ಸಾರಾಂಶ
- ರಾಜ್ಯದಲ್ಲಿ ಹಿಂದುತ್ವದ ಅಲೆ ಎದ್ದಿದ್ದು, ಇನ್ನೂ 2 ವರ್ಷ ಸಿದ್ದರಾಮಯ್ಯ ಹಾರಾಡ್ಲಿ: ವಿಜಯಪುರ ಶಾಸಕ ಹೇಳಿಕೆ - ಹಿಂದೂಗಳ ವಿರುದ್ಧ ಯಾರಾದರೂ ಕಮಕ್ ಕಿಮಕ್ ಅಂದರೆ ಗುಂಡು ಹಾರಿಸೋದು ಗ್ಯಾರಂಟಿ ಎಂದ ಯತ್ನಾಳ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯಾದ್ಯಂತ ಹಿಂದುತ್ವದ ಅಲೆ ಎದ್ದಿದ್ದು, ಇನ್ನೂ 2 ವರ್ಷ ಸಿದ್ದರಾಮಯ್ಯ ಹಾರಾಡಲಿ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದರೆ ಪೊಲೀಸರ ಕೈಗೆ ಮೊದಲು ಎಕೆ-47 ನೀಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶ್ರೀ ಸಿದ್ದೇಶ್ವರ ಮಿಲ್ ಆವರಣದ ಶ್ರೀ ಜೋಡಿ ಬನ್ನಿ ಮಹಾಂಕಾಳಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಶ್ರೀ ದೇವನಗರಿ ದಸರಾ ಸಾಂಸ್ಕೃತಿಕ ಉತ್ಸವದ 5ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೂ ವಿರೋಧಿಗಳಿಗೆ, ಹಿಂದೂಗಳ ವಿರುದ್ಧ ಯಾರಾದರೂ ಕಮಕ್ ಕಿಮಕ್ ಅಂದರೆ ಗುಂಡು ಹಾರಿಸೋದು ಗ್ಯಾರಂಟಿ ಎಂದರು.ಹಿಂದೂಗಳ ಮನೆ, ದೇವಸ್ಥಾನ, ಮೆರವಣಿಗೆ ಮೇಲೆ ಕಲ್ಲು ಹೊಡೆಯುತ್ತಾರೆ. ಅಂತಹವರಿಗೆ ಹೇಳುವವರು, ಕೇಳುವವರೇ ಯಾರೂ ಇಲ್ಲದಂತಾಗಿದೆ. ಬನ್ನಿ ಮಹಾಂಕಾಳಿ, ನರಸಿಂಹ ಸ್ವಾಮಿ, ಆಂಜನೇಯ ಸ್ವಾಮಿ ಹೀಗೆ ನಮ್ಮ ಯಾವುದೇ ದೇವರುಗಳು ಬರೀಗೈಯಲ್ಲಿ ಕುಳಿತಿಲ್ಲ. ಎಲ್ಲ ದೇವರ ಕೈಯಲ್ಲೂ ಆಯುಧಗಳಿವೆ. ಸಮಯ ಬಂದರೆ ಹಿಂದೂ ಹುಲಿಗಳು ಎದ್ದರೆ ನಡೆಯುವುದೇ ಬೇರೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಮುಂಚೆ ದಾವಣಗೆರೆವರೆಗಿನ ಜನರಿಗಷ್ಟೇ ಗೊತ್ತಿದ್ದೆ. ಆದರೆ, ನಾನು ಈಗ ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಸಮಗ್ರ ಕರ್ನಾಟಕ ನನ್ನ ವ್ಯಾಪ್ತಿಯಾಗಿದೆ. ಮಂಡ್ಯದ ಮದ್ದೂರಿನಲ್ಲೂ ಹಿಂದುತ್ವದ ಅಲೆ ಎದ್ದಿದೆ. ಮೊನ್ನೆ ಸುಮಾರು 20 ಸಾವಿರ ಯುವಕರು ಸ್ವಯಂ ಪ್ರೇರಿತರಾಗಿ ಬೈಕ್ ರ್ಯಾಲಿಯಲ್ಲಿ ಸ್ವಾಗತಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ತುಷ್ಟೀಕರಣವೂ ಅತೀಯಾಗಿದೆ. ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಸರ್ಕಾರ ಹಾರಾಡಲಿ. ಮುಂದೆ ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಮಾಡುವ ಸರ್ಕಾರ ಬಂದೇ ಬರುತ್ತದೆ. ದಾವಣಗೆರೆಯಲ್ಲಿ ಒಂದೇ ಒಂದು ಡಿಜೆಗೂ ಅವಕಾಶ ನೀಡಿಲ್ಲ. ಪೊಲೀಸರದ್ದು ಏನೂ ತಪ್ಪೇ ಇಲ್ಲ. ಸರ್ಕಾರದ ಮಾತು ಕೇಳಬೇಕಾದ್ದು ಪೊಲೀಸರ ಕರ್ತವ್ಯ. ನಮ್ಮ ಸರ್ಕಾರ ಬಂದಾಗ ಈಗ ಡಿಜೆ ಹಾಕಲು ತೊಂದರೆ ಕೊಟ್ಟವರ ಮನೆ ಮುಂದೆಯೇ ಒಂದು ತಾಸು ಡಿಜೆ ಹಾಕುವಂತೆ ಆದೇಶ ಮಾಡುತ್ತೇನೆ ಎಂದು ಕಾಂಗ್ರೆಸ್ಸಿಗರಿಗೆ ಯತ್ನಾಳ ಎಚ್ಚರಿಕೆಯ ಸಂದೇಶ ರವಾನಿಸಿದರು.
ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಗಣೇಶ ಮೆರವಣಿಗೆಗೆ ಜಿಲ್ಲಾಡಳಿತ ಡಿಜೆಗೆ ಅವಕಾಶ ಕೊಡಲಿಲ್ಲ. ಅಧಿಕಾರ, ದುರಂಕಾರಕ್ಕೆ ಮಣಿದಿದ್ದರಿಂದ ಡಿ.ಜೆ ಸಿಗಲಿಲ್ಲ. ಚಿತ್ರದುರ್ಗ, ಹಾವೇರಿಯಲ್ಲಿ ಡಿ.ಜೆ ಗೆ ಅವಕಾಶ ಕೊಟ್ಟಿದ್ದಾರೆ. ಹಣ, ಅಧಿಕಾರ ದರ್ಪದಿಂದ ಜಿಲ್ಲಾ ಮಂತ್ರಿಗಳು ದೌರ್ಜನ್ಯ ಮಾಡುತ್ತಿದ್ದಾರೆ ಎಂದರು.ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ್, ದೇವಸ್ಥಾನ ಸಮಿತಿ ಅಧ್ಯಕ್ಷೆ ಪುಷ್ಪಾ ಗುಂಡಿ ಸಿದ್ದೇಶ, ಮುಖಂಡರಾದ ಶ್ರೀನಿವಾಸ ಟಿ.ದಾಸಕರಿಯಪ್ಪ, ಆರ್.ವಿ.ಅಶೋಕ್ ಗೋಪನಾಳ್, ಚಿಂದೋಡಿ ಚಂದ್ರಧರ್, ಸರೋಜಾ ಜಂಬಿಗಿ, ಗೀತಾ ಹರಬಿ ಇತರರು ಕಾರ್ಯಕ್ರಮದಲ್ಲಿದ್ದರು.
- - --ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಲೇಬೆನ್ನೂರು ಗಣೇಶ ವಿಸರ್ಜನೆಗೆ ಬಂದಾಗ ಮೈಕ್ ಕೊಡಲಿಲ್ಲ. ಹಿಂದೂ ವಿರೋಧಿ ಕೆಲಸ ಮಾಡುವವರ ಪಾಲಿಗೆ ಯತ್ನಾಳ್ ಸಿಂಹಸ್ವಪ್ನವಾಗಿದ್ದಾರೆ. ಬರೀ ಉತ್ತರ ಕರ್ನಾಟಕಕ್ಕಷ್ಟೇ ಹಿಂದೂ ಹುಲಿ ಅಲ್ಲ, ಸಮಗ್ರ ಕರ್ನಾಟಕ ಹಿಂದೂ ಹುಲಿ ಯತ್ನಾಳ.
- ಬಿ.ಪಿ.ಹರೀಶ, ಹಬಿಜೆಪಿ ಶಾಸಕ, ಹರಿಹರ ಕ್ಷೇತ್ರ.- - - -25ಕೆಡಿವಿಜಿ21: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾರ್ಯಕ್ರಮ ಉದ್ಘಾಟಿಸಿದರು.