ಡಿಕೆಶಿ ಕಾಂಗ್ರೆಸ್‌ ತತ್ವ, ಸಿದ್ಧಾಂತಕ್ಕೆ ವಿರುದ್ಧ‍ವಾಗಿ ನಡೆದುಕೊಂಡಿದ್ದರೆ ಪಕ್ಷದಿಂದ ಹೊರಹಾಕಲಿ

| N/A | Published : Feb 28 2025, 12:49 AM IST / Updated: Feb 28 2025, 12:04 PM IST

Jagadish shettar
ಡಿಕೆಶಿ ಕಾಂಗ್ರೆಸ್‌ ತತ್ವ, ಸಿದ್ಧಾಂತಕ್ಕೆ ವಿರುದ್ಧ‍ವಾಗಿ ನಡೆದುಕೊಂಡಿದ್ದರೆ ಪಕ್ಷದಿಂದ ಹೊರಹಾಕಲಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಹಿಂದೂಗಳ ದೇಶ, ಇಲ್ಲಿ ಹಿಂದೂ ರಾಷ್ಟ್ರ ಅನ್ನುವ ಪರಂಪರೆ ಇದೆ. ಇದಕ್ಕೆ ಎಲ್ಲಿಯೂ ಅಡ್ಡಿಯಾಗಬಾರದು

ಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾಂಗ್ರೆಸ್ ತತ್ವ ಸಿದ್ಧಾಂತದ ವಿರುದ್ಧವಾಗಿದ್ದರೆ ಅವರನ್ನು ಪಕ್ಷದಿಂದ ಹೊರಹಾಕಲಿ ಎಂದು ಸಂಸದ ಜಗದೀಶ ಶೆಟ್ಟರ್‌ ಕಾಂಗ್ರೆಸ್ ಮುಖಂಡರಿಗೆ ಸವಾಲು ಹಾಕಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಮಹಾಕುಂಭ ಮೇಳದಲ್ಲಿ ಹಾಗೂ ಈಶಾ ಫೌಂಡೇಶನ್ ಸಮಾರಂಭದಲ್ಲಿ ಭಾಗಹಿಸಿರುವುದರಲ್ಲಿ ಯಾವುದೇ ದೊಡ್ಡಸ್ಥಿಕೆ ಇಲ್ಲ. ಇದು ಸರಿಯಲ್ಲ ಅಂದರೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದರು.

ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ದ್ವೇಷವಿದೆ. ಹಾಗಾಗಿಯೇ ಆ ಪಕ್ಷ ಇಂದಿಗೂ ಉದ್ಧಾರವಾಗಿಲ್ಲ. ಹಿಂದೂಗಳಿಲ್ಲದೇ ಕಾಂಗ್ರೆಸ್ ರಾಜಕಾರಣ ಮಾಡುತ್ತದೆ ಎಂದರೆ ಅದು ಅವರ ಹಣೆಬರಹ ಎಂದು ವ್ಯಂಗ್ಯವಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಿಂದೂ ವಿರೋಧಿಯಾಗಿವೆ. ಈ ದೇಶ ಹಿಂದೂಗಳ ದೇಶ, ಇಲ್ಲಿ ಹಿಂದೂ ರಾಷ್ಟ್ರ ಅನ್ನುವ ಪರಂಪರೆ ಇದೆ. ಇದಕ್ಕೆ ಎಲ್ಲಿಯೂ ಅಡ್ಡಿಯಾಗಬಾರದು. ಕಮ್ಯುನಿಸ್ಟರೂ ಸಹ ಹಿಂದೂ ದೇವಾಲಯಕ್ಕೆ ಹೋಗಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಸಾಕಷ್ಟು ನಾಯಕರು ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ರಾಜಕಾರಣಕ್ಕೆ, ಧರ್ಮಕ್ಕೆ ತಳಕು ಹಾಕಬಾರದು ಎಂದರು.

ಸಹೋದರರಂತೆ..: ಬೆಳಗಾವಿಯಲ್ಲಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಈ ಮೊದಲು ಮರಾಠ ಹಾಗೂ ಕನ್ನಡಿಗರ ನಡುವೆ ಅಂತರವಿತ್ತು. ಈಗ ಅದು ಬದಲಾಗಿದ್ದು, ಸಹೋದದರಂತೆ ಬದುಕುತ್ತಿದ್ದಾರೆ. ಸಂಘರ್ಷ ಯಾರೂ ಮಾಡಬಾರದು. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಆಗಬೇಕು. ನಿರ್ವಾಹಕನ ಮೇಲೆ ಪ್ರಕರಣ ದಾಖಲಿಸಿರುವುದು ಸಹ ತಪ್ಪು. ಸಹೋದರರಂತೆ ಜೀವನ ನಡೆಸುತ್ತಿದ್ದು, ಅದನ್ನು ಯಾರೂ ಕೆಡಿಸುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.