ರೈತರ ಸಹಕಾರ ಇದ್ದರೆ ಜಗಳೂರು ಗ್ರಾಮೀಣ ಬ್ಯಾಂಕ್‌ ಜಿಲ್ಲೆಗೆ ಮಾದರಿಯಾಗಲು ಸಾಧ್ಯ

| Published : Sep 24 2024, 01:50 AM IST

ಸಾರಾಂಶ

ಜಗಳೂರು ತಾಲೂಕು ಬರಪೀಡಿತ ಪ್ರದೇಶವಾಗಿದ್ದರೂ ಶೇ.90ರಷ್ಟು ಸಾಲ ವಸೂಲಾತಿ ಆಗಿದೆ. ರೈತರು ಕೊಡುವವರೇ ಹೊರತು, ಕೈ ಎತ್ತುವ ರೈತರಲ್ಲ. ಸ್ವಾಭಿಮಾನಿ ರೈತರಾಗಿದ್ದಾರೆ ಎಂದು ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ನಿಯಮಿತ ಅಧ್ಯಕ್ಷೆ ವೀಣಾ ಗೋಗುದ್ದು ರಾಜು ಜಗಳೂರಲ್ಲಿ ಹೇಳಿದ್ದಾರೆ.

- ತಾಲೂಕು ಸಹಕಾರ ಕೃಷಿ-ಗ್ರಾಮೀಣ ಬ್ಯಾಂಕ್ ವಾರ್ಷಿಕ ಸಭೆ- - - ಕನ್ನಡಪ್ರಭ ವಾರ್ತೆ ಜಗಳೂರು

ಜಗಳೂರು ತಾಲೂಕು ಬರಪೀಡಿತ ಪ್ರದೇಶವಾಗಿದ್ದರೂ ಶೇ.90ರಷ್ಟು ಸಾಲ ವಸೂಲಾತಿ ಆಗಿದೆ. ರೈತರು ಕೊಡುವವರೇ ಹೊರತು, ಕೈ ಎತ್ತುವ ರೈತರಲ್ಲ. ಸ್ವಾಭಿಮಾನಿ ರೈತರಾಗಿದ್ದಾರೆ ಎಂದು ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ನಿಯಮಿತ ಅಧ್ಯಕ್ಷೆ ವೀಣಾ ಗೋಗುದ್ದು ರಾಜು ಹೇಳಿದರು.

ಪಟ್ಟಣ ವಾಲ್ಮಿಕಿ ಸಮುದಾಯ ಭವನದಲ್ಲಿ ಸೋಮವಾರ ಜಗಳೂರು ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ನಿಯಮಿತದ 2023-2024ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ನೆರವಾಗಬೇಕು:

ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ನಿಮ್ಮ ಮನೆಯಾಗಿದೆ. ನಿಮ್ಮದೇ ಬ್ಯಾಂಕು, ನಿಮ್ಮದೇ ಮನೆ. ಆಗಿಂದಾಗ್ಗೆ ಬಂದು ಹೋಗಿ ವ್ಯವಹಾರ ಮಾಡಿ, ಮಾಹಿತಿ-ಸಾಲ ಕೇಳಿ ಪಡೆಯಬೇಕು. ನೀವು ಸಹಕಾರ ನೀಡಿದರೆ ದಾವಣಗೆರೆ ಜಿಲ್ಲೆಗೆ ಜಗಳೂರು ಬ್ಯಾಂಕು ಮಾದರಿಯಾಗಿ ನಿಲ್ಲಬಹುದು. ಇದಕ್ಕೆ ರೈತರ ಪರಸ್ಪರ ಸಹಕಾರ ಅತಿ ಮುಖ್ಯವಾಗಿದೆ ಎಂದರು.

