ಮಕ್ಕಳು ಒಳ್ಳೆಯ ಸಂಸ್ಕಾರ ರೂಢಿಸಿಕೊಂಡರೆ ಸಾಧನೆ ನಿಶ್ಚಿತ

| Published : Apr 17 2024, 01:16 AM IST

ಸಾರಾಂಶ

ಈಗಂತು‌‌ ಮಕ್ಕಳನ್ನು ಪಾಲಕರು ಅತಿ ಹೆಚ್ವಿನ‌ ಮುತುವರ್ಜಿ ವಹಿಸಿ ಬೆಳೆಸುತ್ತಿದ್ದಾರೆ.‌ ಅದೇ ತೆರನಾಗಿ ಮಕ್ಕಳು ತಂದೆ ತಾಯಿಯಲ್ಲೇ ದೇವರನ್ನು ಕಾಣಿ. ಹೀಗಾಗಿ ಶಿಕ್ಷಣ ಜತೆಗೆ ವಿನಯ ಹಾಗೂ ಹಿರಿಯರ ಬಗ್ಗೆ ಗೌರವ ಗುಣ ಹೊಂದುವುದು ಬಹಳ ಮುಖ್ಯವಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಶಿಕ್ಷಣದ ಜತೆಗೇ ಮಕ್ಕಳು ಒಳ್ಳೆಯ ಸಂಸ್ಕಾರ ರೂಢಿಸಿಕೊಂಡರೆ ನಿಶ್ಚಿತವಾಗಿ ಸಾಧನೆ ಮಾಡಬಹುದಾಗಿದೆ ಎಂದು ಹಿರಿಯ ಪತ್ರಕರ್ತ ಶಂಕರ ಕೊಡ್ಲಾ ಹೇಳಿದರು.

ಇಲ್ಲಿನ ರಂಗಾಯಣ ಪ್ರಸಕ್ತವಾಗಿ ಹಮ್ಮಿಕೊಂಡಿರುವ ಚಿಣ್ಣರ ಮೇಳದ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಡೊಳ್ಳು ಬಾರಿಸುವ‌ ಮೂಲಕ ಉದ್ಘಾಟಿಸಿ ಮಾತನಾಡಿದರು.‌

ಈಗಂತು‌‌ ಮಕ್ಕಳನ್ನು ಪಾಲಕರು ಅತಿ ಹೆಚ್ವಿನ‌ ಮುತುವರ್ಜಿ ವಹಿಸಿ ಬೆಳೆಸುತ್ತಿದ್ದಾರೆ.‌ ಅದೇ ತೆರನಾಗಿ ಮಕ್ಕಳು ತಂದೆ ತಾಯಿಯಲ್ಲೇ ದೇವರನ್ನು ಕಾಣಿ. ಹೀಗಾಗಿ ಶಿಕ್ಷಣ ಜತೆಗೆ ವಿನಯ ಹಾಗೂ ಹಿರಿಯರ ಬಗ್ಗೆ ಗೌರವ ಗುಣ ಹೊಂದುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ತಂದೆ ತಾಯಿಯನ್ನು ದಿನಾಲು ಅವರಿಗೆ ನಮಸ್ಕರಿಸಿ ದಿನದ ಕೆಲಸಗಳನ್ನು ಆರಂಭಿಸಿದರೆ ಸಂಸ್ಕಾರ ಬೆಳೆದು ಸರ್ವಾಂಗೀಣ ಅಭಿವೃದ್ಧಿ ಗೆ ಪೂರಕವಾಗುತ್ತದೆ ಎಂದು ಕೊಡ್ಲಾ ವಿವರಿಸಿದರು.

