ಕಾಂಗ್ರೆಸ್ ಅಧಿಕಾರಕ್ಕೆ‌ ಬಂದರೆ ಕೋಲಿ ಸಮಾಜದೊಂದಿಗೆ ಇರುತ್ತೇನೆ: ಖರ್ಗೆ ಭರವಸೆ

| Published : May 05 2024, 02:04 AM IST

ಕಾಂಗ್ರೆಸ್ ಅಧಿಕಾರಕ್ಕೆ‌ ಬಂದರೆ ಕೋಲಿ ಸಮಾಜದೊಂದಿಗೆ ಇರುತ್ತೇನೆ: ಖರ್ಗೆ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸಂವಿಧಾನ ಬದಲಾಯಿಸುವ ಬಿಜೆಪಿಯ ಹುನ್ನಾರ ಅದೇ ಪಕ್ಷದ ಸಂಸದ ಹಾಗೂ ಶಾಸಕರ ಮಾತುಗಳಲ್ಲಿ‌ ವ್ಯಕ್ತವಾಗಿದೆ. ಹಾಗಾಗಿ ಅವರಿಗೆ 2/3 ಮೆಜಾರಿಟಿ ಕೊಟ್ಟರೆ ಈ ದೇಶದಲ್ಲಿ‌ ಸಂವಿಧಾನ ಉಳಿಯುವುದಿಲ್ಲ ಅದಕ್ಕೆ ನೀವು ಆಸ್ಪದ ನೀಡಬಾರದು ಎಂದು ಖರ್ಗೆ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೋಲಿ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬೇಡಿಕೆ ಬಹಳ ವರ್ಷದಿಂದಲೇ ಇದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ.‌ ಆಗ ಎಷ್ಟೇ ಕಷ್ಟವಾದರೂ ಕೂಡಾ ನಾನು ನಿಮ್ಮ ಜೊತೆಯಲ್ಲಿರುತ್ತೇನೆ. ಕಾನೂನು ಪ್ರಕಾರ ನೀವು ಏನು ಹೇಳುತ್ತೀರಿ ಅದನ್ನು ಮಾಡುತ್ತೇನೆ. ನಾನು ರಾಜ್ಯಸಭಾ ಸದಸ್ಯನಾಗಿರುವುದಿಂದ ಇತರೆ ಸದಸ್ಯರಿಗೆ ಒಪ್ಪಿಸುವ ಕೆಲಸ ಮಾಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷರಾದ‌ ಮಲ್ಲಿಕಾರ್ಜುನ ಖರ್ಗೆ ಅಭಯ ನೀಡಿದರು.

ಕಲಬುರಗಿ ನಗರದ ಎನ್‌ವಿ ಕಾಲೇಜು ಮೈದಾನದಲ್ಲಿ ನಡೆಸ ಕೋಲಿ ಕಬ್ಬಲಿಗ ಸಮಾಜ ಏರ್ಪಡಿಸಿದ ಸಭೆಯಲ್ಲಿ ಅವರು ಮಾತನಾಡಿದರು.

ತಮ್ಮ ರಾಜಕೀಯ ಜೀವನಕ್ಕೆ ಬುನಾದಿ ಹಾಕಿದ ಗುರುಮಠಕಲ್ ಜನರನ್ನು ನೆನಪಿಸಿಕೊಂಡ ಖರ್ಗೆ ನಾನು ಬೇರೆಯವರಂತೆ ಸುಳ್ಳು ಹೇಳುವುದಿಲ್ಲ. ನಾನು ಮಾಡುವುದನ್ನೇ ಹೇಳುತ್ತೇನೆ. ಭ್ರಷ್ಟಾಚಾರ ಮಾಡಿ ದುಡ್ಡು ತಿಂದಿಲ್ಲ. ಹಾಗೆ ಮಾಡಿದ್ದರೆ ಜನರು‌ 50 ವರ್ಷಗಳಿಂದ ನನ್ನನ್ನು ರಾಜಕೀಯದಲ್ಲಿ ಇಡುತ್ತಿರಲಿಲ್ಲ ಎಂದು ಹೇಳಿದರು.

ಸಂವಿಧಾನ ಬದಲಿಸುವ ಹುನ್ನಾರ: ದೇಶದ ಸಂವಿಧಾನ ಬದಲಾಯಿಸುವ ಬಿಜೆಪಿಯ ಹುನ್ನಾರ ಅದೇ ಪಕ್ಷದ ಸಂಸದ ಹಾಗೂ ಶಾಸಕರ ಮಾತುಗಳಲ್ಲಿ‌ ವ್ಯಕ್ತವಾಗಿದೆ. ಹಾಗಾಗಿ ಅವರಿಗೆ 2/3 ಮೆಜಾರಿಟಿ ಕೊಟ್ಟರೆ ಈ ದೇಶದಲ್ಲಿ‌ ಸಂವಿಧಾನ ಉಳಿಯುವುದಿಲ್ಲ ಅದಕ್ಕೆ ನೀವು ಆಸ್ಪದ ನೀಡಬಾರದು ಎಂದು ಖರ್ಗೆ ಎಚ್ಚರಿಸಿದರು.