ಅನಿವಾರ್ಯ ಸಂದರ್ಭದಲ್ಲಿ ಪರಿಸ್ಥಿತಿ ತೊಂದರೆಯಾದಾಗ ರೈತರು ರೈತರಿಗೆ ಸಹಾಯ ಮಾಡಿ ಸಮಯಕ್ಕೆ ಸರಿಯಾಗಿ ಬ್ಯಾಂಕಿಗೆ ಸಾಲ ಮರುಪಾವತಿ ಮಾಡಬೇಕು. ಆಗ ಸರ್ಕಾರದಿಂದ ಅತಿ ಹೆಚ್ಚು ಹಣ ತಂದು ಜಗಳೂರು ತಾಲೂಕಿನ ರೈತರಿಗೆ ಸಾಲ ನೀಡಲು ಸಹಾಯವಾಗುತ್ತದೆ. ಮಳೆ ಬಾರದೇ ಬರಕ್ಕೆ ತುತ್ತಾಗಿದ್ದರಿಂದ ರೈತರು ಹಣ ಕಟ್ಟದಿದ್ದರಿಂದ ಸುಸ್ತಿದಾರರು ಜಾಸ್ತಿ ಇದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ತೊಂದರೆ ಆದಾಗ ಮಾತ್ರ ಸಾಲ ಪಡೆದ ರೈತರ ಮನೆಗೆ ಹೋಗಬೇಕಾದ ಸ್ಥಿತಿ ಬಂದಿದೆ ಎಂದರು.

ಸಾಲ ತರಲು ಶ್ರಮ:

ಬ್ಯಾಂಕ್ ಆವರಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಹಾಗೂ ಸರ್ಕಾರದಿಂದ ಹೆಚ್ಚಿನ ಸಾಲ ತರಲು ಕ್ಷೇತ್ರ ಶಾಸಕರಾದ ದೇವೇಂದ್ರಪ್ಪ ಅವರೊಂದಿಗೆ ಬ್ಯಾಂಕಿನ ಎಲ್ಲ ನಿರ್ದೇಶಕರು, ನಮ್ಮ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಭೇಟಿಯಾಗಿ, ಹಣ ತರಲು ಶ್ರಮಿಸಲಾಗುವುದು ಎಂದರು.

ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಕಾರ್ಯದರ್ಶಿ ನಾಗಭೂಷಣ್ 2023- 2024ನೇ ಸಾಲಿನ ಆಯವ್ಯಯ ಮಂಡಿಸಿದರು. ಅನಂತರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಸ್ವಯಂಪ್ರೇರಿತವಾಗಿ ಅವಧಿಯೊಳಗೆ ಸಾಲ ಮರುಪಾವತಿಸುತ್ತಿದ್ದಾರೆ. ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಬರುತ್ತಿದ್ದು, ಹೆಚ್ಚಿನ ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ದೀರ್ಘಾವಧಿ, ಮಧ್ಯಮ ಅವಧಿ ಸಾಲ ಸೌಲಭ್ಯಗಳನ್ನು ಕೊಡಿಸಿ, ರೈತರ ಸೇವಾಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಈ ಸಂದರ್ಭ ಬ್ಯಾಂಕಿನ ನಿರ್ದೇಕರಾದ ಕೆ.ಬಿ.ಸಿದ್ದೇಶ್, ಕೆ.ತಿಮ್ಮರಾಯಪ್ಪ, ಎಂ.ಟಿ. ಧನಂಜಯ್ಯ ರೆಡ್ಡಿ, ಎಂ.ವಿ.ರಾಜು, ಜೆ.ಶ್ರೀನಿವಾಸ್.ಸಿ.ಟಿ. ರಾಘವೇಂದ್ರ, ಕೆ.ಬಿ.ಚೌಡಮ್ಮ, ಎಸ್.ಚಂದ್ರಪ್ಪ, ಯು.ಜಿ. ವಾಮದೇವಪ್ಪ, ನಾಮನಿರ್ದೇಶಿತ ಸದಸ್ಯ ಸಣ್ಣಸೂರಯ್ಯ ಇತರರು ಉಪಸ್ಥಿತರಿದ್ದರು.

- - - -23ಜೆ.ಜಿ.ಎಲ್.1:

ಸಭೆಯಲ್ಲಿ ಬ್ಯಾಂಕ್‌ ತಾಲೂಕು ಅಧ್ಯಕ್ಷೆ ವೀಣಾ ಗೋಗುದ್ದು ರಾಜು ಮಾತನಾಡಿದರು.