ಭರ್ತಿಯಾದ ಆನಿಕೆರೆ, ಸದ್ಯಕ್ಕಿಲ್ಲ ಕುಡಿವ ನೀರಿನ ಕೊರತೆ

| Published : Aug 04 2024, 01:18 AM IST

ಸಾರಾಂಶ

ನೂರಾರು ಎಕರೆ ತೋಟ ಕೃಷಿಭೂಮಿಗೆ ನೀರು, ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ೧೧೯ ಎಕರೆ ವಿಸ್ತೀರ್ಣದ ಆನಿಕೆರೆ ತುಂಬಿ ಕೋಡಿ ಹರಿಯುತ್ತಿದೆ. ಶಾಸಕ ಶ್ರೀನಿವಾಸ ಮಾನೆ ಬಾಗಿನ ಅರ್ಪಿಸಿದ್ದಾರೆ. ಬರುವ ಫೆಬ್ರವರಿವರೆಗೆ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ನೂರಾರು ಎಕರೆ ತೋಟ ಕೃಷಿಭೂಮಿಗೆ ನೀರು, ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ೧೧೯ ಎಕರೆ ವಿಸ್ತೀರ್ಣದ ಆನಿಕೆರೆ ತುಂಬಿ ಕೋಡಿ ಹರಿಯುತ್ತಿದೆ. ಶಾಸಕ ಶ್ರೀನಿವಾಸ ಮಾನೆ ಬಾಗಿನ ಅರ್ಪಿಸಿದ್ದಾರೆ. ಬರುವ ಫೆಬ್ರವರಿವರೆಗೆ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲ.ಕಳೆದ ವರ್ಷ ಮಳೆ ಕೊರತೆಯಿಂದಾಗಿ ನೀರಿಲ್ಲದೆ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿ ಪುರಸಭೆ ನೀರಿಗಾಗಿ ಹರ ಸಾಹಸವನ್ನೇ ಮಾಡಬೇಕಾಯಿತು. ಈ ಬಾರಿ ಹಾನಗಲ್ಲ ಆನಿಕೆರೆಗೆ ಜಲಮೂಲವಾದ ಝಡತಿ ಕಾಲುವೆ ಇರುವ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆ ಸುರಿದು ತುಂಬಿ ಹರಿಯುತ್ತಿದೆ. ಕಳೆದ ಬೇಸಿಗೆಯಲ್ಲಿ ತಾಲೂಕಿನ ನೀರಾವರಿಯ ಜಲಮೂಲವಾದ ಮುಂಡಗೋಡ ತಾಲೂಕಿನಲ್ಲಿರುವ ಧರ್ಮಾ ಜಲಾಶಯದಲ್ಲಿರುವ ರಿಜರ್ವ್‌ ನೀರನ್ನು ಪೊಲೀಸ್‌ ಕಾವಲಿನಲ್ಲಿ ಧರ್ಮಾ ಕಾಲುವೆ ಮೂಲಕ ಆನಿಕೆರೆಗೆ ಹರಿಸಲಾಗಿತ್ತು. ಧರ್ಮಾ ಕಾಲುವೆಯಲ್ಲಿ ಹರಿಸುವಾಗ ರೈತರು ಬಳಸಿಕೊಳ್ಳುವಷ್ಟು ನೀರಿಲ್ಲದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ ಬೇಸಿಗೆಯ ಸಂದರ್ಭದಲ್ಲಿ ಮತ್ತೆ ನೀರಿನ ಕೊರತೆಯಾದಾಗ ಮಳೆಗಾಲದ ಹೊತ್ತಿಗೆ ವರದಾ ನದಿಯಿಂದ ಬಾಳಂಬೀಡ ಏತ ನೀರಾವರಿ ಯೋಜನೆಯ ನೀರನ್ನು ಆನಿಕೆರೆಗೆ ತರಲಾಗಿತ್ತು. ಅಷ್ಟರಲ್ಲಿ ಉತ್ತಮ ಮಳೆ ಆರಂಭವಾಗಿ ಒಂದು ತಿಂಗಳ ನಂತರ ಕೆರೆ ತುಂಬಿದೆ. ರೈತರ ಕೋರಿಕೆ:

ಝಡತಿ ಕಾಲುವೆ ಹಲವು ವರ್ಷಗಳಿಂದ ಕಾಮಗಾರಿ ಆಗಿಲ್ಲ. ಹೂಳು ತುಂಬಿ, ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯಲು ಅನಾನುಕೂಲವಾಗಿದೆ. ಅಲ್ಲದೆ ಈ ಕಾಲುವೆ ಮಾರ್ಗದಲ್ಲಿರುವ ಕೃಷಿ ಭೂಮಿಗೂ ಸಹಕಾರಿ. ಆ ಕಾರಣಕ್ಕೆ ಬರುವ ಬೇಸಿಗೆಯಲ್ಲಿ ಝಡತಿ ಕಾಲುವೆ ಹೂಳೆತ್ತಿ, ಗಿಡ ಗಂಟೆ ತೆಗೆದು ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಿ ಕೊಟ್ಟರೆ ಅದು ರೈತರಿಗೂ ಮಾಡಿದ ಮಹದುಪಕಾರವಾಗುತ್ತದೆ ಎನ್ನುತ್ತಾರೆ.ಏನೇ ಆದರೂ ಆನಿಕೆರೆ ತುಂಬಿದೆ. ಝಡತಿ ಕಾಲುವೆ ಉಪಕಾರ ಮಾಡಿದೆ. ಈ ನೀರಿನ ಸದುಪಯೋಗ ಆಗಬೇಕು. ಮಳೆ ಬೀಳದೆ ನೀರಿಗಾಗಿ ಪರದಾಡುವುದು ತಪ್ಪಲು ಹಿತ ಮಿತ ನೀರು ಬಳಕೆ, ನೀರು ಪೋಲಾಗುವುದನ್ನು ತಪ್ಪಿಸಿ ನೀರು ಉಳಿಸಿ ಸದುಪಯೋಗಕ್ಕೆ ಸಾರ್ವಜನಿಕರು, ಸಂಬಂಧಿಸಿದ ಅಧಿಕಾರಿಗಳು ಪಾಲುದಾರರಾಗಬೇಕು ಎಂಬ ಸತ್ಯವನ್ನು ಅರಿತು ನಡೆಯಬೇಕಾಗಿದೆ.ಆನಿಕೆರೆ ತುಂಬಿರುವುದರಿಂದ ಈ ವರ್ಷ ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆಯಾಗದು. ಧರ್ಮಾ ಜಲಾಶಯದಿಂದ ಹಾನಗಲ್ಲಿಗೆ ಕುಡಿಯುವ ನೀರನ್ನು ಪೈಪ್‌ಲೈನ್ ಮೂಲಕ ತರುವ ಯೋಜನೆ ಜಾರಿಯಲ್ಲಿದೆ. ಈ ಕಾಮಗಾರಿ ಮುಗಿದರೆ ಪಟ್ಟಣಕ್ಕೆ ನೀರಿನ ಸಮಸ್ಯೆಯೇ ಆಗದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.ನಾಲ್ಕು ವರ್ಷಗಳ ಹಿಂದೆ ಝಡತಿ ಕಾಲುವೆ ದುರಸ್ತಿ ಹಾಗೂ ಹೂಳು ತೆಗೆಯುವ ಕಾರ್ಯ ಮಾಡಲಾಗಿದೆ. ಈಗ ಮತ್ತೆ ಹೂಳು ಬಂದಿದೆ ಎಂಬ ವಿಷಯದಲ್ಲಿ ಮಳೆಗಾಲದ ನಂತರ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು. ಕಾಲುವೆಯ ಅಂತಿಮ ಘಟ್ಟದ ವರೆಗೆ ನೀರು ಹರಿಯಲು ಈಗ ಯಾವುದೇ ಸಮಸ್ಯೆ ಇಲ್ಲ ಸಣ್ಣ ನೀರಾವರಿ ಎಂಜಿನಿಯರ್‌ ರಾಘವೇಂದ್ರ ಹೇಳಿದರು.