ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯವರು ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಕಳೆದ ಕೆಡಿಪಿ ಸಭೆಯಲ್ಲಿ ಹೇಳಿದಾಗ್ಯೂ ಈವರೆಗೂ ತೆರವುಗೊಳಸದಿರುವುದರ ಕುರಿತು ನಗರಸಭೆ ಪೌರಾಯುಕ್ತ ಗೋಪಾಲ ಕಾಶೆಯವರನ್ನು ಸಚಿವ ಆರ್.ಬಿ.ತಿಮ್ಮಾಪೂರ ತೀವ್ರ ತರಾಟೆಗೆ ತೆಗೆದು ಕೊಂಡರು.ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ದ್ವಿತೀಯ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಧೋಳ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅತಿಕ್ರಮಣ ಮಾಡಿಕೊಂಡು ಕೆಲವರು ಮನೆ, ಗುಡಿಸಲುಗಳನ್ನು ಇನ್ನೂ ಕೆಲವರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸುವಂತೆ ಕಳೆದ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದರೂ ಕೂಡಾ ಅಧಿಕಾರಿಗಳು ಈವರೆಗೂ ತೆರವುಗೊಳಿಸಿರುವುದಿಲ್ಲ. ಒಂದು ತಿಂಗಳೊಳಗಾಗಿ ತೆರವುಗೊಳಿಸಿ ಕೆರೆಯ ಸುತ್ತಲೂ ಬೇಲಿ ಹಾಕಿ ಸರ್ಕಾರದ ಆಸ್ತಿಯನ್ನು ಉಳಸಿಕೊಳ್ಳಬೇಕೆಂದ ಸಚಿವರು, ಅರಣ್ಯ ಇಲಾಖೆಗೆ ಸಂಬಂಧಿಸಿದ ಜಮೀನುಗಳನ್ನು ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಕುರಿತು ಸಚಿವರು ಪ್ರಗತಿ ಪರಿಶೀಲನೆ ನಡೆಸಿ, ಕೆಲವು ಇಲಾಖೆಗಳ ಅಧಿಕಾರಿಗಳು ಕೇವಲ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಇಲಾಖೆಗಳು ನಿದ್ರಾವಸ್ಥೆಯಲ್ಲಿವೆ. ಕೆಲವು ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಸಾರ್ವಜನಿಕರಿಂದ ನನಗೆ ಪ್ರತಿದಿನ ನೂರಾರು ದೂರುಗಳು ಬರುತ್ತಲಿವೆ. ಇದರಿಂದ ನನಗೆ ತೀವ್ರ ನೋವಾಗಿದ್ದು, ಹೀಗಾದರೆ ನಾನು ಜನರಿಗೆ ಏನಂತಾ ಉತ್ತರ ನೀಡಲಿ? ಸಾರ್ವಜನಿಕರಿಂದ ದೂರುಗಳು ಮುಂದುವರಿದರೆ ನಾನು ಅನಿವಾರ್ಯವಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಚಿವರು ಕಠೋರವಾಗಿ ಹೇಳಿದರು. ಇನ್ನೂ ಕೆಲ ಅಧಿಕಾರಿಗಳು ಉಡಾಪೆ ಉತ್ತರಗಳನ್ನು ಕೊಟ್ಟು ತಮ್ಮ ಬೇಜವಾಬ್ದಾರಿ ತೋರಿಸುತ್ತಿದ್ದಾರೆ. ಅಂತವರು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡದೆ ಬೇರೆಡೆ ಹೋಗಬೇಕೆಂದು ನೇರವಾಗಿ ಹೇಳಿದರು.ಈಗ ನಡೆದ ಕೆಡಿಪಿ ಸಭೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಮುಂದಿನ ಕೆಡಿಪಿ ಸಭೆಯಲ್ಲಿ ವರದಿ ಒಪ್ಪಿಸಬೇಕು. ಸರ್ಕಾರದ ಯಾವುದೇ ಯೋಜನೆಗಳು ಇರಲಿ ಅವುಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವಂತ ಕೆಲಸ ನಡೆಯಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಸೇರಿಕೊಂಡು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆ ಕರೆದು ಗ್ರಾಮಸ್ಥರ ಬೇಕು- ಬೇಡಿಕೆಗಳನ್ನು ಆಲಿಸಿ ಅವರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ನಗರದಲ್ಲಿ ಟ್ರಾಫಿಕ್ ನಿಯಂತ್ರಣ ಮಾಡಬೇಕು ಮತ್ತು ಕಳ್ಳತನ ಪ್ರಕರಣಗಳು ಹೆಚ್ಚಾಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಓ ಶಶಿಧರ ಕುರೇರ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಜಮಖಂಡಿ ಎ.ಸಿ ಶ್ವೇತಾ ಬೀಡಿಕರ, ತಾಪಂ ಆಡಳಿತಾಧಿಕಾರಿ ಸಿದ್ರಾಮ ಉಕ್ಕಲಿ, ತಹಸೀಲ್ದಾರ ಮಹಾದೇವ ಸನಮುರಿ, ತಾಪಂ ಇಓ ಉಮೇಶ ಸಿದ್ನಾಳ, ಸಿಪಿಐ ಮಹಾದೇವ ಶಿರಹಟ್ಟಿ, ರಾಜು ವಾರದ, ಕೆಡಿಪಿ ಸದಸ್ಯರು ಮತ್ತು ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.-------
ಕೋಟ್..ಸರ್ಕಾರದ ಯಾವುದೇ ಯೋಜನೆಗಳು ಇರಲಿ ಅವುಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವಂತ ಕೆಲಸ ನಡೆಯಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಸೇರಿಕೊಂಡು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆ ಕರೆದು ಗ್ರಾಮಸ್ಥರ ಬೇಕು- ಬೇಡಿಕೆಗಳನ್ನು ಆಲಿಸಿ ಅವರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು.
- ಆರ್.ಬಿ.ತಿಮ್ಮಾಪೂರ, ಅಬಕಾರಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಾಗಲಕೋಟೆ