ಸಾರಾಂಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಹಿಂದೂಗಳು ಎನ್ನುವ ಕಾರಣಕ್ಕೆ ಗುಂಡು ಹೊಡೆದು ಸಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು ಹಿಂದೂಗಳು ಸಂಘಟಿತ ರಾಗದಿದ್ದರೆ ದೇಶದಲ್ಲಿ ಉಳಿಗಾಲವಿಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.ಬುಧವಾರ ಸಂಜೆ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಮ್ ಬಳಿ ಬೈಸರನ್ ಕಣಿವೆಯಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ತಾಲೂಕು ಬಿಜೆಪಿ ಘಟಕದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಭಾರತ ಮತ್ತು ಪಾಕಿಸ್ಥಾನ ವಿಭಜನೆಯಾಗಿರುವುದು ಜಾತಿ ಆಧಾರದ ಮೇಲೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದೇವೆ. 2047ರೊಳಗೆ ಹಿಂದೂಗಳ ಸ್ಥಿತಿ ದೇಶದಲ್ಲಿ ಏನಾಗುತ್ತದೆ ಎಂಬ ಭಯ ಕಾಡುತ್ತಿದೆ. ಕಾಶ್ಮೀರದ ಜನ 370 ವಿಧಿ ರದ್ದಾದ ಮೇಲೆ ನೆಮ್ಮದಿಯಿಂದ ಬದುಕು ರೂಪಿಸಿಕೊಂಡಿದ್ದರು. ಉಗ್ರರದಾಳಿಗೆ ಬಲಿಯಾದ ಮಂಜುನಾಥ್ ರಾವ್ ಎನ್.ಆರ್.ಪುರದಲ್ಲಿ ಬಾಲ್ಯದ ಜೀವನ ಕಳೆದಿದ್ದಾರೆ. ಇವರ ಹತ್ಯೆಯಾಗಿರುವುದು ನೋವನ್ನುಂಟು ಮಾಡಿದೆ. ರಾಜಕಾರಣ ಬಿಟ್ಟು ಉಗ್ರರ ದಾಳಿಯನ್ನು ಎಲ್ಲರೂ ಖಂಡಿಸಬೇಕು ಎಂದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ಮಾತನಾಡಿ, ಹಿಂದೂಗಳ ಘನ ಘೋರ ಹತ್ಯೆಯಾಗಿದ್ದರೂ ಪ್ರವಾಸಿಗರ ಹತ್ಯೆ ಎಂದು ಬಣ್ಣಿಸಲಾಗುತ್ತಿರುವುದು ಖಂಡನೀಯ. ಪ್ರವಾಸಿಗರು ಬೇರೆ ಧರ್ಮೀಯರು ಇರಲಿಲ್ಲವೇ. ಹಿಂದುಸ್ಥಾನದಲ್ಲಿ ಹಿಂದೂವಾಗಿ ಬದುಕುವುದು, ಹಿಂದೂ ವಾಗಿದ್ದ ಕಾರಣಕ್ಕೆ ಇಸ್ಲಾಮಿಕ್ ಮನೋಭಾವಕ್ಕೆ ರಕ್ತಕಾರಿ ಚೆಲ್ಲಿ ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಧರ್ಮದ ರಕ್ಷಣೆಗೆ ಪ್ರತಿಯೊಬ್ಬರು ಜಾಗೃತರಾಗಬೇಕು. ಕೇಂದ್ರ ಸರ್ಕಾರ ಹಿಂದೂಗಳ ರಕ್ಷಣೆಗಾಗಿ ಪಾಕಿಸ್ತಾನಕ್ಕೆ ನುಗ್ಗಿ ಬುದ್ಧಿಕಲಿಸಬೇಕು. ಇಲ್ಲದಿದ್ದರೆ ಇಂತಹ ಪ್ರಸಂಗಗಳು ಪುನಃ ನಡೆಯುತ್ತವೆ ಎಂದರು.
ಮೇಣದ ಬತ್ತಿ ಬೆಳಗಿಸಿ ಮೌನಾಚರಣೆ ಮಾಡಿ ಉಗ್ರರದಾಳಿಗೆ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ವಿ.ನಿಲೇಶ್, ಬಿಜೆಪಿ ಪಕ್ಷದ ಮುಖಂಡರಾದ ಕೆಸವೆ ಮಂಜುನಾಥ್, ಅಶ್ವನ್, ಪ್ರೀತಂ, ಲೋಕೇಶ್, ಎಂ.ಎನ್.ನಾಗೇಶ್, ಬಿ.ಎಸ್.ಆಶೀಶ್ ಕುಮಾರ್, ವೈ.ಎಸ್.ರವಿ, ರಾಜೇಂದ್ರ, ಎನ್.ಎಂ.ಕಾಂತರಾಜ್, ಜಯರಾಂ, ಶ್ರೀನಾಥ್, ಪ್ರವೀಣ್ ಮತ್ತಿತರರಿದ್ದರು.