ಮನೆಗಳ ಮಹಾಮನೆಯಾದರೆ ಸುಖ ಸಮೃದ್ಧಿ ನೆಲೆಯೂರಲು ಸಾಧ್ಯ-ಸ್ವಾಮೀಜಿ

| Published : Dec 26 2024, 01:02 AM IST

ಮನೆಗಳ ಮಹಾಮನೆಯಾದರೆ ಸುಖ ಸಮೃದ್ಧಿ ನೆಲೆಯೂರಲು ಸಾಧ್ಯ-ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಃಕರಣ ತುಂಬಿದ ನಡೆ ನುಡಿಯೊಂದಿಗೆ ಸಂಭ್ರಮದ ಮನಸ್ಸಿನಿಂದ ನಮ್ಮ ಮನೆಗಳು ಮಹಾಮನೆಯಾದರೆ ಸುಖ ಸಮೃದ್ಧಿಯ ನೆಲೆಯಾಗಲು ಸಾಧ್ಯ ಎಂದು ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವಮಹಾಸ್ವಾಮಿಗಳು ತಿಳಿಸಿದರು.

ಹಾನಗಲ್ಲ: ಅಂತಃಕರಣ ತುಂಬಿದ ನಡೆ ನುಡಿಯೊಂದಿಗೆ ಸಂಭ್ರಮದ ಮನಸ್ಸಿನಿಂದ ನಮ್ಮ ಮನೆಗಳು ಮಹಾಮನೆಯಾದರೆ ಸುಖ ಸಮೃದ್ಧಿಯ ನೆಲೆಯಾಗಲು ಸಾಧ್ಯ ಎಂದು ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವಮಹಾಸ್ವಾಮಿಗಳು ತಿಳಿಸಿದರು.

ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಕ್ಕನಬಳಗದ ಸಹಯೋಗದಲ್ಲಿ ಸಾವಿತ್ರಾ ನಾಗಪ್ಪ ಚೂರಿ ಅವರ ಮನೆಯಂಗಳದಲ್ಲಿ ಆಯೋಜಿಸಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ವಚನಗಳೆಂದರೆ ಬದುಕಿಗಾಗಿ ಬೇಕಾಗುವ ಜ್ಞಾನ ಪ್ರಸಾರದ ಚಿಂತನೆಗಳಾಗಿವೆ. ಶರಣರ ಬದುಕು ಬರಹ ಒಂದೇ ಆಗಿತ್ತು. ಮನೆಗಳು ಸಾಮರಸ್ಯದ ಮೂಲಕ ಸಂತಸದಿಂದಿರಬೇಕಾಗಿದೆ. ಮಕ್ಕಳಿಗೆ ವಚನಗಳ ಸಾರದ ಅರಿವು ಮಾಡಿಕೊಡಲು ಎಲ್ಲರೂ ಮುಂದಾಗಬೇಕು. ನಾಳೆಗಾಗಿ ಇಂದೇ ಯೋಚಿಸಿ ಯೋಜಿಸಿ ಸುಸಂಸ್ಕೃತ ಜೀವನಕ್ಕೆ ಬೇಕಾಗುವ ಚಿಂತನೆಗಳನ್ನು ಒಳಗೊಳ್ಳುವಂತಾಗಲಿ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿರಾಡಂಬರದ ವೈಚಾರಿಕತೆ ಈಗ ಬೇಕಾಗಿದೆ. ಅದನ್ನು ಶರಣರು ವಚನ ಸಾಹಿತ್ಯದ ಮೂಲಕ ಹೇರಳವಾಗಿ ನೀಡಿದ್ದಾರೆ. ಪ್ರಗತಿಪರ ಚಿಂತನೆಗಳ ಮೂಲಕ ವಚನಗಳು ನಮ್ಮ ಮನೆ ಮನಸ್ಸಿನ ಹಿತಕ್ಕೆ ತಕ್ಕುದಾಗಿವೆ. ಕಾಯಕ ಶ್ರೇಷ್ಠತೆ ಇಲ್ಲಿನ ಯಶಸ್ಸು. ಸಮಾನತೆ ಕಟ್ಟಿ ಕೊಟ್ಟ ಕಲ್ಯಾಣದ ಅಂದಿನ ನಡೆ ಎಲ್ಲ ಕಾಲಕ್ಕೂ ಸಲ್ಲುವ ಸಮಾನತೆಯ ಸ್ವೀಕಾರಾರ್ಹ ಸಂದೇಶಗಳಾಗಿವೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ಉತ್ತಮ ಸಂಸ್ಕಾರವೇ ನಮ್ಮ ಮನ ಮನೆಗಳ ಬೆಳಕಾಗಿದೆ. ಶರಣರ ಚಿಂತನೆಗಳು ಆಡಂಬರವಿಲ್ಲದೆ ನಮ್ಮ ಮನೆ ಮನಸ್ಸನ್ನು ಅಂದಗೊಳಿಸುವ ಶಕ್ತಿ ಸಂದೇಶಗಳನ್ನು ಹೊಂದಿವೆ. ಮಕ್ಕಳಿಗೆ ಉತ್ತಮ ಜೀವನ ಅರಿಕೆ ಮಾಡಲು ಶರಣ ಸಂಗಮಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಇದನ್ನು ಅರಿತು ನಮ್ಮೆಲ್ಲ ಮನೆಗಳು ಮಹಾಮನೆಯಾಗಲು ಮುಂದಾಗೋಣ ಎಂದರು.ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳನ್ನು ಉತ್ತಮ ಶರಣ ಚಿಂತನೆ ಮೂಲಕ ಬೆಳೆಸುವ ಪ್ರಯತ್ನ ಎಲ್ಲ ಮನೆಗಳಿಂದ ನಡೆಯಲಿ ಎಂದರು.ಡಾ. ಅಕ್ಷತಾ ಮಲಗುಂದ ಆರೋಗ್ಯವಂತ ಮನೆ ಮನಸ್ಸು ಕುರಿತು ಮಾತನಾಡಿದರು. ಶ್ರೇಯಾ ಚೂರಿ ಪ್ರಾಸ್ತಾವಿಕ ಮಾತನಾಡಿದರು. ಶಿವಮ್ಮ ಚೂರಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ನಿರಂಜನ ಗುಡಿ, ಅಕ್ಕನಬಳಗದ ಅಧ್ಯಕ್ಷೆ ದೀಪಾ ವಿರುಪಣ್ಣನವರ ಅತಿಥಿಗಳಾಗಿದ್ದರು. ಗೌರಮ್ಮ ಬೆಲ್ಲದ ಶರಣ ಗೀತೆ ಹಾಡಿದರು.ಶ್ರೇಯಾ ಚೂರಿ, ನಂದಿಶ ಚೂರಿ, ನಾಗರಾಜ ಹಾವೇರಿ, ರಾಘವೇಂದ್ರ ಹಾವೇರಿ, ಅನ್ವಿತಾ ಕಾಂತರಾಜ, ಸ್ಪಂದನಾ ನಾಯಕ, ಸಹನಾ ಚಕ್ಕಿ, ನಯನಾ ಕುಂಚೂರ, ಪುನರ್ವಿ ಸಿಂಗಾಪೂರ, ಶ್ರಾವಣಿ ಕೊಟ್ರಣ್ಣನವರ, ಸಾತ್ವಿಕ ಬಳ್ಳಾರಿ, ಆರ್ಯನ್ ಬಳ್ಳಾರಿ ವಚನ ನೃತ್ಯ, ಭರತ ನಾಟ್ಯ, ವಚನ ಗಾಯನ, ವಚನ ರೂಪಕ ಪ್ರದರ್ಶಿಸಿದರು.ಭುವನೇಶ್ವರಿ ಪ್ರಾರ್ಥನೆ ಹಾಡಿದರು. ಸಾವಿತ್ರಿ ಚೂರಿ ಸ್ವಾಗತಿಸಿದರು. ಸಿಆರ್‌ಪಿ ನಾಗಪ್ಪ ಚೂರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಎಸ್.ಪಿ.ಚಿಲ್ಲೂರಮಠ ವಂದಿಸಿದರು.