ಕಾಡಜ್ಜಿ ಕೃಷಿ ಇಲಾಖೆ ಜಮೀನಿನ ಮಣ್ಣು ಅಕ್ರಮ ಸಾಗಾಟ ಮಾಡಿದ್ದಾರೆಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ವಿರುದ್ಧ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಕೇವಲವಾಗಿ, ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇದು ಮುಂದುವರಿದರೆ ಕಲ್ಲಿನಿಂದ ಹೊಡೆತ ತಿನ್ನುತ್ತಾರೆ ಎಂದು ಹರಿಹರ ಕ್ಷೇತ್ರದ ಕಾಂಗ್ರೆಸ್‌ ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಸಿದರು.

ದಾವಣಗೆರೆ: ಕಾಡಜ್ಜಿ ಕೃಷಿ ಇಲಾಖೆ ಜಮೀನಿನ ಮಣ್ಣು ಅಕ್ರಮ ಸಾಗಾಟ ಮಾಡಿದ್ದಾರೆಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ವಿರುದ್ಧ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಕೇವಲವಾಗಿ, ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇದು ಮುಂದುವರಿದರೆ ಕಲ್ಲಿನಿಂದ ಹೊಡೆತ ತಿನ್ನುತ್ತಾರೆ ಎಂದು ಹರಿಹರ ಕ್ಷೇತ್ರದ ಕಾಂಗ್ರೆಸ್‌ ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಜ್ಜಿ ಬಳಿ ಮಣ್ಣನ್ನು ರಾಯಲ್ಟಿ ಕಟ್ಟಿಯೇ ಸಾಗಿಸಲಾಗಿದೆ. ಆದರೂ, ಸಚಿವರ ವಿರುದ್ಧ ಕಳೆದ ಕೆಲವು ದಿನಗಳಿಂದ ಶಾಸಕ ಬಿ.ಪಿ.ಹರೀಶ, ಸೋಮವಾರ ಮಾತನಾಡಿದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

15-20 ದಿನಗಳಿಂದ ಶಾಸಕ ಹರೀಶ ಬಿಪಿ ಹೆಚ್ಚಿಸಿಕೊಂಡಿದ್ದಾರೆ. ತನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ, ಕಾರ್ಯ ಕೈಗೊಳ್ಳುವುದನ್ನು ಬಿಟ್ಟು, ದಾವಣಗೆರೆ ಉತ್ತರ ಕ್ಷೇತ್ರದ ಕಾಡಜ್ಜಿ ಗ್ರಾಮಕ್ಕೆ ಬಂದು, ಜಿಲ್ಲಾ ಮಂತ್ರಿ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಚಿವರನ್ನು ಕಳ್ಳ ಅಂತೆಲ್ಲಾ ನಿಂದಿಸಿ, ಏಕವಚನದಲ್ಲಿ ಮಾತನಾಡಿದ್ದಾರೆ. ಇದೇ ವರ್ತನೆ ಮುಂದುವರಿಸಿದರೆ ಕಲ್ಲೇಟು ತಿನ್ನುತ್ತಾರಷ್ಟೇ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಸಚಿವರ ಬಗ್ಗೆ ಹೀಗೆ ಮಾತನಾಡುತ್ತಿರುವುದು ತಪ್ಪು. ಕಾಡಜ್ಜಿ ಭಾಗದ ದನಕರುಗಳಿಗೆ ನೀರು ಬೇಕು. ಅಲ್ಲೊಂದು ಕೆರೆ ಆಗಬೇಕೆಂಬುದು ಜನರ ಬೇಡಿಕೆ ಇದೆ. ಹಾಗಾಗಿ ಅಲ್ಲಿನ ಮಣ್ಣನ್ನು ರಾಯಲ್ಪಿ ಕಟ್ಟಿಯೇ ಸಾಗಿಸುತ್ತಿದ್ದಾರೆ. ಇದೆಲ್ಲಾ ಗೊತ್ತಿದ್ದೂ ಹರೀಶ ಹುಚ್ಚಾಟ ಮುಂದುವರಿಸಿದ್ದಾರೆ. ಹರಿಹರ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಆದರೆ, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಬಂದು ಸಚಿವರ ಬಗ್ಗೆ ಹಗುರ ಮಾತನಾಡೋದು ಸರಿಯಲ್ಲ. ಹರಿಹರದಲ್ಲಿ ಮಣ್ಣು, ಮರಳು ಲೂಟಿಯಾದರೂ ಶಾಸಕ ಹರೀಶ್‌ ಯಾಕೆ ಚಕಾರ ಎತ್ತುತ್ತಿಲ್ಲ ಎಂದು ರಾಮಪ್ಪ ಪ್ರಶ್ನಿಸಿದರು.

ಹರಿಹರ ಕ್ಷೇತ್ರದಲ್ಲಿ ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿ ಮಾಡಿಸಲು ಸಾಕಷ್ಟು ಅವಕಾಶಗಳಿವೆ. ನಾನು ಶಾಸಕನಿದ್ದಾಗ ಭೈರನಪಾದ ಯೋಜನೆಗೆ ₹58 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೆ. ಆಗ ಅದನ್ನು ಇದೇ ಹರೀಶ ತಡೆದರು. ಇಂತಹ ವ್ಯಕ್ತಿ ಈಗ ಸಚಿವರು, ಸಂಸದರಿಗೆ ಬೈಯ್ಯುತ್ತಾ ತಿರುಗಾಡುತ್ತಿದ್ದಾರೆ. ನಾನು ಶಾಸಕನಿದ್ದಾಗ ₹630 ಕೋಟಿ ಅನುದಾನ ತಂದು ಕೆಲಸ ಮಾಡಿದ್ದೆ. ಕ್ಷೇತ್ರದ ಕೆಲಸವೆಂದರೆ ಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳ ಬಳಿ ಅಲೆಯಬೇಕು. ಆದರೆ, ಅದ್ಯಾವುದನ್ನೂ ಕ್ಷೇತ್ರಕ್ಕಾಗಿ ಹರೀಶ ಮಾಡುತ್ತಿಲ್ಲ ಎಂದು ಚಾಟಿ ಬೀಸಿದರು.

ತಾಪಂ ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ ಮಾತನಾಡಿ, ಹೊಸಪೇಟೆ- ಹರಿಹರ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮಾಡಬೇಕೆಂಬ ಕೂಗು ದಶಕದಿಂದಲೂ ಇದೆ. ಈಗ ಪ್ರಧಾನಿ ಕಚೇರಿಯಿಂದಲೇ ಇದು ಈಡೇರಬೇಕು. ಅಂತಹ ಕೆಲಸವನ್ನು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ನೆರೆಯ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸಹ ಸ್ಪಂದಿಸಬೇಕು. ಹರಿಹರದ ರಸ್ತೆ ಅಗಲೀಕರಣವೂ ಆಗಬೇಕು. ಅಂತಹ ಕೆಲಸವನ್ನು ಹರಿಹರ ಶಾಸಕ ಬಿ.ಪಿ.ಹರೀಶ ಮಾಡಲು ಗಮನಹರಿಸಲಿ ಎಂದು ತಾಕೀತು ಮಾಡಿದರು.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸಾವಿರಾರು ಜನರಿಗೆ ಉದ್ಯೋಗ ನೀಡಿ, ಲಕ್ಷಾಂತರ ಜನರಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಅನ್ನದಾತರಾಗಿದ್ದಾರೆ. ಹರಿಹರ ಶಾಸಕ ಬಿ.ಪಿ.ಹರೀಶ ಯಾರಿಗಾದರೂ ಜವಾನನ ಕೆಲಸವನ್ನಾದರೂ ಕೊಟ್ಟಿದ್ದಾರಾ? ಕೊಡಿಸಿದ್ದಾರಾ? ಕ್ಷೇತ್ರಕ್ಕೆ ಅನುದಾನ ನೀಡಿಲ್ಲವೆಂದರೆ ಒಂದಲ್ಲ ನಾಲ್ಕಾರು ಸಲ ಹೋಗಿ ಕೇಳಬೇಕು. ಶಾಸಕನಾಗಿ ಗಾಂಭೀರ್ಯದ ವರ್ತನೆ ಇರಲಿ. ಕಾಡಜ್ಜಿ ಕೃಷಿ ಇಲಾಖೆ ಮಣ್ಣಿನಿಂದ ಜೀವನ ನಡೆಸಬೇಕಾದ ದುಸ್ಥಿತಿ ನಮ್ಮ ನಾಯಕರಿಗೆ ಬಂದಿಲ್ಲ. ಬೆಂಗಳೂರಿನ ಅಪಾರ್ಟ್‌ ಮೆಂಟ್‌ಗಳಲ್ಲಿ ಇಸ್ಪೀಟ್ ಆಡುವವರು ಯಾರು, ದಾವಣಗೆರೆ ಆಂಜನೇಯ ಬಡಾವಣೆಯಲ್ಲಿ ಹಿಂದೆ ಇಸ್ಪೀಟ್ ಆಡುವಾಗ ಸಿಕ್ಕಿ ಬಿದ್ದು, ಬಿಡಿಸಿಕೊಂಡು ಹೋದವರು ಯಾರು ಎಂಬ ಬಗ್ಗೆ ಹರೀಶ ಉತ್ತರಿಸಲಿ. ವೈಯಕ್ತಿಕ ವಿಚಾರ ಒಳ್ಳೆಯದಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ತಾಪಂ ಮಾಜಿ ಸದಸ್ಯ ಹಾಲೇಶ ಗೌಡ, ಸನಾವುಲ್ಲಾ, ಅಬ್ದುಲ್ ಇತರರು ಇದ್ದರು.

ಹರಿಹರದ ಬಿರ್ಲಾ ಜಾಗದಿಂದಲೂ ಮಣ್ಣು ಸಾಗಣೆ ಕಾಡಜ್ಜಿಯಲ್ಲಷ್ಟೇ ಅಲ್ಲ ಹರಿಹರದ ಬಿರ್ಲಾದ ಜಾಗದಿಂದಲೂ ಮಣ್ಣನ್ನು ಸಾಗಿಸಲಾಗಿದೆ. ಕಾನೂನು ಪ್ರಕಾರ ರಾಯಲ್ಟಿ ಕಟ್ಟಿಯೇ ಮಣ್ಣು ತುಂಬಲಾಗಿದೆ. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ ತಮ್ಮ ವರ್ತನೆ, ಬಾಯಿ ಮೇಲೆ ಹಿಡಿತ ಹೊಂದಬೇಕು. ಸಿದ್ದೇಶ್ವರ ಸಂಸದರಿದ್ದಾಗ 6 ತಿಂಗಳಿಗೊಮ್ಮೆ ಕ್ಷೇತ್ರ ಸುತ್ತುತ್ತಿದ್ದರು. ಹಾಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ. ಇದೆಲ್ಲವನ್ನೂ ಹರೀಶ, ಸಿದ್ದೇಶ್ವರ ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಎಸ್.ರಾಮಪ್ಪ ವ್ಯಂಗ್ಯವಾಡಿದರು.