ಬಾಲಕಾರ್ಮಿಕರು ಕಂಡು ಬಂದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಿ: ಶಿಗ್ಗಾಂವಿ

| Published : Feb 04 2025, 12:32 AM IST

ಬಾಲಕಾರ್ಮಿಕರು ಕಂಡು ಬಂದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಿ: ಶಿಗ್ಗಾಂವಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಕಿತ್ತುಹಾಕಬೇಕು.

ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ತಹಸೀಲ್ದಾರ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಕಿತ್ತುಹಾಕಬೇಕು ಎಂದು ತಹಸೀಲ್ದಾರ ಅಶೋಕ ಶಿಗ್ಗಾಂವಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಬಾಲಕಾರ್ಮಿಕರ ಪುನರ್ವಸತಿ ಅಭಿಯಾನ 2.0 ಬಾಲ ಕಾರ್ಮಿಕತೆಯನ್ನು ನಿರ್ಮೂಲನೆ ಮಾಡಲು ಒಂದು ಹೆಜ್ಜೆ ಎಂಬ ಘೋಷವಾಕ್ಯದ ಅಡಿಯಲ್ಲಿ ನಡೆದ ರಕ್ಷಣಾ ಅಭಿಯಾನ ಕಾರ್ಯಾಚರಣೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನ ಅಂಗಡಿ ಮುಂಗಟ್ಟುಗಳ ಸರ್ವೆ ಮಾಡುವ ಮೂಲಕ ಹಾಗೂ ಅಪಾಯಕಾರಿಯ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದರೆ, ಆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಕೆಲಸ ಮಾಡಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಾಲ ಕಾರ್ಮಿಕ ಪದ್ದತಿಯನ್ನು ಮಟ್ಟ ಹಾಕಲು ತಾಲೂಕು ಮಟ್ಟದ ಅಧಿಕಾರಿಗಳಾದ ಪೊಲೀಸ್‌, ಕಂದಾಯ, ಕಾರ್ಮಿಕ , ಸಿಡಿಪಿಒ ಇಲಾಖೆ, ಗ್ರಾಮ ಪಂಚಾಯತಿಯ ಅಧಿಕಾರಿಗಳು, ಸದಸ್ಯರು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಬಾಲ ಕಾರ್ಮಿಕ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಬಸವರಾಜ ಹಿರೇಗೌಡರ ಮಾತನಾಡಿ, ನಾವು ಜನವರಿ ತಿಂಗಳಿನಿಂದ ಮಾರ್ಚ್‌ವರೆಗೆ ಜಿಲ್ಲಾದ್ಯಂತ ಎಲ್ಲ ತಾಲೂಕುಗಳಲ್ಲಿ ಬಾಲ ಕಾರ್ಮಿಕ ಪದ್ದತಿಯ ಕುರಿತು ಜಾಗೃತಿ ಮೂಡಿಸುವುದು, ಹೋಟೆಲ್ ಅಂಗಡಿ, ಗ್ಯಾರೇಜುಗಳು, ಕಟ್ಟಡ ಕಾಮಗಾರಿಗಳು ಸೇರಿದಂತೆ ಅನೇಕ ಕಡೆ ದಾಳಿ ಮಾಡುವ ಮೂಲಕ ಮಕ್ಕಳನ್ನು ರಕ್ಷಣೆ ಮಾಡಿ ಶಿಕ್ಷಣ ಕೊಡುವಂತೆ ಪಾಲಕರಿಗೆ ತಿಳಿಸಲಾಗುವುದು ಅಥವಾ ನಮ್ಮ ಇಲಾಖೆಯಿಂದ ಶಿಕ್ಷಣ ಕೊಡಿಸಲಾಗುವುದು. ಇದಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರ ಅಗತ್ಯ ಇದೆ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಗಮನಕ್ಕೆ ಬಂದಲ್ಲಿ ಸಹಾಯವಾಣಿ 1098 ಗೆ ಕರೆ ಮಾಡಿ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ದೈಹಿಕ ಪರಿವೀಕ್ಷಕಿ ಸರಸ್ವತಿ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ಕರೆತರಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಸತತವಾಗಿ ಒಂದು ವಾರಗಳ ಕಾಲ ಮಕ್ಕಳು ಗೈರಾದಲ್ಲಿ ಶಿಕ್ಷಕರು ಅವರ ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಬಸವರಾಜ ಗಾಣಿಗೇರ ಮಾತನಾಡಿದರು.

ಈ ಸಂದರ್ಭ ಸಿಡಿಪಿಒ ಯಲ್ಲಮ್ಮ ಹಂಡಿ, ಎಎಸ್‌ಐ ತಾಯಪ್ಪ, ಕಾರ್ಮಿಕ ನಿರೀಕ್ಷಕಿ ನಿವೇದಿತಾ, ರಮೇಶ ಕುರ್ನಾಳ, ಮಕ್ಕಳ ಸಹಾಯವಾಣಿ ಅಧಿಕಾರಿ ರಾಘವೇಂದ್ರ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.ಅಂಗಡಿ ಮಾಲೀಕರಿಗೆ ನೋಟಿಸ್‌:

ಕುಷ್ಟಗಿ ಪಟ್ಟಣದ ಕನಕದಾಸ ವೃತ್ತದಲ್ಲಿ ಇರುವ ಕಿರಾಣಿ ಅಂಗಡಿಯೊಂದರಲ್ಲಿ ಎರಡು ಮಕ್ಕಳು ಕೆಲಸ ಮಾಡುತ್ತಿದ್ದ ಹಿನ್ನೆಲೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.ಪಟ್ಟಣದಲ್ಲಿರುವ ಅಂಗಡಿ ಮುಂಗ್ಗಟ್ಟುಗಳಿಗೆ ಕಾರ್ಮಿಕ ಇಲಾಖೆ, ಬಾಲ ಮಕ್ಕಳ ಸಹಾಯವಾಣಿ, ಸಿಡಿಪಿಒ ಇಲಾಖೆ, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಬಾಲ ಕಾರ್ಮಿಕ ಪದ್ಧತಿಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದರು.ಕೆಲಸ ಮಾಡಿಸಿಕೊಳ್ಳುತ್ತಿದ್ದ ಕಿರಾಣಿ ಅಂಗಡಿಯ ಮಾಲೀಕರಿಗೆ ಬಾಲಕರ ಆಧಾರ್‌ ಕಾರ್ಡ್‌ ಹಾಗೂ ಗುರುತಿನ ಚೀಟಿ ಸೇರಿದಂತೆ ಮಕ್ಕಳ ದಾಖಲಾತಿಗಳನ್ನು ಫೆ. 5ರಂದು ಕೊಪ್ಪಳ ಮಕ್ಕಳ ರಕ್ಷಣಾ ಘಟಕದ ಕಾರ್ಯಾಲಯಕ್ಕೆ ತಂದು ಒಪ್ಪಿಸಬೇಕು ಎಂದು ನೋಟಿಸ್‌ ನೀಡಿದ್ದಾರೆ.ದಾಳಿಯ ಸಂದರ್ಭ ಕಾರ್ಮಿಕ ನಿರೀಕ್ಷಕಿ ನಿವೇದಿತಾ, ರಮೇಶ ಕುರ್ನಾಳ, ಮಕ್ಕಳ ಸಹಾಯವಾಣಿ ಅಧಿಕಾರಿ ರಾಘವೇಂದ್ರ ಕುಲಕರ್ಣಿ, ಪೊಲೀಸ್‌ ಇಲಾಖೆಯ ಸಿಬ್ಬಂದಿ ಸಂಗಮೇಶ, ಶರಣಪ್ಪ ಲೈನದ್, ಬಸವರಾಜ ಗಾಣಿಗೇರ ಸೇರಿದಂತೆ ಸಿಡಿಪಿಒ ಇಲಾಖೆಯ ಅಧಿಕಾರಿಗಳು ಇದ್ದರು.