ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಸ್ಥಳೀಯರಿಗೆ ಕೊಡದೆ ಹೊರಗಿನವರ ನೇಮಕಾತಿ ಮಾಡಿದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ಪ್ರತಿಭಟನೆ ಮಾಡುವುದಾಗಿ ವಕೀಲ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಜೀತ್ ನಾರಾಯಣ್ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಹಾಸನದ ವಿಧಾನಸಭಾ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರುಗಳಾದ ನಮ್ಮ ಮನವಿ ಏನೆಂದರೆ, ಹಾಸನದ ನಗರಾಭಿವೃದ್ಧಿ ಪ್ರಾಧಿಕಾರವು ಹಲವು ವರ್ಷಗಳಿಂದ ಉತ್ತಮ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಈ ಪ್ರಾಧಿಕಾರಕ್ಕೆ ಆಯಾ ಸರ್ಕಾರಗಳು ತಮ್ಮ ಪಕ್ಷದ ಪ್ರಮಾಣಿಕ ಕಾರ್ಯಕರ್ತರನ್ನು ನೇಮಿಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿರುತ್ತದೆ ಎಂದರು.ಈಗಾಗಲೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ೨ ವರ್ಷಗಳು ಕಳೆದಿರುತ್ತದೆ. ಇದುವರೆಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿರುವುದಿಲ್ಲ. ಇದರಿಂದಾಗಿ ಹಾಸನ ನಗರದ ಸರ್ವತಮುಖ ಅಭಿವೃದ್ಧಿ ಕುಂಠಿತವಾಗಿರುತ್ತದೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಹಾಸನದ ಪ್ರಾಧಿಕಾರಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಮುಖಂಡರು ಅಥವಾ ಕಾರ್ಯಕರ್ತರನ್ನು ನೇಮಿಸುವ ಮೂಲಕ ಹಾಸನ ನಗರದ ಅಭಿವೃದ್ಧಿಗೆ ಸಹಕರಿಸಲು ಸರ್ಕಾರವನ್ನು ಒತ್ತಾಯಿಸುತ್ತೇವೆ. ಅಧ್ಯಕ್ಷ ಸ್ಥಾನಕ್ಕೆ ಸ್ಥಳೀಯರನ್ನು ನೇಮಕ ಮಾಡದೆ ಬೇರೆ ಕ್ಷೇತ್ರದ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಅಭಿವೃದ್ಧಿಗೆ ವೃದ್ಧಿಗೆ ಕುಂಠಿತವಾಗುತ್ತದೆ. ಹಾಸನ ವಿಧಾನ ಕ್ಷೇತ್ರಕ್ಕೆ ಸ್ಥಳೀಯ ಪ್ರಮುಖರನ್ನು ಅಥವಾ ಕಾರ್ಯಕರ್ತರನ್ನು ಒಗ್ಗೂಡಿಸಲು ಸ್ಥಳೀಯರಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಪಕ್ಷಕ್ಕೆ ಸಂಘಟನೆಗೆ ಅನುಕೂಲವಾಗುತ್ತದೆ. ಪಕ್ಷಕ್ಕಾಗಿ ದುಡಿದ ಹಲವಾರು ಮುಖಂಡರುಗಳು ಮತ್ತು ಕಾರ್ಯಕರ್ತರು ಸ್ಥಳೀಯರಿದ್ದಾರೆ. ಅಂತಹವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸುವ ಮೂಲಕ ಸ್ಥಳಿಯರನ್ನು ಅಧ್ಯಕ್ಷರನ್ನಗಿ ನೇಮಕ ಮಾಡುವಂತೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳನ್ನು ಈ ಮೂಲಕ ಒತ್ತಾಯಿಸುತ್ತೇವೆ ಎಂದರು. ಒಂದು ವೇಳೆ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆಯನ್ನು ಮೀರಿ ಹೊರಗಿನವರನ್ನು ನೇಮಕಾತಿ ಮಾಡಿದರೆ ನನ್ನಂತಹ ನಿಷ್ಠಾವಂತ ಕಾರ್ಯಕರ್ತರು ಒಕ್ಕೊರಲಿನಿಂದ ವಿರೋಧಿಸುವ ಮೂಲಕ ಪ್ರತಿಭಟನೆ ಮಾಡಲು ಸಿದ್ದರಿರುತ್ತೇವೆ, ಈ ಕಾರಣದಿಂದ ಸ್ಥಳೀಯರನ್ನೆ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಶಿವಕುಮಾರ್, ವಕೀಲೆ ರಂಜಿತಾ ಮಂಜುನಾಥ್, ವಕೀಲ ಮತ್ತು ಕಟ್ಟಾಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ಕಾಂಗ್ರೆಸ್ ಮುಖಂಡ ಕೆ.ಟಿ. ರಾಜು, ಕಟ್ಟಾಐ ಹೋಬಳಿಯ ಸುರೇಶ್ ಇತರರು ಉಪಸ್ಥಿತರಿದ್ದರು.