ಮಕ್ಕಳ ಹಕ್ಕು ರಕ್ಷಿಸದಿದ್ದರೆ ಭವಿಷ್ಯ ಹಾಳು

| Published : Mar 13 2025, 12:45 AM IST

ಸಾರಾಂಶ

ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ತಿದ್ದುಪಡಿ ಕುರಿತ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಕ್ಕಳ ಹಕ್ಕುಗಳ ರಕ್ಷಿಸದಿದ್ದರೆ ಓದು ಕುಂಠಿತಗೊಳ್ಳುವ ಜೊತೆಗೆ ಮಕ್ಕಳ ಭವಿಷ್ಯವೂ ಹಾಳಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್‌ ಎಚ್ಚರಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ೧೯೯೬ ತಿದ್ದುಪಡಿ ಕುರಿತು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ ತಳ್ಳೋದರಿಂದಲೂ ಮಕ್ಕಳ ಹಕ್ಕು ಕಸಿತದಂತಾಗಲಿದ್ದು, ಇಂಥ ಕಾರ್ಯಾಗಾರದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಯಾಗಬೇಕಾದರೆ ಸಮಾಜ ಹಾಗೂ ಸಾರ್ವಜನಿಕರಿಗೆ ಗ್ರಾಪಂ ಪಿಡಿಒಗಳು ತಿಳಿ ಹೇಳಬೇಕು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗೆ ನಿಷೇಧ ಹೇರಲಾಗಿದ್ದರೂ ಅಲ್ಲಲ್ಲಿ ನಡೆಯುತ್ತಿವೆ ಎಂದು ಬೇಸರ ಹೊರ ಹಾಕಿದರು.

ಮಕ್ಕಳು ಅಪರಾಧ ಮಾಡಿದರೂ ಜೈಲಿಗೆ ಹಾಕಲ್ಲ. ಮಕ್ಕಳ ಹಕ್ಕು ರಕ್ಷಣೆ ಎಲ್ಲರ ಮೇಲಿದೆ. ಕಾರಣ ಜೈಲಲ್ಲಿದ್ದರೆ ಆರೋಪಿಗಳೊಂದಿಗೆ ಮಕ್ಕಳ ಭವಿಷ್ಯಕ್ಕೆ ಕಳಂಕ ಬರುತ್ತದೆ ಎಂಬ ಕಾರಣಕ್ಕೆ ಜೈಲಿನಲ್ಲಿ ಹಾಕುತ್ತಿಲ್ಲ. ಮಕ್ಕಳು ಅಪರಾಧ ಮಾಡಿದರೂ ಮನ ಪರಿವರ್ತನೆಗೆ ಅವಕಾಶ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ. ಸವಿತ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹ ತಡೆಯಲು ಗ್ರಾಮಾಂತರ ಪ್ರದೇಶಗಳಲ್ಲಿ ಪಿಡಿಒಗಳು ಸಹಕಾರ ನೀಡಬೇಕು. ಅಲ್ಲದೆ ಹಳ್ಳಿಗಳಲ್ಲಿ ಮನೆ ಕಟ್ಟುವ ಮೊದಲು ಲೈಸನ್ಸ್‌ ಬಂದಾಗ ಶೇ.೧ರಷ್ಟು ಸೆಸ್‌ ಹಾಕಬೇಕು ಎಂದರು. ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಅಧ್ಯಕ್ಷತೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಬಚ್ಚಪನ್‌ ಬಚಾವೋ ಆಂದೋಲನದ ರಾಜ್ಯ ಸಂಯೋಜಕ ಬಿನು ವರ್ಗಿಸ್‌ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ೧೯೯೬ ತಿದ್ದುಪಡಿ ೨೦೧೬ ರ ಬಗ್ಗೆ ಸುದೀರ್ಘವಾಗಿ ಕಾರ್ಯಾಗಾರದಲ್ಲಿ ಮಾತನಾಡಿದರು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಷಣ್ಮುಗ, ಕಾರ್ಮಿಕ ನಿರೀಕ್ಷಕ ಆರ್.ನಾರಾಯಣಮೂರ್ತಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಮಹೇಶ್‌, ಗ್ರಾಪಂ ಪಿಡಿಒಗಳು ಹಾಗೂ ಕೆಲ ಗ್ರಾಪಂ ಅಧ್ಯಕ್ಷರು, ಇತರೆ ಸಂಘ, ಸಂಸ್ಥೆಗಳವರು ಇದ್ದರು.ಬಡತನದ ಕಾರಣಕ್ಕೆ ಮಕ್ಕಳು

ಬಾಲ ಕಾರ್ಮಿಕರಾಗಬಾರದು

ಗ್ರಾಮಾಂತರ ಪ್ರದೇಶದಲ್ಲಿ ಗ್ರಾಪಂ ಪಿಡಿಒಗಳು ಕೆಲಸದ ಸಮಯದಲ್ಲಿ ಬಾಲಕರು ದುಡಿಮೆ ಮಾಡೋದು, ಬಾಲ್ಯ ವಿವಾಹ ಕಂಡರೆ ನಮಗೆ ಸಂಬಂಧವಿಲ್ಲ ಎನ್ನಬೇಡಿ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಸಿವಿಲ್‌ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು. ಅಭಿವೃದ್ಧಿಗೆ ಪ್ರತಿಯೊಬ್ಬ ಪ್ರಜೆ ಮಾನಸಿಕ ಹಾಗೂ ದೈಹಿಕವಾಗಿ ಇರಬೇಕು. ಅನಾರೋಗ್ಯದಿಂದ ಕೂಡಿದ್ದರೆ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ. ಬಡತನ ಎಂಬ ಕಾರಣಕ್ಕೆ ಮಕ್ಕಳು ಬಾಲ ಕಾರ್ಮಿಕರಾಗಬಾರದು ಎಂದು ಪೋಷಕರು ಹಾಗೂ ಮಕ್ಕಳಿಗೂ ಅರಿವು ಮೂಡಿಸಿ ಎಂದರು.