ಕಳಪೆ ಗ್ರಾವೆಲ್‌, ಜಲ್ಲಿ ಹಾಕಿದ್ರೆ ರಸ್ತೆ ಬಾಳಿಕೆ ಬರುತ್ತೇನ್ರಿ?

| Published : Oct 30 2024, 12:32 AM IST

ಕಳಪೆ ಗ್ರಾವೆಲ್‌, ಜಲ್ಲಿ ಹಾಕಿದ್ರೆ ರಸ್ತೆ ಬಾಳಿಕೆ ಬರುತ್ತೇನ್ರಿ?
Share this Article
  • FB
  • TW
  • Linkdin
  • Email

ಸಾರಾಂಶ

ಗುಣಮಟ್ಟದ ಗ್ರಾವೆಲ್, ಜಲ್ಲಿ ಹಾಕಿ ಶಾಶ್ವತವಾಗಿ ಉಳಿಯುವಂತಹ ರಸ್ತೆಗಳ ನಿರ್ಮಿಸಿದರೆ ಮಾತ್ರವೇ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಆದ್ದರಿಂದ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಗುತ್ತಿಗೆದಾರ ಮತ್ತು ಎಂಜಿನಿಯರ್‌ಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ಮಾಡಿದ್ದಾರೆ.

- ಕಾಮಗಾರಿ ಪರಿಶೀಲಿಸಿ ಗುತ್ತಿಗೆದಾರರಿಗೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್‌.ಬಸವಂತಪ್ಪ ತರಾಟೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಗುಣಮಟ್ಟದ ಗ್ರಾವೆಲ್, ಜಲ್ಲಿ ಹಾಕಿ ಶಾಶ್ವತವಾಗಿ ಉಳಿಯುವಂತಹ ರಸ್ತೆಗಳ ನಿರ್ಮಿಸಿದರೆ ಮಾತ್ರವೇ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಆದ್ದರಿಂದ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಗುತ್ತಿಗೆದಾರ ಮತ್ತು ಎಂಜಿನಿಯರ್‌ಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ಮಾಡಿದರು.

ತಾಲೂಕಿನ ಆನಗೋಡು ಮತ್ತು ಹೊಳಲ್ಕೆರೆ ಮಾರ್ಗದ ಆನಗೋಡು ಮತ್ತು ನೇರ್ಲಿಗೆ ಗ್ರಾಮದವರೆಗೆ ಕೈಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆ ಅಗೆದ ಕಳಪೆ ಗುಣಮಟ್ಟದ ಕಸ, ಕಡ್ಡಿ ಮಿಶ್ರಿತ ಮಣ್ಣು ಹಾಕಿ ಪುನಃ ರಸ್ತೆ ನಿರ್ಮಾಣ ಮಾಡುವುದನ್ನು ಕಂಡು ಗರಂ ಆದರು.

ಗುತ್ತಿಗೆದಾರನನ್ನು ಶಾಸಕರು ಸ್ಥಳದಲ್ಲೇ ತರಾಟೆ ತೆಗೆದುಕೊಂಡರು. ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡುವಾಗ ಬೇರೆ ಕಡೆಯಿಂದ ಗುಣಮಟ್ಟದ ಗ್ರಾವೆಲ್, ಜಲ್ಲಿ ತಂದು ಹಾಕಬೇಕು. ಆದರೆ, ನೀವು ಹಳೆಯ ರಸ್ತೆ ಕಿತ್ತು ಹಾಕಿದ ಕಸ-ಕಡ್ಡಿ ಮಿಶ್ರಿತ ಗ್ರಾವೆಲ್, ಜಲ್ಲಿಯನ್ನೇ ಪುನಃ ಹಾಕಿ ರಸ್ತೆ ನಿರ್ಮಿಸಿದರೆ ಎಷ್ಟು ದಿನ ಬಾಳಿಕೆ ಬರುತ್ತದೆ ಎಂದು ಗರಂ ಆದರು.

ಹೀಗೆ ಕಾಮಗಾರಿ ಪೂರ್ಣಗೊಳಿಸಿದರೆ ಕೆಲವೇ ತಿಂಗಳಲ್ಲಿ ರಸ್ತೆ ಹಾಳಾಗುತ್ತದೆ. ರಸ್ತೆ ನಿರ್ವಹಣೆ ಮಾಡುವ ಅವಧಿ ಮೂರು ವರ್ಷಗಳಿರುತ್ತವೆ. 3 ವರ್ಷ ಸರಿಯಾಗಿ ರಸ್ತೆ ನಿರ್ವಹಣೆ ಕಾಲಹರಣ ಮಾಡಿ, ಜನರು ಶಾಸಕರನ್ನು ಹಿಡಿಶಾಪ ಹಾಕುವಂತೆ ಮಾಡ್ತೀರಿ. ಕೆಲಸ ಮಾಡಿದರೆ ಅದು, ಶಾಶ್ವತವಾಗಿ ಉಳಿದು ನಿಮ್ಮನ್ನು ಮತ್ತು ನಮ್ಮನ್ನು ನೆನಸುವಂತೆ ಮಾಡಬೇಕು ಎಂದು ಗುತ್ತಿಗೆದಾರನಿಗೆ ನೀತಿ ಪಾಠ ಮಾಡಿದರು.

ಈ ಮಾರ್ಗ ರಾಜ್ಯ ಹೆದ್ದಾರಿ ಆಗಿದೆ. ಆದ್ದರಿಂದ ನೂರಾರು ವಾಹನಗಳು ಸಂಚರಿಸುತ್ತವೆ. ಗುಣಮಟ್ಟದ ರಸ್ತೆ ನಿರ್ಮಾಣವಾದರೆ ಮಾತ್ರ ಪದೇಪದೇ ರಸ್ತೆ ಹಾಳಾಗುವುದನ್ನು ತಡೆಗಟ್ಟಬಹುದು. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತಾಳದೇ ಈ ರಸ್ತೆಯನ್ನು ಗುಣಮಟ್ಟದ ರಸ್ತೆಯನ್ನಾಗಿಸಲು ಶ್ರಮಿಸಬೇಕೆಂದರು.

- - -

ಬಾಕ್ಸ್‌ * ದೂರುಗಳು ಬಾರದಂತೆ ರಸ್ತೆ ನಿರ್ಮಿಸಿರಸ್ತೆ ಅಕ್ಕಪಕ್ಕ ಜಮೀನುಗಳ ರೈತರು ಜಮೀನಿಗೆ ಪೈಪ್ ಹಾಕಲು ರಸ್ತೆ ಕಟ್ಟಿಂಗ್ ಮಾಡಿದಾಗ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ದುರಸ್ತಿ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಆದರೆ, ಈ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಆಗ ತೆಗೆದ ಗುಂಡಿಗಳು ದೊಡ್ಡದಾಗಿ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತವೆ. ಎಷ್ಟೋ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಕೈಕಾಲು ಮುರಿದುಕೊಂಡು ನೋವಿನಿಂದ ನರಳುತ್ತಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಈ ರಸ್ತೆ ಕಳಪೆ ಕಾಮಗಾರಿ ಎನ್ನುವ ದೂರುಗಳು ಬಾರದಂತೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರ ಮತ್ತು ಎಂಜಿನಿಯರ್ ಹೆಚ್ಚಿನ ಒತ್ತು ನೀಡಬೇಕೆಂದು ಶಾಸಕ ಬಸವಂತಪ್ಪ ಸೂಚನೆ ನೀಡಿದರು.

- - - -28ಕೆಡಿವಿಜಿ33, 34ಃ:

ದಾವಣಗೆರೆ ತಾಲೂಕಿನ ಆನಗೋಡು ಮತ್ತು ನೇರ್ಲಿಗೆ ಗ್ರಾಮದವರೆಗೆ ಕೈಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.