ಉದ್ಯೋಗ ಒದಗಿಸಿದರೆ ಪಡೆದ ಕುಟುಂಬವೇ ಉದ್ಧಾರ

| Published : Oct 21 2024, 12:40 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಯಾರಿಗಾದರೂ ಉದ್ಯೋಗ ಒದಗಿಸಿದರೆ ಉದ್ಯೋಗವನ್ನು ಪಡೆದ ಕುಟುಂಬವೇ ಉದ್ಧಾರವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ವೇದಿಕೆಯಾಗುವುದು ಅದೊಂದು ಪುಣ್ಯದ ಕಾರ್ಯ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಜಾಕ್ ಹೊರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾರಿಗಾದರೂ ಉದ್ಯೋಗ ಒದಗಿಸಿದರೆ ಉದ್ಯೋಗವನ್ನು ಪಡೆದ ಕುಟುಂಬವೇ ಉದ್ಧಾರವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ವೇದಿಕೆಯಾಗುವುದು ಅದೊಂದು ಪುಣ್ಯದ ಕಾರ್ಯ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಜಾಕ್ ಹೊರ್ತಿ ಹೇಳಿದರು.

ನಗರದ ಹಜರತ್ ಸುಲ್ತಾನ್‌ ಸೈಯ್ಯದ್ ಷಹಾ ಅಬ್ದುಲ್ ರೆಹಮಾನ್ ಖಾದ್ರಿ ದರ್ಗಾದ ಆವರಣದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಉದ್ಯೋಗ ಒದಗಿಸುವ ಉದ್ದೇಶದಿಂದ ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸಿರುವುದು ಸಂತೋಷದ ವಿಚಾರವಾಗಿದೆ. ಐತಿಹಾಸಿಕ ಅರ್ಕಾಟ್ ದರ್ಗಾ ಇದು ಆಧ್ಯಾತ್ಮಿಕತೆಯ ಹಾಗೂ ಭಾವೈಕ್ಯತೆಯ ಸಂಗಮವಾಗಿದೆ. ಈ ದರ್ಗಾದ ಉರುಸ್‌ನ ಅಂಗವಾಗಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉದ್ಯೋಗ ಮೇಳವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ಲ ಮಾತನಾಡಿ, ಅರ್ಕಾಟ್ ದರ್ಗಾದ ದವಾ ಹಾಗೂ ದುವಾ ಹೆಸರುವಾಸಿ. ಮೇಳದಲ್ಲಿ ಉದ್ಯೋಗದಾತರು ಉದ್ಯೋಗಿಯ ಸ್ವಭಾವ ಹಾಗೂ ಹಾವಭಾವ ಸೇರಿದಂತೆ ಎಲ್ಲವನ್ನೂ ವೀಕ್ಷಿಸುತ್ತಾರೆ, ಹೀಗಾಗಿ ಶ್ರೇಷ್ಠ ವ್ಯಕ್ತಿತ್ವ, ಕೌಶಲ ರೂಪಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಜಿಲ್ಲಾ ಕಾನಿಪ ಜಿಲ್ಲಾಧ್ಯಕ್ಷರಾಗಿರುವ ಸಂಗಮೇಶ ಚೂರಿ ಮಾತನಾಡಿ, ಭಾವೈಕ್ಯತೆಯ ಕ್ಷೇತ್ರವಾಗಿರುವ ಈ ದರ್ಗಾದಲ್ಲಿ ಉದ್ಯೋಗ ಮೇಳವೊಂದನ್ನು ಆಯೋಜಿಸಿರುವುದರಿಂದ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಗಡಿಯಾರ ನೋಡಿ ಕೆಲಸ ಮಾಡುವ ಮನೋಭಾವದಿಂದ ದೂರವಿದ್ದು, ಸಮರ್ಪಣಾ ಮನೋಭಾವದಿಂದ ದುಡಿಯುವ ಮೂಲಕ ಸೇವೆ ಸಲ್ಲಿಸುವ ಕಂಪನಿಗೆ ಮೆಚ್ಚುಗೆಯನ್ನು ಗಳಿಸುವಂತಾಗಬೇಕು ಎಂದು ಹೇಳಿದರು.ಈ ಉದ್ಯೋಗ ಮೇಳದಲ್ಲಿ ದರ್ಗಾದ ಡಾ.ಸೈಯ್ಯದ್ ತಖೀಪೀರಾ ಹುಸೈನಿ ಸಾನಿಧ್ಯವನ್ನು ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಗುರುಪಾದಯ್ಯ ಹಿರೇಮಠ, ಮಹಾನಗರ ಪಾಲಿಕೆ ಸದಸ್ಯ ಅಲ್ತಾಫ್ ಇಟಗಿ, ಖ್ಯಾತ ವೈದ್ಯ ಡಾ.ರಿಹಾನ್ ಬಾಂಗಿ, ಬಂದೇನವಾಜ್ ಬೀಳಗಿ, ಉದ್ಯಮಿ ಅಮೀನ್ ಚೌಧರಿ, ಆಸೀಫ್ ಬಾಗವಾನ, ಸದ್ಭಾವನಾ ಟ್ರಸ್ಟ್‌ನ ಪ್ರಮುಖ ಶಫೀಕ್‌ ಮಣೂರ, ಅಬುಬಕರ್ ಬಿಜಾಪೂರ, ಅಲ್ಲಾಭಕ್ಷ ಬಾಗವಾನ, ಸುಹಾಸ ಕುಲಕರ್ಣಿ ಸೇರಿದಂತೆ ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.