ನಿಯಮಿತ ದೈಹಿಕ ವ್ಯಾಯಾಮ, ಸಮತೋಲಿತ ಆಹಾರ(ಕಡಿಮೆ ಉಪ್ಪು, ಕಡಿಮೆ ಸಕ್ಕರೆ), ಧೂಮಪಾನವನ್ನು ತ್ಯಜಿಸುವುದು, ಒತ್ತಡ ನಿರ್ವಹಣೆ(ಯೋಗ/ ಧ್ಯಾನ), ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೃದಯರೋಗ ತಡೆಗಟ್ಟಬಹುದು.
ಗದಗ: ಮಣಿಪಾಲ್ ಆಸ್ಪತ್ರೆ ಹೃದಯರೋಗಕ್ಕೆ ವಿಶೇಷ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿದೆ. ಇಲ್ಲಿನ ತಜ್ಞ ವೈದ್ಯರು ನಗರಕ್ಕೆ ಆಗಮಿಸಿ ಹೃದಯ ರೋಗದ ಕುರಿತು ಸಂವಾದ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ. ಸರ್ಕಾರಿ ನೌಕರರು ಆರೋಗ್ಯವಾಗಿದ್ದರೆ ರಾಜ್ಯ ಸುಭಿಕ್ಷವಾಗಿರಲು ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ತಿಳಿಸಿದರು.
ನಗರದ ಸರ್ಕಾರಿ ನೌಕರರ ಸಭಾಭವನದಲ್ಲಿ ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಯ ವೈದ್ಯರಿಂದ ಹೃದಯದ ಸಮಗ್ರ ಆರೈಕೆ ಮತ್ತು ಚಿಕಿತ್ಸೆ ಕುರಿತು ನಡೆದ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿಯಮಿತ ದೈಹಿಕ ವ್ಯಾಯಾಮ, ಸಮತೋಲಿತ ಆಹಾರ(ಕಡಿಮೆ ಉಪ್ಪು, ಕಡಿಮೆ ಸಕ್ಕರೆ), ಧೂಮಪಾನವನ್ನು ತ್ಯಜಿಸುವುದು, ಒತ್ತಡ ನಿರ್ವಹಣೆ(ಯೋಗ/ ಧ್ಯಾನ), ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೃದಯರೋಗ ತಡೆಗಟ್ಟಬಹುದು ಎಂದರು.
ರವಿ ಎಲ್. ಗುಂಜೀಕರ್ ಮಾತನಾಡಿ, ಸರ್ಕಾರಿ ನೌಕರರ ಸಂಘ ಕೇವಲ ನೌಕರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನೌಕರರ ಕುಟುಂಬ ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘ ಕೆಲಸ ಮಾಡುತ್ತಿದೆ. ಮಣಿಪಾಲ್ ಸಂಸ್ಥೆ ದೇಶಾದ್ಯಂತ ತನ್ನ ಛಾಪು ಮೂಡಿಸಿದ್ದು, ಇಲ್ಲಿನ ನುರಿತ ತಜ್ಞ ವೈದ್ಯರು ಆಗಮಿಸಿ ನೌಕರರ ಆರೋಗ್ಯದ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.ಮಣಿಪಾಲ ಆಸ್ಪತ್ರೆ ಮಕ್ಕಳ ಹೃದ್ರೋಗಶಾಸ್ತ್ರ ನಿರ್ದೇಶಕ ಡಾ. ಎಂ.ಜೈ. ರಂಗನಾಥ ಮಾತನಾಡಿ, ಹೃದಯರೋಗ ಚಿಕ್ಕ ಮಕ್ಕಳು ಹಾಗೂ ದೊಡ್ಡವರ ನಡುವೆ ವ್ಯತ್ಯಾಸ ಹೊಂದಿದೆ. ಚಿಕ್ಕಮಕ್ಕಳಿಗೆ ಹುಟ್ಟಿದಾಗಿನಿಂದ ಬರಬಹುದು. ಇನ್ನೂ ಕೆಲ ಮಕ್ಕಳಿಗೆ ಇನ್ಪೆಕ್ಷನನಿಂದ ಬರುವ ಸಾಧ್ಯತೆ ಇದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ ರೋಗ ಗುಣಪಡಿಸಬಹುದು. 6 ತಿಂಗಳ ಒಳಗೆ ಶಸ್ತ್ರಚಿಕಿತ್ಸೆ ನೀಡಿದರೆ ರೋಗ ಗುಣವಾಗುತ್ತದೆ. ಆದರೆ 6 ತಿಂಗಳ ನಂತರ ಶಸ್ತ್ರಚಿಕಿತ್ಸೆ ಮಾಡಿದರೆ ಉಪಯೋಗವಾಗುವುದಿಲ್ಲ. ಆದ್ದರಿಂದ ಎಲ್ಲರೂ ಹೃದಯ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಪರೀಕ್ಷಿಸಿಕೊಳ್ಳಿ ಎಂದರು.