಷ್ಟು ಮಾತನಾಡಲು ಅವಕಾಶ ಮಾಡಿಕೊಟ್ಟು ಪರೋಕ್ಷವಾಗಿ ಅವರ ಬೆಂಬಲಕ್ಕೆ ನಿಂತಿದೆ ಎನ್ನುವ ಅನುಮಾನ ಕಾಡುತ್ತಿದೆ ರಮೇಶ್ ಕಾಂಚನ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.