ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ: ಜೆರಾಲ್ಡ್ ಡಿಸೋಜಾ

| Published : Feb 26 2025, 01:03 AM IST

ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ: ಜೆರಾಲ್ಡ್ ಡಿಸೋಜಾ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಒಬ್ಬರಿಗೊಬ್ಬರು ಸಹಬಾಳ್ವೆ ಮಾಡುವಂತೆ ಪರಿಸರದ ಪ್ರೀತಿಯೂ ಬೇಕು. ನಮ್ಮ ನೀರು ಭೂಮಿ ಪರಿಸರ ಉಳಿಯದ್ದಿದ್ದರೆ ಮನುಕುಲವೇ ಉಳಿಯಲು ಸಾಧ್ಯವಿಲ್ಲ. ಆರೋಗ್ಯ ಮೊದಲ ಆದ್ಯತೆ. ಅದಕ್ಕಾಗಿ ಈ ಪರಿಸರದ ಉಳಿವಿನ ಅಗತ್ಯವಿದೆ.

ಹಾನಗಲ್ಲ: ಭೂಮಿಗೆ ವಿಷ ಹಾಕುವುದು ಸಾಕು. ನಿಸರ್ಗ ಉಳಿಸಿ ನಾವೂ ಉಳಿಯೋಣ. ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ಜೆರಾಲ್ಡ್ ಡಿಸೋಜಾ ತಿಳಿಸಿದರು.ಇಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಹವಾಮಾನ ವೈಪರಿತ್ಯ ಹಾಗೂ ನಮ್ಮ ಭೂಮಿ ನೀರು ಉಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ಒಬ್ಬರಿಗೊಬ್ಬರು ಸಹಬಾಳ್ವೆ ಮಾಡುವಂತೆ ಪರಿಸರದ ಪ್ರೀತಿಯೂ ಬೇಕು. ನಮ್ಮ ನೀರು ಭೂಮಿ ಪರಿಸರ ಉಳಿಯದ್ದಿದ್ದರೆ ಮನುಕುಲವೇ ಉಳಿಯಲು ಸಾಧ್ಯವಿಲ್ಲ. ಆರೋಗ್ಯ ಮೊದಲ ಆದ್ಯತೆ. ಅದಕ್ಕಾಗಿ ಈ ಪರಿಸರದ ಉಳಿವಿನ ಅಗತ್ಯವಿದೆ ಎಂದರು.

ಭೂಮಿಗೆ ವಿಷ ಹಾಕುವುದನ್ನು ನಿಲ್ಲಿಸೋಣ. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸೋಣ. ರಾಸಾಯನಿಕ ಬಳಕೆಯಿಂದ ಭೂಮಿ ಹಾಗೂ ಮನುಷ್ಯನ ಆರೋಗ್ಯವೂ ಹಾಳಾಗುತ್ತಿದೆ. ಇಂಥ ಎಚ್ಚರಿಕೆ ತಪ್ಪಿದರೆ ಮನುಕುಲವೇ ನಾಶವಾದೀತು. ಸುಸ್ಥಿರ ಸಮಾಜದ ಕನಸು ನಮ್ಮದಾಗಲಿ ಎಂದರು.ಪರಿಸರತಜ್ಞ ಮೈಸೂರಿನ ಕೆ. ಮನು ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಭಾರತದ ಕನಸು ನನಸಾಗಲಿ. ಆರೋಗ್ಯ ಭಾರತದ ಅರಿವು ನಮ್ಮೆಲ್ಲರಲ್ಲಿರಲಿ. ಮಕ್ಕಳಿಗೆ ಈಗಲೇ ಇಂತಹ ಜಾಗೃತಿ ಮೂಡಿಸಬೇಕು. ಈ ಭುವಿಯಲ್ಲಿ ಒಳ್ಳೆಯದು ಬಹಳಷ್ಟು ಇದೆ. ಆದರೆ ಕೆಟ್ಟದ್ದನ್ನೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ಗಾಳಿ, ನೀರು, ಆಹಾರ ಎಲ್ಲವೂ ಕಲುಷಿತವಾಗುತ್ತಿದೆ. ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಕಡೆಗೆ ನಮ್ಮ ಗಮನ ಹೆಚ್ಚಾಗಿದೆ. ನಮ್ಮ ಆಹಾರದಲ್ಲಿ ಫೈಬರ್, ಮಿನಿರಲ್ ಕಡಿಮೆಯಾಗುತ್ತಿದೆ. ಈಗ ಎಚ್ಚರಗೊಳ್ಳದಿದ್ದರೆ ನಾಳೆಗಳು ನಮ್ಮ ಪಾಲಿನ ಬೆಂಕಿ ಬರಡು ಭೂಮಿಯಾಗಲಿದೆ ಎಂದರು.ಲೋಹಿತ್ ಕಾಟಣ್ಣನವರ ಸ್ವಾಗತಿಸಿದರು. ಹನ್ಮಂತ ಪೂಜಾರ ಸಂವಿಧಾನದ ಪ್ರಸ್ತಾವನೆ ಮಾಡಿದರು. ಫೀರಪ್ಪ ಶಿರ್ಶಿ ನಿರೂಪಿಸಿದರು. ಹೊನ್ನಮ್ಮ ವೈ.ಎಸ್. ವಂದಿಸಿದರು. ಪೊಲೀಸ್‌ ಗಸ್ತು ಹೆಚ್ಚಳಕ್ಕೆ ಮನವಿ

ಹಾವೇರಿ: ಇಲ್ಲಿನ ವಿದ್ಯಾನಗರದ ಪಶ್ಚಿಮ ಬಡಾವಣೆ, ಎಲ್‌ಐಸಿ ಆಫೀಸ್ ಹಿಂಭಾಗದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೀಗಾಗಿ ಭಯದ ವಾತಾವರಣದಲ್ಲೇ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯ ನಿವಾಸಿಗಳು ಶಹರ ಸಿಪಿಐ ಹಾಗೂ ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.ಮುಸ್ಸಂಜೆ ಹಾಗೂ ಹಗಲು ಹೊತ್ತಿನಲ್ಲೇ ಈ ಭಾಗದ ಜನತೆ, ಮಹಿಳೆಯರು, ವೃದ್ಧರು ಓಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಸರಗಳ್ಳತನ, ಮನೆ ಕಳ್ಳತನ ಪ್ರಕರಣಗಳು ನಡೆದಿದ್ದು, ಹಗಲಿನಲ್ಲೂ ಮನೆಬಾಗಿಲು ತೆರೆಯಲು ಸಹ ಆತಂಕ ಪಡುವಂತಾಗಿದೆ. ಪೊಲೀಸ್ ಸಿಬ್ಬಂದಿಗೆ ಅನೇಕ ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಪರಿಸ್ಥಿತಿ ಸುಧಾರಿಸಿಲ್ಲ. ಕಾರಣ ಜನತೆಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಈ ಭಾಗದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ, ಕಳ್ಳತನ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ.