ಸಾರಾಂಶ
ಕಾಯಕ ಜನೋತ್ಸವದಲ್ಲಿ ಮಡಿವಾಳ ಗುರುಪೀಠದ ಬಸವಮಾಚಿದೇವ ಸ್ವಾಮೀಜಿಕನ್ನಡಪ್ರಭ ವಾರ್ತೆ ಚಿತ್ರದುರ್ಗಭಕ್ತರು ಎಲ್ಲಿಯವರೆಗೂ ನನ್ನನ್ನು ಇಷ್ಟಪಡುತ್ತಾರೋ ಅಲ್ಲಿಯತನಕ ನಾನು ಸ್ವಾಮೀಜಿಯಾಗಿರುತ್ತೇನೆ. ಈಗಾಗಲೆ ರಾಜ್ಯಾದ್ಯಂತ ಸುತ್ತಾಡಿದ್ದೇನೆ. ನನಗೂ ವಯಸ್ಸು ಹಾಗೂ ಆರೋಗ್ಯದ ಸಮಸ್ಯೆ ಕಾಡಬಹುದು. ಹಾಗಾಗಿ ಯಾರಾದರೂ ಭಕ್ತರು ತಮ್ಮ ಮಕ್ಕಳನ್ನು ಮಠಕ್ಕೆ ನೀಡಿದರೆ ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದೆಂದು ಮಾಚಿದೇವ ಮಹಾಸಂಸ್ಥಾನ ಮಠ ಮಡಿವಾಳ ಗುರುಪೀಠದ ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ ಹೇಳಿದರು.
ನಗರದ ಹೊರವಲಯ ಮಡಿವಾಳ ಗುರುಪೀಠದಲ್ಲಿ ನಡೆದ ಶ್ರೀಮಠದ ಶಂಕುಸ್ಥಾಪನೆ ಹದಿನೈದನೆ ವಾರ್ಷಿಕೋತ್ಸವ, ಜಂಗಮದೀಕ್ಷೆಯ 25ನೇ ವರ್ಷ ಹಾಗೂ 40ನೇ ಜನ್ಮದಿನದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾಯಕ ಜನೋತ್ಸವ-2024ರ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಶರಣರು, ಸಂತರು ಆದರ್ಶವಾಗಿ ಬದುಕಿದವರು. ತತ್ವ,ಸಿದ್ಧಾತಗಳಿಗಾಗಿ ಬದುಕನ್ನೇ ಮುಡುಪಾಗಿಟ್ಟವರು. ಮಡಿವಾಳ ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮುದಾಯದ ಸಂಘಟನೆಗಾಗಿ ನಿರಂತರ ಶ್ರಮಿಸುತ್ತಿದ್ದೇನೆ. 2009ರಲ್ಲಿ ಮಠಕ್ಕೆ ಶಂಕುಸ್ಥಾಪನೆಯಾಯಿತು. ಎಲ್ಲಾ ಸಮುದಾಯಕ್ಕೂ ಒಬ್ಬ ಸ್ವಾಮೀಜಿಯನ್ನು ನೇಮಿಸ ಬೇಕೆಂಬ ಮಹದಾಸೆಯಿಂದ ಮುರುಘಾಮಠದ ಶರಣರು ನನ್ನನ್ನು ಮಡಿವಾಳ ಜನಾಂಗದ ಸ್ವಾಮೀಜಿಯನ್ನಾಗಿ ನೇಮಕ ಮಾಡಿದರು ಎಂದು ಸ್ಮರಿಸಿದರು.ಪ್ರತಿ ವರ್ಷ ಜ.6ರಂದು ಮಠದಲ್ಲಿ ಕಾಯಕ ಜನೋತ್ಸವ ನಡೆಯುತ್ತದೆ. ಈ ವರ್ಷ ಬರಗಾಲವಿರುವುದರಿಂದ ಸರಳವಾಗಿ ಆಚರಿಸಲು ತೀರ್ಮಾನಿಸಿದೆವು. ನಾವು ಯಾರನ್ನು ಆಹ್ವಾನಿಸುವುದಿಲ್ಲ. ಮಠ ನಿಮ್ಮದು ಎಂದು ತಿಳಿದುಕೊಂಡು ಪ್ರತಿ ವರ್ಷವೂ ಬರಬೇಕು. ಭಕ್ತರಿಗೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಜವಾಬ್ದಾರಿ ನಿಭಾಯಿಸುತ್ತೇನೆ. ಮುಂದಿನ ದಿನಗಳಲ್ಲಿ ಉತ್ತರಾಧಿಕಾರಿಯನ್ನು ನೇಮಕ ಮಾಡೋಣ. ಸಭಾಂಗಣದ ಮೇಲೆ ನಾಲ್ಕು ಸಾವಿರ ಜನ ಕುಳಿತುಕೊಳ್ಳುವಷ್ಟು ವಿಶಾಲವಾದ ಹಾಲ್ ನಿರ್ಮಾಣ ಮಾಡಲಾಗುವುದು. ಭಕ್ತಾಧಿಗಳು ತನು, ಮನ, ಧನವನ್ನು ನೀಡಿ ಮಠದ ಅಭಿವೃದ್ದಿಗೆ ಕೈಜೋಡಿಸುವಂತೆ ಸ್ವಾಮೀಜಿ ಮನವಿ ಮಾಡಿದರು.
ಯಡಿಯೂರ ಮೂಡಲಗಿರಿ ಮಾತನಾಡಿ, ಹನ್ನೆರಡನೆ ಶತಮಾನದ ಮಡಿವಾಳ ಮಾಚಿದೇವರ ವಚನಗಳನ್ನು ಇಂದಿನ ಪೀಳಿಗೆಗೆ ಅಭ್ಯಾಸ ಮಾಡಿಸಬೇಕು. ಮಡಿವಾಳ ಜನಾಂಗ ಎನ್ನುವ ಕಾರಣಕ್ಕಾಗಿ ನಮ್ಮನ್ನು ಬೇರೆಯವರು ನಿರ್ಲಕ್ಷದಿಂದ ಕಾಣುವಂತಾಗಿದೆ. ಅದಕ್ಕಾಗಿ ಎಷ್ಟೆ ಕಷ್ಟವಿರಲಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಹೊಣೆಗಾರಿಕೆ ಪೋಷಕರ ಮೇಲಿದೆ. ಶಿಕ್ಷಣದಿಂದ ಮಾತ್ರ ಕೀಳರಿಮೆಯಿಂದ ಮಡಿವಾಳ ಜನಾಂಗ ಹೊರಬರಲು ಸಾಧ್ಯ ಎಂದು ಹೇಳಿದರು.ಮಾಚಿದೇವರ 900 ವಚನಗಳಿವೆ. ಅವುಗಳನ್ನು ಎಲ್ಲರೂ ಕಂಠ ಪಾಠ ಮಾಡಬೇಕಿದೆ ಅದುವೆ ಮಡಿವಾಳ ಮಾಚಿದೇವರಿಗೆ ನಮ್ಮ ಜನಾಂಗ ಸಲ್ಲಿಸುವ ನಿಜವಾದ ಭಕ್ತಿ ಎಂದರು.ಎಂ.ಕೆ.ಹನುಮಂತಪ್ಪ, ಫಕೀರಪ್ಪ, ಡಾ.ಸಂಗಮೇಶ್ ಕಳಾಲ್, ನಿಜಲಿಂಗಪ್ಪ, ಮಂಜುಳಮ್ಮ, ಮಧು ಶಾಮನೂರ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ, ಮಡಿವಾಳ ಸಮಾಜದ ಮುಖಂಡರಾದ ಶಿವಲಿಂಗಪ್ಪ, ಕೆ.ಆರ್.ಮಂಜುನಾಥ್ ಅನೇಕರು ವೇದಿಕೆಯಲ್ಲಿದ್ದರು. ಗಂಗಾಧರ್ ಮತ್ತು ತಂಡದವರು ಪ್ರಾರ್ಥಿಸಿದರು. ವಕೀಲ ಸಿದ್ದನಕೊಪ್ಪಲು ಕುಮಾರ್ ಸ್ವಾಗತಿಸಿದರು. ಮಡಿವಾಳ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ನಿರೂಪಿಸಿದರು.