ಸಾರಾಂಶ
- ಜಗಳೂರು ಪಪಂ ಅಧ್ಯಕ್ಷ ನವೀನ್ ಕುಮಾರ್ ಹೇಳಿಕೆ
- - -ಜಗಳೂರು: ಶರಾವತಿ ನದಿಗೆ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದಲ್ಲಿ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಇತರೇ ಜಿಲ್ಲೆಗಳ ಜನತೆಗೂ ಕುಡಿಯುವ ನೀರಿಗೆ ಅನುಕೂಲ ಆಗಲಿದೆ ಎಂದು ಜಗಳೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್ ಹೇಳಿದರು.
ಪಟ್ಟಣ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿಗೆ ನೀರು ಹರಿಸಲು ಲಿಂಗನಮಕ್ಕಿ ಜಲಾಶಯದಿಂದ ತುಂಗಾ ಡ್ಯಾಂಗೆ ನೀರನ್ನು ಹರಿಸಬೇಕು. ಅನಂತರ ಭದ್ರಾ ಜಲಾಶಯಕ್ಕೆ ತುಂಗಾ ನೀರು ಹರಿಸಿ, ಭದ್ರಾ ಮೇಲ್ಡಂಡೆ ಯೋಜನೆಯ ಅಡಿಯಲ್ಲಿ ಹಿರಿಯೂರಿನ ವಾಣಿವಿಲಾಸಸಾಗರ ಜಲಾಶಯಕ್ಕೆ ಗುರುತ್ವಾಕರ್ಷಣ ಬಲದಿಂದ ನೀರನ್ನು ಹರಿಸಬಹುದು ಎಂದು ತಜ್ಞರು ತಿಳಿಸಿದ್ದರು. ವಿ.ವಿ.ಸಾಗರ ಡ್ಯಾಂದಿಂದ ಬೆಂಗಳೂರು ನಗರಕ್ಕೆ ಗುರುತ್ವಾಕರ್ಷಣ ಶಕ್ತಿಯ ಮೂಲಕ ನೀರನ್ನು ಪಡೆದುಕೊಳ್ಳಬಹುದು ಎಂದಿದ್ದಾಗಿ ತಿಳಿಸಿದರು.ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರಿಗಾಗಿ ೧೦ ಟಿಎಂಸಿ ನೀರು ಹರಿಸಿದರೆ, ದಾವಣಗೆರೆಗೆ ೬ ರಿಂದ ೭ ಟಿಎಂಸಿ ನೀರು ಸಿಗಲಿದೆ. ಉಳಿದ ನೀರನ್ನು ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಬಳಸಬಹುದು. ಇದಲ್ಲದೇ ವಿ.ವಿ.ಸಾಗರ ಡ್ಯಾಂಗೆ ನೀರುಹರಿಸಿ, ಮಾರಿಕಣಿವೆ ಮೂಲಕ ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಹರಿಸಬಹುದು ಎಂದರು.
ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಈ ಸಂಬಂಧ ಮನವಿ ಸಲ್ಲಿಸಲಾಗಿತ್ತು. 2019 ರಲ್ಲಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ.ಕಲ್ಲೇರುದ್ರೇಶ್ ಅವರೊಂದಿಗೆ ಚಿತ್ರದುರ್ಗ, ದಾವಣಗೆರೆ ಅವಿಭಾಜ್ಯ ಜಿಲ್ಲೆಗಳ ರೈತರೀಂದಲೂ ಮನವಿ ಸಲ್ಲಿಸಲಾಗಿತ್ತು. ಈ ಯೋಜನೆ ಸಾಧ್ಯವಾಗಬಲ್ಲದು ಎಂಬುದಕ್ಕೆ ಭದ್ರಾ ಮೇಲ್ದಂಡೆ ಯೋಜನೆ, 22 ಕೆರೆಗಳ ನೀರಿನ ಯೋಜನೆಗಳು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೇ ಸಾಕ್ಷಿ ಎಂದರು.ಈ ನಿಟ್ಟಿನಲ್ಲಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಸ್ಥಳೀಯ ಸಂಸ್ಥೆಯಗಳ ಅಧ್ಯಕ್ಷರು, ಸದಸ್ಯರ ನಿಯೋಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಸಚಿವರನ್ನು ಭೇಟಿಯಾಗಿ, ಯೋಜನೆ ಜಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭ ಪಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕಾಯಿ ರೇವಣಸಿದ್ದಪ್ಪ, ಜೆಡಿಎಸ್ ಮುಖಂಡರಾದ ಉಸ್ಮಾನ್ ಅಲಿ, ಯುವ ಬಿಜೆಪಿ ಮುಖಂಡರಾದ ಓಬಳೇಶ್, ಜಯರಾಜ್ ಇದ್ದರು.- - -
-01ಜೆ.ಜಿ.ಎಲ್.ಆರ್.3.ಜೆಪಿಜಿ:ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ಪಪಂ ಅಧ್ಯಕ್ಷ ನವೀನ್ ಕುಮಾರ್ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು.