ಮಕ್ಕಳಿಗೆ ತಿಳವಳಿಕೆ ನೀಡಿದರೆ ನೇಹಾ, ಅಂಜಲಿ ಹತ್ಯೆ ಘಟನೆ ಮರುಕಳಿಸಲ್ಲ

| Published : Jun 01 2024, 12:46 AM IST

ಮಕ್ಕಳಿಗೆ ತಿಳವಳಿಕೆ ನೀಡಿದರೆ ನೇಹಾ, ಅಂಜಲಿ ಹತ್ಯೆ ಘಟನೆ ಮರುಕಳಿಸಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್‌ ಇಲಾಖೆ ಚೆನ್ನಮ್ಮ ಪಡೆ ರಚಿಸಿದ್ದು, ಎಲ್ಲಿಯಾದರೂ ಮಹಿಳೆಯರಿಗೆ ತೊಂದರೆಯಾಗುತ್ತಿದ್ದರೆ 112 ಸಂಖ್ಯೆಗೆ ಕರೆ ಮಾಡಿದ 5 ನಿಮಿಷದೊಳಗೆ ಸ್ಥಳಕ್ಕೆ ಆಗಮಿಸಿ ತೊಂದರೆ ಪರಿಹರಿಸುವ ಕಾರ್ಯ ಕೈಗೊಳ್ಳಲಿದೆ.

ಹುಬ್ಬಳ್ಳಿ:

ಪಾಲಕರು ಮಕ್ಕಳಿಗೆ ತಿಳವಳಿಕೆ ನೀಡುವ ಕಾರ್ಯವಾದಲ್ಲಿ ಹತ್ಯೆ, ಕೊಲೆಯಂತಹ ಘಟನೆಗಳು ಮರುಕಳಿಸುವುದಿಲ್ಲ. ವಿದ್ಯಾರ್ಥಿಗಳು ಮೊದಲು ಸಾಧನೆಯ ಗುರಿಯಡೆಗೆ ಆಸಕ್ತಿ ಹೊಂದುವಂತೆ ಉಪನಗರ ಠಾಣೆಯ ಪಿಎಸ್‌ಐ ಕವಿತಾ ಮಾಡಗ್ಯಾಳ ಹೇಳಿದರು.ನಗರದ ಮೂರುಸಾವಿರ ಮಠದ ಆವರಣದಲ್ಲಿರುವ ಎಸ್.ಜೆ.ಎಂ.ವಿ. ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ‌ ಎಸ್.ಎಸ್. ಶೆಟ್ಟರ್ ಫೌಂಡೇಶನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಚೆಗೆ ಹುಬ್ಬಳ್ಳಿಯಲ್ಲಿ ಒಂದೇ ತಿಂಗಳಲ್ಲಿ ಇಬ್ಬರು ಮಹಿಳೆಯರ ಹತ್ಯೆ ನಡೆದಿರುವುದು ನೋವಿನ ಸಂಗತಿ. ಇಂತಹ ಘಟನೆಗಳು ಹೇಗೆ?, ಏಕೆ ನಡೆಯುತ್ತವೆ ಎಂಬುದು ತಿಳಿಯದಾಗಿದೆ. ಪೊಲೀಸ್ ಇಲಾಖೆಯಿಂದ ಸಾಕಷ್ಟು ಜಾಗೃತಿ ಕಾರ್ಯ ಮಾಡಲಾಗುತ್ತಿದೆ. ಆದರೆ, ಇತ್ತೀಚೆಗೆ ಅದು ನಿರೀಕ್ಷಿತ ಗುರಿ ತಲುಪುತ್ತಿಲ್ಲ. ಮಕ್ಕಳಿಗೆ ಮತ್ತು ಪಾಲಕರಿಗೆ ಸಂಘ-ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಿದರೆ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆಯಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ತಡೆಯಬಹುದು ಎಂದರು.

ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್‌ ಇಲಾಖೆ ಚೆನ್ನಮ್ಮ ಪಡೆ ರಚಿಸಿದ್ದು, ಎಲ್ಲಿಯಾದರೂ ಮಹಿಳೆಯರಿಗೆ ತೊಂದರೆಯಾಗುತ್ತಿದ್ದರೆ 112 ಸಂಖ್ಯೆಗೆ ಕರೆ ಮಾಡಿದ 5 ನಿಮಿಷದೊಳಗೆ ಸ್ಥಳಕ್ಕೆ ಆಗಮಿಸಿ ತೊಂದರೆ ಪರಿಹರಿಸುವ ಕಾರ್ಯ ಕೈಗೊಳ್ಳಲಿದೆ. ಈ ಕುರಿತು ಈಗಾಗಲೇ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ನಿಮಗೆ ಏನೇ ತೊಂದರೆ ಇರಲಿ ಅದನ್ನು ಪಾಲಕರಿಗೆ, ಶಿಕ್ಷಕರಿಗೆ ಇಲ್ಲವೇ ನಮ್ಮಬಳಿ ಹೇಳಿದರೆ ನೀವಿರುವ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಾಗುವುದು. ಇಂತಹ ಘಟನೆ ನಡೆಯುವ ಪೂರ್ವದಲ್ಲಿ ನಾವೆಲ್ಲರೂ ಎಚ್ಚೆತ್ತುಕೊಳ್ಳುವುದು ಅವಶ್ಯವಾಗಿದೆ ಎಂದರು.

ಪ್ರೀತಿ ಮಾಡುವುದು ತಪ್ಪಲ್ಲ. ಆದರೆ, ಪ್ರೀತಿಯ ಹೆಸರಲ್ಲಿ ಅನ್ಯಮಾರ್ಗದಲ್ಲಿ ಹೋಗುವುದು, ಮೋಸ ಮಾಡುವುದು ತಪ್ಪು. ವೈಯಕ್ತಿಕ ಜಗಳ ಮುಂದುವರಿದು ಸಾವಿರಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕುರಿತು ವಿದ್ಯಾರ್ಥಿಗಳು ಜಾಗೃತಿ ಹೊಂದಿ ಎಂದು ಸಲಹೆ ನೀಡಿದರು.

ಹೈಕೋರ್ಟ್‌ ವಕೀಲೆ ರಂಜಿತಾರೆಡ್ಡಿ ಮಾತನಾಡಿ, ನೇಹಾ ಕೊಲೆ ತಡೆಯಲು ಅಲ್ಲಿಯೇ ಇದ್ದ ಕೆಲವು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಇದ್ದವು. ಆರೋಪಿಯನ್ನು ಹಿಂದಿನಿಂದ ಲಾಕ್‌ ಮಾಡಿ, ಅವಳನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದಿತ್ತು. ಆದರೆ, ಹಾಗಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಲೇಜು ಜೀವನದಲ್ಲಿ ವಿದ್ಯಾಭ್ಯಾಸವಷ್ಟೇ ಮುಖ್ಯವಾಗಿರಬೇಕು. ಪ್ರೀತಿ-ಪ್ರೇಮದ ಹಿಂದೆ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳಬಾರದು. ನಮ್ಮ ಜವಾಬ್ದಾರಿ ಅರಿತು, ಇತರರಿಗೆ ಆದರ್ಶವಾಗಿ ಬದುಕಬೇಕು. ಎಲ್ಲ ಸಮಯದಲ್ಲೂ ಪೊಲೀಸರು, ಪೋಷಕರು ಜತೆಗೆ ನಿಲ್ಲಲು ಸಾಧ್ಯವಿಲ್ಲ. ಆತ್ಮವಿಶ್ವಾಸದಿಂದ ಸಮಸ್ಯೆ ಎದುರಿಸುವುದನ್ನು ಕಲೆತುಕೊಳ್ಳಬೇಕು ಎಂದರು.

ಎಸ್‌.ಎಸ್‌. ಫೌಂಡೇಶನ್‌ ಅಧ್ಯಕ್ಷ ಸಂಕಲ್ಪ ಶೆಟ್ಟರ್‌, ವೇದ ಇಂಟರ್‌ನ್ಯಾಷನಲ್‌ ಸ್ಕೂಲ್‌ ಮುಖ್ಯಸ್ಥೆ ಶ್ರದ್ಧಾ ಶೆಟ್ಟರ್, ಪ್ರಾಚಾರ್ಯ ಎಂ.ಬಿ. ಆಡೂರ, ಶಿಕ್ಷಕರಾದ ಅಣ್ಣಪ್ಪ ಕೂರವರ, ಫೌಂಡೇಶನ್ ಸಂಯೋಜಕ ಪರಮ ಕಿತ್ಲಿ, ಶಂಕರ ಸುಂಕದ, ನಂದೀಶ ವಡ್ಡಟ್ಟಿ, ಅಭಿ, ವಿನೋದ ಬಂಕಾಪುರ, ಮುರುಗೇಶ ಶೆಟ್ಟರ್‌ ಹಾಗೂ ಕಾಲೇಜು ಸಿಬ್ಬಂದಿ ಇದ್ದರು.