ಸಾಹಿತಿ ಚಂದ್ರಕಲಾ ಬಿದರಿ ಮಾತನಾಡಿ, ಮಕ್ಕಳಲ್ಲಿ ಅಗಾಧವಾದ ಕಲಿಕಾ ಶಕ್ತಿ ಇರುತ್ತದೆ. ಅದಕ್ಕೆ ಸರಿಯಾದ ಮಾರ್ಗ ದರ್ಶನ ದೊರೆತರೆ ಅವರಲ್ಲಿ ಅಡಗಿದೆ ಪ್ರತಿಭೆ ಹೊರ ಬರಲು ಸಹಾಯವಾಗುತ್ತದೆ. ಇಂಥ ಚಿಣ್ಣರ ಮೇಳಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ರಜಾ ದಿನಗಳಲ್ಲಿ ಆಯೋಜಿಸಲ್ಪಟ್ಟ ಶಿಬಿರಗಳು ಮಕ್ಕಳಿಗೆ ಹೊಸ ಸಾಧ್ಯತೆಗಳನ್ನು ಹೊಸ ಚೈತನ್ಯ ತುಂಬುತ್ತದೆ. ಪ್ರಮುಖವಾಗಿ ಅವರ ಸವಾ೯ಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಮಕ್ಕಳು ಶಿಬಿರದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಲಬುರಗಿ ರಂಗಾಯಣ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮಕ್ಕಳ ಸಾಹಿತಿ ಎ.ಕೆ.‌ರಾಮೇಶ್ವರ ಅಧ್ಯಕ್ಷತೆ ವಹಿಸಿ, ಇಂತಹ ಶಿಬಿರಗಳು ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ. ಈಗಂತು ರಜಾ ದಿನಗಳಲ್ಲಿ ಮೊಬೈಲ್ ಗೆ ಹೆಚ್ಚು ಹೊಂದಾಣಿಕೆಯಾಗುತ್ತಿರುವುದರಿಂದ ಇಂತಹ ಶಿಬಿರಗಳು ಮಕ್ಕಳಲ್ಲಿ ಪ್ರತಿಭೆಯನ್ನು ಹೊರ ಸೂಸುತ್ತವೆಯಲ್ಲದೇ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ ಎಂದು ವಿವರಣೆ ನೀಡಿದರು.

ರಂಗಾಯಣದ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಪ್ರಾಸ್ತಾವಿಕವಾಗಿ ಮಾತನಾಡಿ, ರಂಗಾಯಣದ ಈ ಶಿಬಿರ ಮಕ್ಕಳಲ್ಲಿ ಹುದುಗಿರುವ ಕಲೆಯನ್ನು ಹೊರ ತೆಗೆದು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.

ಬೇಸಿಗೆ ರಂಗ ತರಬೇತಿ ಶಿಬಿರದ ನಿರ್ದೇಶಕರಾದ ಕಲ್ಯಾಣಿ ಭಜಂತ್ರಿ ಸ್ವಾಗತಿಸಿದರು. ಶಿಬಿರದ ಸಂಪನ್ಮೂಲಗಳ ವ್ಯಕ್ತಿಗಳಾದ ರಾಜಕುಮಾರ ಎನ್.ಕೆ, ಶಾಂತಲಿಂಗಯ್ಯ ಎಸ್. ಮಠಪತಿ, ಸಿದ್ಧಾರ್ಥ ಕಟ್ಟಿಮನಿ, ಹಣಮಂತ ಭಜಂತ್ರಿ, ಉದಯಕುಮಾರ್ ಪುಲಾರೆ, ಭಾಗ್ಯಶ್ರೀ ಪಾಳಾ, ಗಂಗೋತ್ರಿ ಮಠಪತಿ, ಸುಹಾಸಿನಿ ಪುಲಾರೆ ಹಾಗೂ ಪದ್ಮಾ ಸೇರಿದಂತೆ ಮುಂತಾದವರಿದ್ದರು. ‌ಶಿಬಿರದ ಉದ್ಘಾಟನಾ ನಂತರ ಸಿದ್ಧರಾಮ ಕಾರಣಿಕ ರಚಿತ ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನ ನಡೆಯಿತು.