ಸಾರಾಂಶ
ಗಂಗಾವತಿ:
ಕನ್ನಡದ ನೆಲ, ಜಲ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೋರಾಟಕ್ಕೆ ನಿಲ್ಲಬೇಕೆಂದು 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಲಿಂಗಾರಡ್ಡಿ ಆಲೂರು ಹೇಳಿದರು.ಮಾ. 27,28ರಂದು ಗಂಗಾವತಿಯಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಕನ್ನಡಪ್ರಭಕ್ಕೆ ವಿಶೇಷ ಸಂದರ್ಶನ ನೀಡಿರುವ ಅವರು, ಗಡಿನಾಡು ಪ್ರದೇಶದಲ್ಲಿ ಕನ್ನಡಿಗರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡಿಗರಾದ ನಾವು ಎದೆಗುಂದದೆ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಹೋರಾಟ ಮಾಡಬೇಕಾಗಿದೆ ಎಂದರು.
ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಸರ್ಕಾರ ಕನ್ನಡ ಭಾಷೆಗಿಂತ ಆಂಗ್ಲ ಮಾಧ್ಯಮಕ್ಕೆ ಪ್ರಾಧಾನ್ಯತೆ ನೀಡುತ್ತಿರುವುದು ದುರಂತ ಎಂದಿರುವ ಅವರು, ಕೊಪ್ಪಳ ಜಿಲ್ಲೆ ಎರಡು ಅಖಿಲ ಭಾರತ ಸಮ್ಮೇಳನ ಕಂಡಿದೆ. ನಂತರದಲ್ಲಿ ಸಾಹಿತ್ಯದ ಸುವರ್ಣ ಕಾಲವೇ ಆರಂಭವಾಯಿತು. ನೂರಾರು ಸಂಖ್ಯೆಯ ಹೊಸ ಕವಿಗಳು, ಕತೆಗಾರರು, ಕಾದಂಬರಿಕಾರರು ಬರೆಯುತ್ತಿದ್ದಾರೆ. ವಾರಕ್ಕೆ ಒಂದಾದರೂ ಪುಸ್ತಕ ಬಿಡುಗಡೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯೇ ಸರಿ. ಸಿದ್ದಯ್ಯ ಪುರಾಣಿಕರಿಂದ ಹಿಡಿದು ಈ ವರೆಗೆ ನೂರಾರು ಸಂಖ್ಯೆಯ ಹಿರಿ-ಕಿರಿಯ ಸಾಹಿತಿಗಳೆಲ್ಲ ಜಿಲ್ಲೆಯ ಸಾಹಿತ್ಯ ಸರಸ್ವತಿಯ ಸೇವೆ ಮಾಡಿದ್ದಾರೆ. ದಾಸ ಸಾಹಿತ್ಯ, ವಚನ ಸಾಹಿತ್ಯವೂ ವಿಪುಲವಾಗಿ ಬೆಳೆದಿವೆ ಎಂದರು.ಕನ್ನಡದ ನೆಲದಲ್ಲಿ ಕನ್ನಡಿಗನೇ ಪರಕೀಯನಾಗುತ್ತಿದ್ದಾನೆ. ಹೊರ ರಾಜ್ಯಗಳಿಂದ ಬಂದ ಲಕ್ಷಾಂತರ ಬಂಧುಗಳು ಕೃಷಿ, ವ್ಯಾಪಾರ, ಕೈಗಾರಿಕೆ, ರಾಜಕೀಯ, ಶಿಕ್ಷಣ, ಇನ್ನಿತರ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಬಂದ ಅನ್ಯ ಭಾಷೆಯ ಸಹೋದರರ ಬಗ್ಗೆ ಮತ್ತು ಅವರ ಶ್ರಮ ಸಂಸ್ಕೃತಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಮಮ್ಮಿ, ಡ್ಯಾಡಿ ಸಂಸ್ಕೃತಿಯತ್ತ ವಾಲುತ್ತಿರುವ ನಾವು ಇಂಗ್ಲಿಷ್ ಸಂಸ್ಕೃತಿಗೆ ಮೊರೆ ಹೋಗಿದ್ದೇವೆ. ಇಂಗ್ಲಿಷ್ ಅನ್ನ ಕೊಡುವ ಭಾಷೆಯಾಗಲಿ, ಕನ್ನಡ ಜೀವನದ ಉಸಿರಿನ ಭಾಷೆಯಾಗಲಿ. ಕಿಟಕಿಗಳಿಂದ ಬರುವ ಇಂಗ್ಲಿಷ್, ತೆಲುಗು, ತಮಿಳು, ಉರ್ದು, ಮಲಯಾಳಂ ನಂತಹ ಭಾಷೆಗಳ ಗಾಳಿ-ಬೆಳಕನ್ನು ಆಸ್ವಾಧಿಸೋಣ. ಮುಂಭಾಗಲಿನಿಂದ ಬರುವ ಕನ್ನಡವನ್ನು ಆರಾಧಿಸೋಣ, ಪ್ರೀತಿಸೋಣ, ಉಸಿರಾಗಿಸಿಕೊಳ್ಳೋಣ ಎಂದು ಹೇಳಿದ್ದಾರೆ.
ಕಿರು ಪರಿಚಯ:ಗಂಗಾವತಿ ತಾಲೂಕಿನ ಮಲ್ಲಾಪುರದ ಲಿಂಗಾರೆಡ್ಡಿ ಆಲೂರು ಅವರು ಎಂಎ. ಬಿ.ಇಡಿ ಪದವೀಧರರು. ಪ್ರಸ್ತುತ ಕೇಸರಹಟ್ಟಿ ಗ್ರಾಮದ ಜಿಜಿಡಿಇ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾವಯವ, ಕೃಷಿ ಸುದ್ದಿ, ರಡ್ಡಿ ಬಳಗ ಮಾಸ ಪತ್ರಿಕೆಗಳ ಸಂಪಾದರಾಗಿರುವ ಅವರು ಅಂಕಣಕಾರರೂ ಆಗಿದ್ದಾರೆ. ಇವರು ಹಲವಾರು ಕೃತಿಗಳನ್ನು ಹೊರಗೆ ತಂದಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ-ಪುರಸ್ಕಾರ ಲಭಿಸಿವೆ.