ಈ ದೇಶದ ಅಖಂಡತೆಗೆ ಧಕ್ಕೆ ತರಲು ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರು ಪ್ರಯತ್ನಿಸುತ್ತಿದ್ದು, ಜನರು ಸಂವಿಧಾನ ರಕ್ಷಿಸುವ ದೇಶದ‌ ಒಗ್ಗಟ್ಟು ಉಳಿಸಿಕೊಂಡು ಹೋಗುವ ಪಕ್ಷಕ್ಕೆ ಮತ‌ ನೀಡಬೇಕು ಎಂದು ಕರೆ‌ನೀಡಿದ ಅವರು ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಕಾರ್ಮಿಕರು, ರೈತರು, ಮಹಿಳೆಯರು, ಬಡವರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ನಾವು ಪ್ರಶ್ನಿಸಿದರೆ ನಮ್ಮನ್ನು ಸದನದಿಂದ ಹೊರಗೆ ಹಾಕಿ ಕಾನೂನುಗಳನ್ನು ರೂಪಿಸುತ್ತಾರೆ ಎಂದು ಆಕ್ಷೇಪಿಸಿದರು.

ಸಂವಿಧಾನದ ಆರ್ಟಿಕಲ್ 371(ಜೆ) ಜಾರಿ: ಸಂವಿಧಾನಕ್ಕೆ ತಿದ್ದುಪಡಿ‌ ತಂದು ಆರ್ಟಿಕಲ್ 371(ಜೆ) ಜಾರಿಗೊಳಿಸಲು ಪಟ್ಟ ಕಷ್ಟಗಳನ್ನು ಜನರೆದುರು ಬಿಚ್ಚಿಟ್ಟ ಖರ್ಗೆ, 2009 ರ ಚುನಾವಣೆಯಲ್ಲಿ ಗೆದ್ದ ನಂತರ ಐದು ವರ್ಷದ ಒಳಗಾಗಿಯೇ ಎಲ್ಲ ಪಕ್ಷದ ಸಹಕಾರ ಹಾಗೂ ಬೆಂಬಲದಿಂದಾಗಿ ಆರ್ಟಿಕಲ್ 371 (ಜೆ) ಜಾರಿಗೊಳಿಸಲಾಯಿತು.

ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಾ ಸಂಸದ ಬಸವರಾಜ ಪಾಟೀಲ ಸೇಡಂ, ‘ಖರ್ಗೆ ಅವರು ಇಲ್ಲದಿದ್ದರೆ ಆರ್ಟಿಕಲ್ 371(ಜೆ) ಜಾರಿಯಾಗುತ್ತಿರಲಿಲ್ಲ’ ಎಂದಿದ್ದರು. ಆದರೂ ಕೂಡಾ ನಾನು ಇದನ್ನು ನಾನು ಎಲ್ಲಿಯೂ ಹೇಳಿಲ್ಲ. ಇದಕ್ಕೆಲ್ಲಾ ನೀವೆ ಕಾರಣ ನೀವೇ ನನ್ನನ್ನು ಆರಿಸಿ ಕಳಿಸಿರದಿದ್ದರೆ ಇದು ಸಾಧ್ಯವಾಗುತ್ತಿಲ್ಲ. ನಾವು ಮಾಡುವ ಕೆಲಸವನ್ನು ನಾವು ಹೇಳಬಾರದು ಅದನ್ನು ಬೇರೆಯವರು ಹೇಳಬೇಕು ಎಂದು ಮಾರ್ಮಿಕವಾಗಿ ನುಡಿದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ ತಮಗೆ ಜೀವನದಲ್ಲಿ ಯಾವುದೇ ಆಸೆಗಳಿಲ್ಲ.ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸುವುದನ್ನು ನಾನು ನೋಡಬೇಕು ಎಂದರು.

ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗುವ ಅವಕಾಶ ಒದಗಿ ಬರಲಿದೆ.‌ಆಗ ನಮ್ಮ ಸಮಾಜದ ಬೇಡಿಕೆ ಈಡೇರಲಿದೆ. ಹಾಗಾಗಿ‌ ನೀವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತನೀಡಬೇಕು ಎಂದು ಮನವಿ ಮಾಡಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಸಿಂಗ್‌, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ ವೈ ಪಾಟೀಲ್ಶಿ, ಶಿವಣ್ಣ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರು, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ರಾಜಗೋಪಾಲರೆಡ್ಡಿ ಮುದಿರಾಜ, ಭೀಮಣ್ಣ ಸಾಲಿ , ಜಯಪ್ರಕಾಶ ಕಮಕನೂರು ಸೇರಿದಂತೆ ಹಲವರಿದ್ದರು.