ಸಾರಾಂಶ
ಸಂಕೇಶ್ವರ ಪಟ್ಟಣದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮಿಗೆ ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ನೀಡಿ ಅಕ್ಕಿ ಹಾಗೂ ಗೋಧಿ ಸಂಗ್ರಹ ಪರಿಶೀಲಿಸಿದರು. ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಲೋಪದೋಷ ಕಂಡುಬಂದರೇ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಸಚಿವರು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಲೋಪದೋಷ ಕಂಡುಬಂದರೇ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ಪಟ್ಟಣದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮಿಗೆ ದಿಢೀರ್ ಭೇಟಿ ನೀಡಿ ಅಕ್ಕಿ ಹಾಗೂ ಗೋಧಿ ಸಂಗ್ರಹ ಪರಿಶೀಲಿಸಿದರು. ಅಕ್ಕಿ ಚೀಲ ತೂಕದ ಯಂತ್ರದ ಮೇಲೆ ಇಟ್ಟು ತೂಕ ಪರಿಶೀಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸಾರ್ವಜನಿಕರು, ಗ್ರಾಹಕರಲ್ಲಿ ಇನ್ಸ್‌ಪೆಕ್ಟರ್, ಶಿರಸ್ತೇದಾರ್ ಸೇರಿದಂತೆ ಆಹಾರ ಗ್ರಾಹಕ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಹಣ ಪಡೆಯುವುದು ಕಂಡಲ್ಲಿ ಶಿಸ್ತುಕ್ರಮ ಜರುಗಿಸಿ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಡಿತರದಾರರಿಗೆ ಉಚಿತವಾಗಿ ನೀಡುವ ಆಹಾರಧಾನ್ಯವನ್ನು ಸಮರ್ಪಕವಾಗಿ ನೀಡಬೇಕು. ಅಧಿಕಾರಿ, ಸಿಬ್ಬಂದಿಯಿಂದ ಲೋಪದೋಷ, ಗೋದಾಮಿನಲ್ಲಿ, ತಾಲೂಕು ಸೊಸೈಟಿಯವರಿಗೆ, ಪಿಡಿಎಸ್ ಮಾಲೀಕರಿಗೆ ತೊಂದರೆ ಇದ್ದಲ್ಲಿ ಆಯಾ ಭಾಗದ ಸಾರ್ವಜನಿಕರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಹಕಾರ ಸಂಘದವರ ಗಮನಕ್ಕೆ ತಂದರೆ ಕ್ರಮ ಜರುಗಿಸಿ, ಪರಿಹಾರ ಸೂಚಿಸಲಾಗುವುದು ಎಂದರು.ಅಂತ್ಯೋದಯ 68,356, ಬಿಪಿಎಲ್ 10,76,000, ಎಪಿಎಲ್ 20,000 ಕಾರ್ಡುಗಳಿಗೆ ಅರ್ಜಿಗಳು ಬಂದಿದ್ದು, 15 ದಿನಗಳೊಳಗಾಗಿ ಪರಿಶೀಲನೆ ಮಾಡಿ ಹೊಸ ಪಡಿತರ ಚೀಟಿ ವಿತರಿಸಲು ಸೂಚನೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಡಾ.ನಟರಾಜ್, ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ, ವಿಭಾಗ ನಿಯಂತ್ರಕ ಮಾಳಿ, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ರುದ್ರೇಶ್ ಬಿಸಾಗುಪ್ಪಿ, ಉಪ ನಿರ್ದೇಶಕಿ ಸುಶೀಲಮ್ಮ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಪಾಟೀಲ ಇದ್ದರು.