ಅಂತರ್ಜಲ ಹೆಚ್ಚಳಕ್ಕೆ ಕ್ರಮವಹಿಸದಿದ್ದರೆ ಸಂಕಷ್ಟ

| Published : Jun 10 2025, 07:19 AM IST

ಸಾರಾಂಶ

ಅಟಲ್ ಭೂಜಲ ಯೋಜನೆ ಮೂಲಕ ಸಮುದಾಯದ ಸಹಭಾಗಿತ್ವದಲ್ಲಿ ಅಂತರ್ಜಲದ ಅತಿ ಬಳಕೆ ಕಡಿಮೆ ಮಾಡುವುದು ಅಂತರ್ಜಲದ ಸುಸ್ಥಿರ ನಿರ್ವಹಣೆ ಹಾಗೂ ಸುಧಾರಣೆಗೆ ಪೂರಕ ಕ್ರಮಗಳನ್ನು ಉತ್ತೇಜಿಸುವ ಪ್ರಯತ್ನ ನಡೆಸಿದ್ದು, ರಾಜ್ಯದ ೧೪ ಜಿಲ್ಲೆಗಳ ೪೧ ತಾಲೂಕುಗಳ ೧೧೯೯ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ತಜ್ಞ ಸತೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಅಟಲ್ ಭೂಜಲ ಯೋಜನೆ ಮೂಲಕ ಸಮುದಾಯದ ಸಹಭಾಗಿತ್ವದಲ್ಲಿ ಅಂತರ್ಜಲದ ಅತಿ ಬಳಕೆ ಕಡಿಮೆ ಮಾಡುವುದು ಅಂತರ್ಜಲದ ಸುಸ್ಥಿರ ನಿರ್ವಹಣೆ ಹಾಗೂ ಸುಧಾರಣೆಗೆ ಪೂರಕ ಕ್ರಮಗಳನ್ನು ಉತ್ತೇಜಿಸುವ ಪ್ರಯತ್ನ ನಡೆಸಿದ್ದು, ರಾಜ್ಯದ ೧೪ ಜಿಲ್ಲೆಗಳ ೪೧ ತಾಲೂಕುಗಳ ೧೧೯೯ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ತಜ್ಞ ಸತೀಶ್ ತಿಳಿಸಿದರು.ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಅಟಲ್‌ ಭೂಜಲ ಯೋಜನೆ ಹಾಗೂ ಅರಾಭಿಕೊತ್ತನೂರು ಗ್ರಾಪಂನಿಂದ ಸಮುದಾಯ ಸಹಭಾಗಿತ್ವದಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆ ಕುರಿತಂತೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಿ ನಂತರ ಅಂತರ್ಜಲ ರಕ್ಷಣೆ ಕುರಿತಾದ ಚಿತ್ರಕಲೆ ಮತ್ತಿತರ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.ಜೀವದ್ರವ್ಯವಾದ ನೀರಿನ ಮಿತಬಳಕೆ ಮತ್ತು ಅಂತರ್ಜಲ ವೃದ್ದಿಗೆ ಕ್ರಮವಹಿಸದಿದ್ದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ ಅವರು, ಅಟಲ್ ಭೂಜಲ ಯೋಜನೆ ಸಮುದಾಯದ ಸಹಭಾಗಿತ್ವದಲ್ಲಿ ಅಂತರ್ಜಲದ ಅತಿ ಬಳಕೆ ಕಡಿಮೆ ಮಾಡುವ ಈ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಕೈಜೋಡಿಸಿ ಸಮುದಾಯಕ್ಕೆ ಅರಿವು ಮೂಡಿಸಿ ಎಂದರು. ಅಂತರ್ಜಲದ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು, ನೀರಿನ ಮಿತಬಳಕೆ ಕುರಿತು ವಿದ್ಯಾರ್ಥಿಗಳು ಪೋಷಕರು ಮತ್ತು ಸಮುದಾಯಕ್ಕೆ ತಿಳಿಸಿಕೊಡಬೇಕು ಎಂದು ಕರೆ ನೀಡಿದರು.ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೂ ನೀರೇ ಮೂಲವಾಗಿದೆ, ನೀರಿಲ್ಲದೇ ಬದುಕು ಸಾಧ್ಯವೇ ಇಲ್ಲ ಅಂತಹ ಜಲ ಸಂಗ್ರಹಕ್ಕೆ ಮಳೆಯೇ ಆಧಾರವಾಗಿದೆ ಎಂದ ಅವರು, ನಮ್ಮ ನಾಗರೀಕತೆಗಳು ಬೆಳೆದದ್ದು ಸಹಾ ಈ ನೀರಿನ ಮೂಲಗಳಾದ ನದಿಗಳ ಪಕ್ಕದಲ್ಲೇ ಎಂದರು.ಅಂತಹ ನೀರನ್ನು ರಕ್ಷಿಸುವಲ್ಲಿ ನಾವು ವಿಫಲವಾದರೆ ಮುಂದೊಂದು ದಿನ ಸಂಕಷ್ಟ ಎದುರಿಸಬೇಕಾದೀತು ಎಂದು ಎಚ್ಚರಿಸಿದ ಅವರು, ನೀರಿನ ಮೂಲಗಳ ರಕ್ಷಣೆಯ ಜತೆಗೆ ಅಂತರ್ಜಲ ರಕ್ಷಣೆಯ ಕುರಿತ ವಿದ್ಯಾರ್ಥಿಗಳು ಅರಿವು ಪಡೆಯಬೇಕು ಎಂದರು.ನಾವು ಆಹಾರದಂತೆ ನೀರಿಲ್ಲದೇ ಬದುಕಲಾರೆವು, ಅಂತಹ ನೀರು ಇಂದು ಅತಿಯಾದ ಬಳಕೆಯಿಂದಾಗಿ ಪಾತಾಳ ಸೇರಿದೆ, ಕೋಲಾರ ಜಿಲ್ಲೆಯ ಕೆಲವು ಕಡೆಗಳಲ್ಲಿ ಅಂತರ್ಜಲ ೨ ಸಾವಿರ ಅಡಿಗಳಿಗೂ ತಲುಪಿ ಆತಂಕ ಮೂಡಿಸಿದೆ ಎಂದರು.ಅಂತರ್ಜಲ ವೃದ್ದಿಗಾಗಿ ಕೋಲಾರಕ್ಕೆ ಹರಿದ ಕೆಸಿ ವ್ಯಾಲಿ ನೀರಿನಿಂದಾಗಿ ಈ ನೀರು ಹರಿಯುವ ಪ್ರದೇಶಗಳಲ್ಲಿ ಅಂತರ್ಜಲ ವೃದ್ದಿಯಾಗಿದೆ, ಬೇಸಿಗೆಯಲ್ಲೂ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಇದೆ ಎಂದು ಉದಾಹರಿಸಿದರು.ಮಳೆ ನೀರು ಕೊಯ್ಲು ಮಾಡುವ ಮಹತ್ವದ ಕುರಿತು ತಿಳಿಸಿಕೊಟ್ಟ ಅವರು, ಅಂತರ್ಜಲ ವೃದ್ದಿಗೆ ಅನೇಕ ಕ್ರಮಗಳನ್ನು ಅಟಲ್ ಭೂಜಲ ಯೋಜನೆಯಡಿ ಕೈಗೊಳ್ಳಲಾಗಿದೆ, ಇದರಡಿ ಸಮುದಾಯ ಆಧಾರಿತ ಗ್ರಾಮ ಪಂಚಾಯಿತಿ ಮಟ್ಟದ ಜಲ ಭದ್ರತಾ ಯೋಜನೆ ತಯಾರಿಕೆ, ಅಂತರ್ಜಲ ಸದ್ಬಳಕೆ ಹಾಗೂ ಪುನಶ್ಚೇತನಕ್ಕೆ ಕ್ರಮವಹಿಸುವುದು ಅತಿ ಮುಖ್ಯವಾಗಿದೆ ಎಂದರು.ಕೃಷಿಯಲ್ಲಿ ನೀರಿನ ಮಿತ ಬಳಕೆ ಹಾಗೂ ಲಾಭದಾಯಕ ವಿಧಾನಗಳ ಕುರಿತು ತಿಳಿಸಿಕೊಟ್ಟ ಅವರು, ಜಲಮೂಲ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು, ಅಂತರ್ಜಲ ರಕ್ಷಣೆಗೆ ತಮ್ಮ ವ್ಯಾಪ್ತಿಯಲ್ಲಿ ಹಲವು ಉಪಕ್ರಮ ನಡೆಸಬೇಕು ಎಂದರು.ಹರಿದು ಹೋಗುವ ನೀರಿನ ರಕ್ಷಣೆಗೆ ಚೆಕ್ ಡ್ಯಾಂ ನಿರ್ಮಾಣದಿಂದಾಗಿ ನೀರು ಭೂಮಿಯಲ್ಲಿ ಇಂಗುವಿಕೆಯಿಂದ ಅಂತರ್ಜಲ ಮಟ್ಟ ಏರಿಕೆಗೆಸಹಕಾರಿಯಾಗಲಿದೆ ಎಂದು ತಿಳಿಸಿದ ಅವರು, ಕೆರೆಗಳಲ್ಲಿ ನೀರು ನಿಲ್ಲಿಸುವುದರಿಂದ ಆ ವ್ಯಾಪ್ತಿಯ ಸುಮಾರು ಮೂರು ಕಿಮೀಗೂ ಅಧಿಕ ಭಾಗದಲ್ಲಿ ಅಂಗರ್ಜಲ ಮಟ್ಟ ಸುಧಾರಣೆಯಾಗುತ್ತದೆ ಎಂದರು.ಕಡ್ಡಾಯವಾಗಿ ಪ್ರತಿ ಮನೆಯಲ್ಲೂ ಮಳೆ ಕೊಯ್ಲು ಅಳವಡಿಕೆ ಮಾಡುವುದು. ಕೆರೆ,ನದಿಗಳ ಮೂಲ ಮಲೀನವಾಗದಂತೆ ಎಚ್ಚರವಹಿಸುವುದು. ಜನರಲ್ಲಿ ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆ ಕುರಿತು ಅರಿವು ಮೂಡಿಸುವುದು ಮತ್ತಿತರ ಕಾರ್ಯಗಳನ್ನು ಅಟಲ್ ಭೂಜಲ ಯೋಜನೆಯಡಿ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಅಂತರ್ಜಲ ರಕ್ಷಣೆಗೆ ಸಂಬಂಧಿಸಿದಂತೆ ಚಿತ್ರಕಲೆ,ಪ್ರಬಂಧಸ್ಪರ್ಧೆ ಮತ್ತಿತರ ಚಟುವಟಿಕೆ ಮಾಡಿಸಲಾಯಿತು. ಯೋಜನೆಯ ಕ್ಷೇತ್ರ ಸಹಾಯಕ ಸುರೇಶ್, ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಸುಗುಣಾ, ಕೆ.ಲೀಲಾ, ಶ್ವೇತಾ, ವೆಂಕಟರೆಡ್ಡಿ,ಶ್ರೀನಿವಾಸಲು ರಮಾದೇವಿ, ಚಂದ್ರಶೇಖರ್ ಮತ್ತಿತರರಿದ್ದರು.